ಪ್ರೀತಿಯಲ್ಲಿ ಬೀಳಬೇಡಿ ಏಳಿ !! – Kannada Article by Vasanth Giliyar
ಯಾವ ವೇದಾಂತಿ ಅದೇನು ಹೇಳಿದ್ರೂ ಒಂದು ಪುಟ್ಟ ಆಕರ್ಷಣೆ ಅಂತರಾಳದಲ್ಲೆಲ್ಲೋ ಮೊಳೆಯದೆ ಪ್ರೀತಿಯ ಮೊಳಕೆ ಆಗೋದು ಕಷ್ಟ ಕಷ್ಟ. ಇನ್ನೂ ಕೆಲವೊಮ್ಮೆ ಅನುಕಂಪಕ್ಕೋ, ಆದರ್ಶಕ್ಕೋ ಪ್ರೀತಿ ಹುಟ್ಟುತ್ತದೆ ನಿಜ ಹುಟ್ಟಿದ ಪ್ರೀತಿಯನ್ನ ಕೊನೆತನಕವೂ ಉಳಿಸಿಕೊಂಡು ಹೋಗುವುದಿದೆಯಲ್ಲ? Kannada Article by Vasanth Giliyar
ಪ್ರೀತಿ ಶುರುವಾಗುವ ಕಾಲದಲ್ಲಿ ಆಕೆಯ ಒಂದು ಮೆಸೇಜಿಗೆ ಅಥವ ಅವನ ಒಂದು ಸಾಲು ಅಕ್ಷರಕ್ಕೆ ನೀವೆಷ್ಟು ಕಾದಿದ್ದೀರಿ ನೆನಪಿದೆಯಾ? ಪ್ರೀತಿ ದಕ್ಕಿದ ಮೇಲೆ ಮತ್ತದೇ ಚಡಪಡಿಕೆ ಉಳಿಸಿಕೊಂಡಿದ್ದೀರಾ? ಇಬ್ಬರ ದೇಹಗಳೂ ಪ್ರೀತಿಸಿಕೊಂಡ ಮೇಲೂ ನಿಮ್ಮಲಿ ಅದೇ ಪ್ರೀತಿಯ ಪಿಸುಗುಡುವಿಕೆ ಜತನವಾಗಿದೆಯಾ? ಪ್ರೀತಿ ಮದುವೆಯ ತನಕ ಬಂದು, ನೀವು ಮದುವೆಯೂ ಆಗಿ ಈಗ ನಂಗ್ ನಂಗೆ ಅಂತಾದಮೇಲೆ ಎಂದಾದರೊಂದು ದಿವಸ ಆರಂಭದ ಕಾಲದ ಪ್ರೀತಿ ನಿಮ್ಮ ಎದೆಯಲ್ಲಿ ಮೊರೆಯುತ್ತಿತ್ತಲ್ಲ ಅದೆಲ್ಲ ಎಲ್ಲಿ ಹೋಯ್ತು ಅಂತ ನಿಮ್ಮನ್ನ ನೀವೇ ಒಮ್ಮೆ ಕೇಳಿಕೊಂಡಿದ್ದೀರಾ? ಬಹುತೇಕ ಸಂದರ್ಭದಲ್ಲಿ ಏನ್ ಗೊತ್ತಾ? ಸಂಬಂಧಗಳು ಕೈಗೆ ಸಿಗುವ ತನಕದ ಚಡಪಡಿಕೆ, ಕಾತರ, ನಿರೀಕ್ಷೆ, ಹಸಿವು ಇದರದ್ದೇ ಒಂದು ತೂಕವಾದರೆ ಅದು ಸಿಕ್ಕಿ ’ಇನ್ನೇನ್ ಬಿಡು ಹೆಂಗೂ ನಂದೇ ಪ್ರಾಪರ್ಟಿ’ ಅಂತ ನಿಮಗೆ ನೀವೇ ಒಂದು ಬೋರ್ಡು ತಗುಲಿಸಿಕೊಳ್ಳುತ್ತೀರಲ್ಲಾ? ಅಲ್ಲಿಗೆ ಆ ಸಂಬಂಧ ತನ್ನ ಸೊಗಡು ಕಳೆದುಕೊಳ್ಳಲಿಕ್ಕೆ ಶುರುವಾಗುತ್ತದೆ, ಆ ಪ್ರೀತಿಯ ಆಕರ್ಷಣೆ ಸವೆದು ಹೋಗುತ್ತಿರುತ್ತದೆ, ನಂಟು ಒಂದು ಕಟ್ಟುಪಾಡು, ಒಂದು ಅಭ್ಯಾಸ ಎಂಬತಾಗುತ್ತದೆ, ಆಗ ಉಳಿದಿರುವುದು ಕೇವಲ ಸಂಬಂಧವೇ ಹೊರತು ಪ್ರೀತಿಯಲ್ಲ. ನಿಮ್ಮ ಪ್ರೀತಿಯ ಸಂಬಂಧ ಈಗ ಕೇವಲ ಸಂಬಂಧವಾಗಿಯಷ್ಟೇ ಉಳಿದಿದೆಯಾ? ನಿಮ್ಮನ್ನ ನೀವೇ ಕೇಳಿಕೊಳ್ಳಿ.
ಹೌದು ಯಾವ ವೇದಾಂತಿ ಅದೇನು ಹೇಳಿದ್ರೂ ಒಂದು ಪುಟ್ಟ ಆಕರ್ಷಣೆ ಅಂತರಾಳದಲ್ಲೆಲ್ಲೋ ಮೊಳೆಯದೆ ಪ್ರೀತಿಯ ಮೊಳಕೆ ಆಗೋದು ಕಷ್ಟ ಕಷ್ಟ. ಇನ್ನೂ ಕೆಲವೊಮ್ಮೆ ಅನುಕಂಪಕ್ಕೋ, ಆದರ್ಶಕ್ಕೋ ಪ್ರೀತಿ ಹುಟ್ಟುತ್ತದೆ ನಿಜ ಹುಟ್ಟಿದ ಪ್ರೀತಿಯನ್ನ ಕೊನೆತನಕವೂ ಉಳಿಸಿಕೊಂಡು ಹೋಗುವುದಿದೆಯಲ್ಲ? ಅದೇ ನಿಜವಾದ ಪ್ರೀತಿಯ ಯಶಸ್ಸು. ನೀ ಎಷ್ಟು ಪ್ರೀತಿಸ್ತೀಯೋ ನಾ ಅಷ್ಟೇ ಪ್ರೀತಿಸ್ತೀನಿ ಎನ್ನುವ ನಿಮ್ಮೊಳಗಿನ ಅಹಂಕಾರಕ್ಕೆ ಜೋತುಬೀಳಬೇಡಿ, ಪ್ರೀತಿ ಔನ್ಸು ಲೆಕ್ಕದಲ್ಲಿ ಅಳತೆಗೆ ಸಿಗುವಂತಹುದಲ್ಲ. ನೀವು ಯಾವ ಆಕರ್ಷಣೆಗೆ ಬಿದ್ದು ಪ್ರೀತಿಸಿದ್ದೀರೋ ಈಗದು ಅಲ್ಲಿಂದ ಕಾಣೆಯಾಗಿರಬಹುದು ಆದರೆ ಎಂದೂ ಕೂಡ ಪ್ರೀತಿಯನ್ನ ಕಣ್ಮರೆಯಾಗಲು ಬಿಡಬೇಡಿ, ನಮ್ಮದು ಅಮರಾ-ಮಧುರ ಪ್ರೇಮ ಎನ್ನುವ ಸರ್ಟಿಫ಼ಿಕೇಟು ಕೊಟ್ಟುಕೊಂಡ ನೀವೀಗ ನೀನೊಂದು ತೀರ ನಾನೊಂದು ತೀರ ಅಂತಾದರೆ ಪ್ರೀತಿ ಬಾಯಲ್ಲಿ ಜಗಿದು ಜಗಿದು ಸವಿ ಕಳೆದುಕೊಂಡ ಚೂಯಿಂಗ್ ಗಮ್!

ನಿಮಗೊಂದು ಮಾತು ನೆನಪಿರಲಿ ಹೆಣ್ಣು ಪ್ರತೀ ಹಂತದಲ್ಲು ಪ್ರೀತಿಯನ್ನ ಸ್ವೀಕಾರ ಮಾಡುವ ಜಾಗದಲ್ಲಿ ನಿಂತಿರುತ್ತಾಳೆ! ನೀವಾಕೆಗೆ ಪ್ರೀತಿ ನೀಡಿದರೆ ಆಕೆ ಅಕ್ಷಯಪ್ರೇಮದ ಧಾರೆಯೂ ಆದಾಳು! ಅದಾಗುತ್ತಿಲ್ಲವಾ? ಸದಾ ನೀವು ಕೊಡುವ ಜಾಗದಲ್ಲೇ ನಿಲ್ಲುವ ಸಾರ್ಥಕತೆಯ ಭಾವದಲ್ಲಿರಿ. ಪ್ರೀತಿಸುವ ಹುಡುಗರೆ ಕೇಳಿ, ನಿಮ್ಮ ಹುಡುಗಿಯ ಮೂಡು ನಿನ್ನೆ ಇದ್ದಂತೆ ಇಂದಿರುವುದಿಲ್ಲ, ಆಕೆ ಕೆಲವೊಮ್ಮೆ ಸಣ್ಣ ಸಣ್ಣದಕ್ಕೂ ಸಿಡುಕುತ್ತಾಳೆ, ನೀವು ಸಣ್ಣ ಮಾತು ತಪ್ಪಿದರೂ ಜ್ವಾಲಾಮುಖಿಯಾಗುತ್ತಾಳೆ, ನಿಮ್ಮ ಮೇಲೆ ಆಕೆ ಎಂದಿಗೂ ಬೆಕ್ಕಿನ ಹಾಗೆ ಪೊಸೀಸೀವ್ ಆಗಿಯೇ ಇರುತ್ತಾಳೆ, ಆಕೆಯ ಪುಟ್ಟ ಸ್ವಾತಂತ್ರ್ಯ ಕಸಿದುಕೊಂಡರೂ ಆಕೆ ನಿಮ್ಮ ಮೇಲೆ ಸಿಡಿಮಿಡಿಯಾಗುತ್ತಾಳೆ, ಹಾಗಂತ ಅವಳಳೊಳಗೆ ಪ್ರೀತಿಯೇ ಇಲ್ಲ ಅಂತ ನಿಮಗೆ ನೀವೇ ನಿರ್ಧಾರಕ್ಕೆ ಬಂದುಬಿಡಬೇಡಿ. ಆ ಭಾವವೇ ಹೆಣ್ಣು, ಅದೆಲ್ಲದರ ಆಚೆಗೂ ನೀವು ಅಕೆಯನ್ನ ಪ್ರೀತಿಸುತ್ತಲೇ ಹೋಗಿ ನೋಡಿ? ಆ ಮುನಿಸು ಮುಗಿಸಿ ಆಕೆ ಕರಗಿ ನಿಮ್ಮ ಎದೆಗೆ ಒರಗುತ್ತಾಳೆ, ಪ್ರೀತಿಯ ಅಕ್ಷಯ ಪಾತ್ರೆಯಾಗುತ್ತಾಳೆ, ಹೆಣ್ಣಿನ ಲಹರಿಯ ಬದಲಾವಣೆಗೆ ಆಕೆಯ ದೈಹಿಕ ಕೆಮಿಷ್ಟ್ರೀಯೂ ಕಾರಣವಾಗಿರುತ್ತದೆ ಎನ್ನುವುದು ನಿಮಗೆ ಅರ್ಥವಾಗಬೇಕು.
ಇನ್ನೂ ಕೆಲವು ಹುಡುಗಿಯರಿರುತ್ತಾರೆ, ಅವರಿಗೆ ಗಂಡನ ಮೇಲೆ ವಿನಾಕಾರಣದ ಅನುಮಾನ, ಹೊರಗೆ ಹೋದವ ಎಲ್ಲಿ ಕೈ ತಪ್ಪಿ ಹೋದಾನೋ ಎನ್ನುವ ಆತಂಕ, ಅವರಿಗೆ ಅವರದೇ ಆದ ವಿಚಿತ್ರ ಕಲ್ಪನೆಗಳು, ಮನೆಯಲ್ಲಿ ಕೂತು ನೋಡುವ ದಾರವಾಹಿಗಳು ಕಟ್ಟಿಕೊಡುವ ಪಾತ್ರಗಳೆಲ್ಲವು ಅವರ ಮನಸಿನಲ್ಲಿ ಹಾದು ಹೋಗುತ್ತವೆ. ಆದರೆ ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳಬೇಕಾದ ಸತ್ಯ ಏನು ಅಂದರೆ ನಿಮ್ಮ ಹುಡುಗನ ಮೇಲೆ ನಿಮಗೊಂದು ಕಣ್ಣಿರುವುದು ತಪ್ಪಲ್ಲ ಆದರೆ ಆ ನೋಟದ ಪೂರ್ತಿ ಅನುಮಾನವೇ ತುಂಬಿದ್ದರೆ ಮತ್ತದು ನಿರಂತರವಾಗಿ ನಡೆಯುತ್ತಲೇ ಇದ್ದರೆ ನಿಮ್ಮ ಕಲ್ಪನೆಗಳೇ ನಿಜವಾಗಿ ಬಿಡುತ್ತದೆ! ಎಂದಿಗೂ ಅನುಮಾನದ, ಅವಮಾನದ ಚುಚ್ಚು ಮಾತಿನಲ್ಲಿ ಚುಚ್ಚುತ್ತಲೇ ಇದ್ದರೆ ಯಾವ ಗಂಡಿಗೂ ಯಾವ ಹೆಣ್ಣೂ ಅದೆಷ್ಟೇ ಲೋಕ ಸುಂದರಿ ಇದ್ದರೂ ಅವಳ ಕಲ್ಪನೆ ಬಂದರೂ ಬೆಚ್ಚಿ ಬೀಳುತ್ತಾನೆ, ಎಲ್ಲಾ ಸೌಂದರ್ಯದ ಆಚೆಗೂ ಪ್ರೀತಿಗೆ ಒಂದು ಚೆಂದವಿದೆ, ಅದು ಅಂತರಾಳದ ಅಂಬುತೀರ್ಥ! ಅದಕ್ಕೆ ಬಾಹ್ಯ ಸೌಂದರ್ಯವನ್ನ ಕಡೆಗಣಿಸುವ ಶಕ್ತಿಯಿದೆ, ಪ್ರೀತಿಯ, ಕಾಳಜಿಯ ಹಸಿವು ಗಂಡಸಿಗೆ ಹೊಟ್ಟೆ ಹಸುವಿಗಿಂತಲೂ ಜಾಸ್ತಿ ಎನ್ನುವುದನ್ನ ನಮ್ಮ ಹೆಣ್ಣು ಮಕ್ಕಳು ಎಂದಿಗೂ ಮರೆಯಕೂಡದು.
ಇದೆಲ್ಲದರ ಆಚೆಗೂ ಗಂಡು-ಹೆಣ್ಣು ಇಬ್ಬರಿಗೂ ಒಂದು ಬದ್ಧತೆ, ಸಮನ್ವಯತೆ, ಇರಲೇ ಬೇಕು, ದಿನವೆಲ್ಲಾ ದುಡಿದು ಮನೆಗೆ ಬಂದಾಗ ಮೊಬೈಲಿಗೋ, ಟಿವಿಗೋ ಅಂಟಿ ಕೂರದೆ ಚೂರು ಮಾತಾಡಿ, ಇಂದು ಏನೇನಾಯ್ತು ಎನ್ನುವುದನ್ನ ಹಂಚಿಕೊಳ್ಳಿ, ನಿಮ್ಮ ಭವಿಷ್ಯದ ಕುರಿತು ಮಾತಾಡಿ, ಹೊಸ ಕನಸುಗಳನ್ನ ಇಬ್ಬರೂ ಮಾತಾಡಿಕೊಳ್ಳಿ, ಮೂರು ತಿಂಗಳಿಗಾದರೂ ಮನೆ ಬಿಟ್ಟು ಹೊರಗೆಲ್ಲೋ ಹೋಗಿ ಒಂದು ದಿನ ಜೊತೆಗೆ ಕಳೆದು ಬನ್ನಿ, ಅವನ ಬರ್ತಡೆ ದಿವಸ ಅವನಿಗಿಷ್ಟದ ಅಡುಗೆ ಹೆಣ್ಣು ಮಾಡಿಕೊಟ್ಟರೆ ಆತ ಒಳಗಿಂದೊಳಗೆ ಅದೆಷ್ಟು ತೃಪ್ತನೆಂದರೆ ನಿಮ್ಮ ಸಣ್ಣ ಪುಟ್ಟ ತಪ್ಪುಗಳಿಗೆಲ್ಲ ಆತ ಸಿಡುಕುವುದಿಲ್ಲ! ಅವಳ ಹುಟ್ಟಿದ ಹಬ್ಬಕ್ಕೆ ಪುಟ್ಟದೊಂದು ಗಿಪ್ಟು ಕೊಟ್ಟರೆ ಅವಳ ಕಣ್ಣಲ್ಲಿ ನೀವೇ ಹೀರೋ.. ಪ್ರೀತಿ ಎಂದರೆ ಒಂದು ರಥದ ಎರಡು ಚಕ್ಕಡಿಗಳಂತೆ, ರಥದ ಒಳಗಿರುವ ದೇವರು ನಿಮ್ಮ ಬದುಕು! ಎರಡೂ ಚಕ್ಕಡಿ ಸಮಾನವಾಗಿ ಸಾಗಿದರೇ ಬದುಕು ಸರಾಗ. ಇಷ್ಟನ್ನೇ ಅರ್ಥ ಮಾಡಿಕೊಂಡರೆ ನಿಮ್ಮ ಪ್ರೀತಿ ಇನ್ನಷ್ಟು ಚೆಂದ.. ನಿಮ್ಮ ಪ್ರೀತಿ ಅಕ್ಷಯವಾಗಲಿ
ಯಾವ ವೇದಾಂತಿ ಅದೇನು ಹೇಳಿದ್ರೂ ಒಂದು ಪುಟ್ಟ ಆಕರ್ಷಣೆ ಅಂತರಾಳದಲ್ಲೆಲ್ಲೋ ಮೊಳೆಯದೆ ಪ್ರೀತಿಯ ಮೊಳಕೆ ಆಗೋದು ಕಷ್ಟ ಕಷ್ಟ. ಇನ್ನೂ ಕೆಲವೊಮ್ಮೆ ಅನುಕಂಪಕ್ಕೋ, ಆದರ್ಶಕ್ಕೋ ಪ್ರೀತಿ ಹುಟ್ಟುತ್ತದೆ ನಿಜ ಹುಟ್ಟಿದ ಪ್ರೀತಿಯನ್ನ ಕೊನೆತನಕವೂ ಉಳಿಸಿಕೊಂಡು ಹೋಗುವುದಿದೆಯಲ್ಲ? Kannada Article by Vasanth Giliyar
