ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಮೇಕೆದಾಟು ಯಾತ್ರೆಗೆ ಯಾರೂ ಬರಲಿಲ್ಲ ಎಂದಿದ್ದಾರೆ ಡಿಕೆಶಿ
March 10, 2025
ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಮೇಕೆದಾಟು ಯಾತ್ರೆಗೆ ಯಾರೂ ಬರಲಿಲ್ಲ ಎಂದಿದ್ದಾರೆ ಡಿಕೆಶಿ
ಬೆಂಗಳೂರು: ಚಿತ್ರರಂಗದವರು ಕಷ್ಟ ಬಂದಾಗ ಸರ್ಕಾರದ ಸಹಾಯ ಕೇಳುತ್ತಾರೆ. ಆದರೆ ಚಿತ್ರೋತ್ಸವದಲ್ಲಿ ಹೆಚ್ಚಿನವರು ಭಾಗಿಯಾಗಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿದ ಹೇಳಿಕೆ ಚರ್ಚೆ ಆಗುತ್ತಿದೆ. ಅವರ ಹೇಳಿಕೆಯನ್ನು ಕೆಲವರು ಖಂಡಿಸಿದ್ದು ಅಂಥವರಿಗೆ ಈಗ ಡಿಕೆಶಿ ತಿರುಗೇಟು ನೀಡಿದ್ದಾರೆ. 16ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ವೇಳೆ ಕನ್ನಡ ಚಿತ್ರರಂಗದವರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದರು. ಅವರ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಮತ್ತೆ ಡಿಕೆ ಶಿವಕುಮಾರ್ ಗುಡುಗಿದ್ದಾರೆ. ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದರು. ಫಿಲ್ಮ್ ಫೆಸ್ಟಿವಲ್ ಉದ್ಘಾಟನೆಯಲ್ಲಿ ಚಿತ್ರರಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಇರುವುದನ್ನು ಅವರು ಖಂಡಿಸಿದರು. ನಿಮ್ಮ ಹೇಳಿಕೆಯಿಂದ ಸಿನಿಮಾದವರು ಬೇಸರಗೊಂಡಿದ್ದಾರಲ್ಲ ಎಂದು ಕೇಳಿದ್ದಕ್ಕೆ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ‘ಸಿನಿಮಾದವರು ಏನು ಬೇಕಾದರೂ ಮಾತನಾಡಿಕೊಳ್ಳಲಿ. ನನಗೆ ಗೊತ್ತಿರುವ ಸತ್ಯವನ್ನು ಹೇಳಿದ್ದೇನೆ. ಅವರು ಪ್ರತಿಭಟನೆ ಮಾಡಲಿ, ಹೋರಾಟ ಮಾಡಲಿ. ನಮ್ಮ ನೀರು, ನಮ್ಮ ಹಕ್ಕು. ಅವರು ಯಾವಾಗಲೂ ನೆಲ, ಜಲದ ವಿಚಾರಕ್ಕೆ ಪಕ್ಷಾತೀತವಾಗಿ ಸಹಕಾರ ನೀಡುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಮೇಕೆದಾಟು ಯಾತ್ರೆಗೆ ಯಾರೂ ಬರಲಿಲ್ಲ’ ಎಂದಿದ್ದಾರೆ ಡಿ.ಕೆ.ಶಿ. ಮೇಕೆದಾಟು ಯಾತ್ರೆಗೆ ಬಂದು ಪ್ರೇಮ್ ಕೇಸ್ ಹಾಕಿಸಿಕೊಂಡ. ಬಿಜೆಪಿಯವರು ಅವನ ಮೇಲೆ ಕೇಸ್ ಹಾಕಿದರು. ದುನಿಯಾ ವಿಜಯ್ ಮತ್ತು ಸಾಧು ಕೋಕಿಲ ಮೇಲೂ ಕೇಸ್ ಹಾಕಿದರು. ಬೇಕಿದ್ದರೆ ನಮ್ಮ ಮೇಲೆ ಕೇಸ್ ಹಾಕಿಕೊಳ್ಳಲಿ. ನಿನ್ನೆ ನಡೆದ ಫಿಲ್ಮ್ ಫೆಸ್ಟಿವಲ್ ಕಾರ್ಯಕ್ರಮ ನನ್ನದಾ? ಚಿತ್ರರಂಗದ್ದು. ಆದಕ್ಕೆ ಅನೇಕರು ಬಂದಿಲ್ಲ. ಫಿಲ್ಮ್ ಇಂಡಸ್ಟ್ರಿ ಸತ್ತು ಹೋಯ್ತು, ಚಿತ್ರಮಂದಿರಗಳೆಲ್ಲ ಮುಚ್ಚಿ ಹೋಯ್ತು, ಊಟ ಇಲ್ಲ ಅಂತೆಲ್ಲ ಚಿತ್ರರಂಗದವರು ಮಾತನಾಡುತ್ತಾರೆ. ಆದರೆ ಫಿಲ್ಮ್ ಫೆಸ್ಟಿವಲ್ ಗೆ ಅವರ ಪ್ರೋತ್ಸಾಹ ಇಲ್ಲ. ಹಾಗಾದ್ರೆ ಅಂತಾರಾಷ್ಟ್ರೀಯ ಚಿತ್ರೋತ್ಸವನ್ನು ಸರ್ಕಾರ ಯಾರಿಗಾಗಿ ಮಾಡುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.
ಚಿತ್ರರಂಗ ಎಂದರೆ ಸ್ಕ್ರಿಪ್ಟ್ ರೈಟರ್, ಕ್ಯಾಮೆರಾಮ್ಯಾನ್, ನಿರ್ಮಾಪಕ, ನಟ-ನಟಿಯರು, ನಿರ್ದೇಶಕರು ಎಲ್ಲರೂ ಇದ್ದಾರೆ. ಅವರಿಗೆ ಸೇರಿದ ಈ ಹಬ್ಬದಲ್ಲಿ, ಈ ಸಂಭ್ರಮದಲ್ಲಿ ಅವರೇ ಆಚರಣೆ ಮಾಡಿಕೊಳ್ಳಲಿಲ್ಲ ಎಂದರೆ ಯಾರು ಏನು ಬೇಕಾದರೂ ಹೇಳಲಿ’ ಎಂದು ಡಿಕೆಶಿ ಹೇಳಿದ್ದಾರೆ. ಆ ಮೂಲಕ ಕೇಳಿಬಂದ ಟೀಕೆಗಳಿಗೆ ಸರಿಯಾದ ತಿರುಗೇಟು ನೀಡಿದ್ದಾರೆ.