“ಪ್ರಜ್ವಲ ಪ್ರತಿಭೆ” prajwala prathibe
ವೃತ್ತಿಯಲ್ಲಿ ಇವರು ರೈಲ್ವೆ ಉದ್ಯೋಗಿ (ಟ್ರೈನ್ ಮ್ಯಾನೇಜರ್), ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾಗಿ ಮಿಂಚುತ್ತಿರುವ ಕಲಾವಿದ ಪ್ರಜ್ವಲ್ ಆರ್ ಶೆಟ್ಟಿ.
ಉಡುಪಿ ಜಿಲ್ಲೆಯ ಬಾರ್ಕೂರಿನ ಪ್ರೇಮಲತಾ ಶೆಟ್ಟಿ ಹಾಗೂ ರಮಾನಂದ ಶೆಟ್ಟಿ ಇವರ ಮಗನಾಗಿ 24.11.1992 ರಂದು ಪ್ರಜ್ವಲ್ ಆರ್ ಶೆಟ್ಟಿ ಅವರ ಜನನ. ಪಿಯುಸಿ, ಐಟಿಐ, ಹಾಗೂ ಬಿಕಾಂ ಇವರ ವಿದ್ಯಾಭ್ಯಾಸ.

ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:-
ಸಣ್ಣ ವಯಸ್ಸಿನಿಂದಲೂ ಮನೆಯ ಆಸುಪಾಸಿನಲ್ಲಿ ಯಾವಾಗಲೂ ನಡೆಯುವ ಶ್ರೀ ಕ್ಷೇತ್ರ ಮಂದಾರ್ತಿ ಮೇಳದ ಆಟಗಳನ್ನು ನೋಡುತ್ತಾ ಬೆಳೆದು ಬಂದ ಪರಿಣಾಮ ಯಕ್ಷಗಾನವೆನ್ನುವುದು ಮನಸ್ಸಿನಲ್ಲಿ ಹಾಸುಹೊಕ್ಕಾಗಿ ಕುಳಿತು ಬಿಡುತ್ತದೆ, ಮುಂದೆ ಅದೇ, ಯಕ್ಷಗಾನದಲ್ಲಿ ನಾನು ಪಾತ್ರವನ್ನು ಮಾಡಬೇಕು ಯಕ್ಷಗಾನದಲ್ಲಿ ನಾನು ಕೂಡ 1 ಭಾಗವಾಗಬೇಕು ಎನ್ನುವಂತಹ ಆಸೆ ಮನಸ್ಸಿನಲ್ಲಿ ಚಿಗುರೊಡೆಯಿತು.
ಯಕ್ಷಗಾನ ಗುರುಗಳು:-
ಪ್ರಾಥಮಿಕ ಹೆಜ್ಜೆಯನ್ನು, ತಾಳವನ್ನು, ಮಹೇಶ್ ಕುಮಾರ್ ಮಂದಾರ್ತಿ ಹಾಗೂ ಮಧುಕರ್ ಹೆಗ್ಡೆ ಮಡಾಮಕ್ಕಿ ಇವರಿಂದ ಕಲಿತು ಮಹೇಶ್ ಕುಮಾರ್ ಮಂದಾರ್ತಿ ಹಾಗೂ ಉದಯ್ ಕುಮಾರ್ ಹೊಸಾಳ ಇವರಿಂದ ರಂಗದ ನಡೆ ಹಾಗೂ ವೇಷದ ಬಗ್ಗೆ ಕಲಿತು, ಪ್ರಸ್ತುತ ಪ್ರಸಾದ್ ಕುಮಾರ್ ಮೊಗೆಬೆಟ್ಟು ಇವರಲ್ಲಿ ಹೆಚ್ಚಿನ ವಿಧ್ಯಾಭ್ಯಾಸವನ್ನು ಮಾಡುತ್ತ, ಆಯಾ ವೇಷಕ್ಕೆ ಬೇಕಾದಂತಹ ನಡೆ ನಾಜೂಕುಗಳನ್ನು ಕಲಿಯುತ್ತಿದ್ದಾರೆ.

ನೆಚ್ಚಿನ ಪ್ರಸಂಗಗಳು:-
ಶ್ರೀ ದೇವಿ ಮಹಾತ್ಮೆ, ವೀರಮಣಿ ಕಾಳಗ, ಕುಶಲವ, ಹೀಗೆ ಸಾಮಾಜಿಕವನ್ನು ಹೊರತು ಪಡಿಸಿ ಹೆಚ್ಚಿನ ಎಲ್ಲಾ ಪೌರಾಣಿಕ ಪ್ರಸಂಗಗಳು ಕೂಡ ನೆಚ್ಚಿನ ಪ್ರಸಂಗಗಳು.
ನೆಚ್ಚಿನ ವೇಷಗಳು:-
ಶುಂಭ, ಕರ್ಣ, ವೀರಮಣಿ, ವಿದ್ಯುನ್ಮಾಲಿ, ಕೀಚಕ, ರಾಮ, ಶ್ರೀ ದೇವಿ, ಇತ್ಯಾದಿ. (ಹೆಚ್ಚಾಗಿ ಖಳ ಅಥವಾ ಖಳನಾಯಕನ ಪಾತ್ರ ಇಷ್ಟ).
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಪ್ರಸಂಗಕ್ಕೆ ಬೇಕಾದಹಾಗೆ ವಿಡಿಯೋಗಳು ಈಗ ಯೂಟ್ಯೂಬ್ ಅಲ್ಲಿ ಬೇಕಾದ ಹಾಗೆ ಸಿಗುತ್ತದೆ. ಒಂದೇ ಪ್ರಸಂಗದ ಹಲವು ಆಟವನ್ನು ನೋಡಿ, ಆಮೇಲೆ ಅದಕ್ಕೆ ಸಂಬಂಧಿಸಿದ ಕಥೆಯನ್ನು ಪುಸ್ತಕದಲ್ಲಿ ಅಥವಾ Google ನಲ್ಲಿ ಹುಡುಕಿ ಓದಿ, ನಂತರ ಹಿರಿಯ ಕಲಾವಿದರಾದಂತಹ ಆಜ್ರಿ ಗೋಪಾಲ ಗಾಣಿಗರಲ್ಲಿ ಕೆಲವೊಂದು ವಿಷಯವನ್ನು ಕೇಳಿ ತಿಳಿದು ಕೆಲವೊಂದನ್ನು ಗೆಳೆಯ ಪೂರ್ಣಚಂದ್ರ ಹೆಂಗವಳ್ಳಿಯವರ ಬಳಿ ಹಾಗೂ ನಮ್ಮ ಹವ್ಯಾಸಿ ತಂಡದ ಗೆಳೆಯರ ಬಳಿ ಕೇಳಿ, ನಂತರ ಅದನ್ನೆಲ್ಲಾ ಒಗ್ಗೂಡಿಸಿ ಒಂದು ಅರ್ಥವನ್ನು ತಯಾರಿ ಮಾಡಿಕೊಳ್ಳುತ್ತೇನೆ.
ಆ ವೇಷದ ನಡೆ ಹೇಗೆ ಎನ್ನುವ ಬಗ್ಗೆ ಗುರುಗಳಾದಂತಹ ಪ್ರಸಾದ್ ಕುಮಾರ್ ಮೊಗೆಬೆಟ್ಟು ಅವರಲ್ಲಿ ಯಾವುದನ್ನು ಮಾಡಬೇಕು, ಯಾವುದನ್ನು ಮಾಡಬಾರದು ಎನ್ನುವುದರ ಕುರಿತು ಮಾರ್ಗದರ್ಶನ ಪಡೆದು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಪ್ರಜ್ವಲ್.

ವೃತ್ತಿಯಲ್ಲಿ ನೀವು ರೈಲ್ವೆ ಉದ್ಯೋಗಿ, ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾದ ನೀವು ಉದ್ಯೋಗ ಹಾಗೂ ಯಕ್ಷಗಾನ ಎರಡನ್ನೂ ಯಾವ ರೀತಿಯಲ್ಲಿ ಸಮಯ ಮಾಡಿಕೊಳ್ಳುತ್ತೀರಿ:-
ಕೆಲವೊಮ್ಮೆ ಸಮಯ ಹೊಂದಿಸುವುದು ಬಹಳ ಕಷ್ಟ ಆಗುವುದು ಉಂಟು, ಆದರೂ ಕೂಡ ಪ್ರಯತ್ನ ಪಟ್ಟು ಯಕ್ಷಗಾನಕ್ಕೆ ಸಮಯ ಹೊಂದಿಸಿಕೊಂಡು ವಾರದಲ್ಲಿ ಒಮ್ಮೆಯಾದರೂ ನಮ್ಮ ತಂಡದ ಸದಸ್ಯರ ಜೊತೆ ಯಕ್ಷಗಾನದ ಬಗ್ಗೆ ಚರ್ಚೆ ಮಾಡುತ್ತ ಕಾಲ ಕಳೆಯುತ್ತೇನೆ.

ನೀವು ನೆಲೆಸಿರುವುದು ಗೋವಾದಲ್ಲಿ. ಯಕ್ಷಗಾನಕ್ಕೆ ಯಾವ ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಾರೆ ಅಲ್ಲಿಯ ಜನರು:-
ನಾನು ಕಂಡ ಹಾಗೆ ಗೋವಾದಲ್ಲಿ ಯಕ್ಷಗಾನ ಬಹಳ ಕಡಿಮೆಯೇ ಎನ್ನಬಹುದು, ಆ ಪ್ರದೇಶದಲ್ಲಿ ಯಕ್ಷಗಾನ ಪ್ರದರ್ಶನ ಆಗುವುದು ಕೂಡ ಕಡಿಮೆಯೇ. ಮುಂದೆ ಪ್ರದರ್ಶನಗಳು ಆದಲ್ಲಿ ಜನರ ಪ್ರೋತ್ಸಾಹ ಸಿಗದೆ ಇರುವುದಕ್ಕೆ ಸಾಧ್ಯವಿಲ್ಲ ಎನ್ನಬಹುದು. ಯಾಕೆಂದರೆ ಯಕ್ಷಗಾನಕ್ಕೆ ಮನಸೋಲದವರು ಬಹಳ ವಿರಳ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಹೆಚ್ಚಾಗಿ ಕರಾವಳಿಯಲ್ಲಿ ಪ್ರಸಿದ್ಧಿ ಪಡೆದಿದ್ದ ಯಕ್ಷಗಾನ ಈಗ ಜಗತ್ತಿನಾದ್ಯಂತ ಪಸರಿಸುತ್ತಾ ಇದೆ ಎನ್ನುವುದೇ ಬಹಳ ಸಂತೋಷದ ವಿಚಾರ. ಇನ್ನೂ ಹೀಗೆ ಎಲ್ಲರ ಮನಸೂರೆಗೊಳ್ಳಲಿ ಎನ್ನುವುದು ಆಶಯ.
ಇಂದಿನ ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:- ಪ್ರಬುದ್ಧ ಪ್ರೇಕ್ಷಕರು ಇದ್ದಾರೆ, ತಪ್ಪುಗಳನ್ನು ಹುಡುಕಿ ತೆಗೆಯುವ ಪ್ರಬುದ್ಧತೆ ಇದೆ. ಆದರೆ ಇಂದಿನ ಯುವ ಪೀಳಿಗೆಗೂ ಕೂಡ ಆ ಪ್ರಬುದ್ಧತೆ ಬೇಕು. ಕೇವಲ ದಿಗಿಣಕ್ಕೆ ಮಾತ್ರ ಪ್ರೋತ್ಸಾಹ ನೀಡಿದರೆ ಸಾಲದು. ಅರ್ಥಗಾರಿಕೆಯನ್ನು ಕೂಡ ಗಮನಿಸಬೇಕು ಹಾಗೂ ಅರ್ಥೈಸಿಕೊಳ್ಳಬೇಕು.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಹವ್ಯಾಸಿ ಕಲಾವಿದನಾಗಿ ಯಕ್ಷಗಾನದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು, ಎಲ್ಲಾ ಪಾತ್ರವನ್ನು ಮಾಡುವಂತಹ ನೈಪುಣ್ಯತೆ ಸಾಧಿಸಬೇಕು, ಹಾಗೂ ಈಗ ನಮ್ಮದೇ ಆದಂತಹ ಶ್ರೀ ನಾಗಬ್ರಹ್ಮ ಯಕ್ಷಗಾನ ಕಲಾ ಮಂಡಳಿ ಎನ್ನುವಂತಹ ಒಂದು ತಂಡವನ್ನು ನಾವೆಲ್ಲರೂ ಸೇರಿ ಕಟ್ಟಿ ಅದರ ಮುಖೇನವಾಗಿ ಪ್ರದರ್ಶನವನ್ನು ನೀಡುತ್ತಾ ಇದ್ದೇವೆ. ನಮ್ಮ ತಂಡಕ್ಕೆ ಇನ್ನೂ ಹೆಚ್ಚಿನ ಯುವ ಹವ್ಯಾಸಿ ಕಲಾವಿದರನ್ನು ಸೇರಿಸಿಕೊಂಡು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉತ್ತಮ ಪ್ರದರ್ಶನ ನೀಡಬೇಕು ಎನ್ನುವ ಆಶಯವಿದೆ.
ಮೇಳದ ತಿರುಗಾಟ ಮಾಡಿಲ್ಲ. ಆದರೆ ಸಿಗಂದೂರು ಮೇಳದಲ್ಲಿ ಕೆಲವು ಬಾರಿ ವೇಷ ಮಾಡಿದ್ದೇನೆ ಎಂದು ಹೇಳುತ್ತಾರೆ ಪ್ರಜ್ವಲ್.
ಪ್ರಮುಖವಾಗಿ ಯಕ್ಷಗಾನ, ಬೈಕ್ ರೈಡಿಂಗ್, ಟ್ರೆಕ್ಕಿಂಗ್, ಹೆಚ್ಚಾಗಿ ಪರಿಸರದ ಜೊತೆ ಸಮಯ ಕಳೆಯುವುದು ಇವರ ಹವ್ಯಾಸಗಳು. ತಂದೆ, ತಾಯಿಯ, ತಂಗಿ ಪೃಥ್ವಿ ಆರ್ ಶೆಟ್ಟಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನ, ಪ್ರೇಕ್ಷಕರು, ಕಲಾಭಿಮಾನೀ ಬಂಧುಗಳ ಸಹಕಾರ ಮತ್ತು ಪ್ರೋತ್ಸಾಹವನ್ನು ಸದಾ ಸ್ಮರಿಸುತ್ತೇನೆ ಎಂದು ಹೇಳುತ್ತಾರೆ ಪ್ರಜ್ವಲ್ ಆರ್ ಶೆಟ್ಟಿ.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
+918317463705
ಇದನ್ನು ಓದಿ: