Back To Top

 ಯೆಮೆನ್‌ನಲ್ಲಿ ನರ್ಸ್ ಆಗಿದ್ದ ಕೇರಳದ ನಿಮಿಷಾ ಪ್ರಿಯಾಗೆ ಮರಣದಂಡನೆ: ಜುಲೈ 16ರಂದು ನೇಣು ಘೋಷಣೆ

ಯೆಮೆನ್‌ನಲ್ಲಿ ನರ್ಸ್ ಆಗಿದ್ದ ಕೇರಳದ ನಿಮಿಷಾ ಪ್ರಿಯಾಗೆ ಮರಣದಂಡನೆ: ಜುಲೈ 16ರಂದು ನೇಣು ಘೋಷಣೆ

ನವದೆಹಲಿ: ಯೆಮೆನ್‌ನಲ್ಲಿ ನರ್ಸ್ ಆಗಿದ್ದ ಕೇರಳದ ನಿಮಿಷಾ ಪ್ರಿಯಾಗೆ ಮರಣದಂಡನೆ ಘೋಷಣೆಯಾಗಿದೆ. ಇವರು ಭಾರತದ ಕೇರಳ ಮೂಲದವರಾಗಿದ್ದು ಅವರನ್ನು ಜುಲೈ 16ರಂದು ಗಲ್ಲಿಗೇರಿಸಲಾಗುವುದು. ಯೆಮೆನ್ ಪ್ರಜೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮಿಷಾ ಪ್ರಿಯಾಗೆ ಯೆಮೆನ್ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ.


ಯೆಮೆನ್ ಪ್ರಜೆ ತಲಾಲ್ ಅಬ್ದೋ ಮಹ್ದಿ ಅವರನ್ನು ಕೊಲೆ ಮಾಡಿದ ಆರೋಪದಲ್ಲಿ ಜುಲೈ 16ರಂದು ಗಲ್ಲಿಗೇರಿಸಲಾಗುವುದು ಎಂದು ತಿಳಿದು ಬಂದಿದೆ. ಕೊಲೆಯಾದ ವ್ಯಕ್ತಿ ಹಾಗೂ ಪ್ರಿಯಾ ಯೆಮೆನ್‌ನಲ್ಲಿ ವಿದೇಶಿ ಪ್ರಜೆಗಳಿಗೆ ಕಾನೂನುಬದ್ಧ ಅವಶ್ಯಕತೆಯಾಗಿರುವ ಕ್ಲಿನಿಕ್ ತೆರೆಯಲು ಪಾರ್ಟನರ್ ಆಗಿದ್ದರು. ಆದರೆ ಅವರ ನಡುವೆ ಉಂಟಾದ ಮನಸ್ತಾಪದಿಂದ ತಲಾಲ್ ಅವರ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ನಿಮಿಷಾ ಪ್ರಿಯಾ ತಲಾಲ್ ಗೆ ಡ್ರಗ್ ನೀಡಿ ಕೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.


ತಲಾಲ್ ಸಾವಿನ ನಂತರ, ನಿಮಿಷಾ ಪ್ರಿಯಾ ಮತ್ತು ಅವರ ಯೆಮೆನ್ ಸಹೋದ್ಯೋಗಿ ಹನಾನ್ ಆತನ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ನೀರಿನ ಟ್ಯಾಂಕ್‌ನಲ್ಲಿ ವಿಲೇವಾರಿ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ನಿಮಿಷಾಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.


ನಿಮಿಷಾ ಪ್ರಿಯಾ ಅವರ ತಾಯಿ ಪ್ರೇಮಾ ಕುಮಾರಿ ಅವರ ಪವರ್ ಆಫ್ ಅಟಾರ್ನಿ ಹೊಂದಿರುವ ಮಾನವ ಹಕ್ಕುಗಳ ಕಾರ್ಯಕರ್ತ ಸ್ಯಾಮ್ಯುಯೆಲ್ ಜೆರೋಮ್, ಯೆಮೆನ್ ಜೈಲು ಅಧಿಕಾರಿಗಳು ನಿಮಿಷಾ ಅವರ ಮರಣದಂಡನೆಯ ದಿನಾಂಕದ ಬಗ್ಗೆ ತಿಳಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. 2017ರಲ್ಲಿ ತನ್ನ ಬ್ಯುಸಿನೆಸ್ ಪಾರ್ಟನರ್ ಆಗಿದ್ದ ತಲಾಲ್ ಅಬ್ದೋ ಮಹ್ದಿ ಅವರನ್ನು ಕೊಲೆ ಮಾಡಿದ ಆರೋಪದ ಮೇಲೆ ನಿಮಿಷಾ ಪ್ರಿಯಾಳನ್ನು ಬಂಧಿಸಲಾಗಿತ್ತು. ಅದಾದ 3 ವರ್ಷಗಳ ನಂತರ 2020ರಲ್ಲಿ ಯೆಮೆನ್ ನ್ಯಾಯಾಲಯವು ಈ ಪ್ರಕರಣದಲ್ಲಿ ಆಕೆಗೆ ಮರಣದಂಡನೆ ಶಿಕ್ಷೆ ವಿಧಿಸಿತು.


ಕೇರಳದ ಪಾಲಕ್ಕಾಡ್ ಜಿಲ್ಲೆಯವರಾದ ನಿಮಿಷಾ ಪ್ರಿಯಾ, 2011ರಲ್ಲಿ ತನ್ನ ನರ್ಸಿಂಗ್ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಯೆಮೆನ್‌ಗೆ ತೆರಳಿದರು. ಯೆಮೆನ್‌ನಲ್ಲಿ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಲು ಸಹಾಯ ಮಾಡುವುದಾಗಿ ತಲಾಲ್ 2014ರಲ್ಲಿ ಭರವಸೆ ನೀಡಿದಾಗ ಆಕೆ ತಲಾಲ್ ಅಬ್ದೋ ಮಹ್ದಿ ಅವರ ಜೊತೆ ಒಡನಾಟ ಬೆಳೆಸಿಕೊಂಡರು.
ಕಾನೂನಿನ ಪ್ರಕಾರ, ನಿಮಿಷಾ ತಲಾಲ್ ಜೊತೆ ಕ್ಲಿನಿಕ್ ತೆರೆಯಲು ಷರತ್ತುಗಳನ್ನು ಮಾಡಿಕೊಂಡು, ಒಪ್ಪಂದ ಮಾಡಿಕೊಂಡರು. ನಿಮಿಷಾ 2015ರಲ್ಲಿ ಸನಾದಲ್ಲಿ ತಲಾಲ್ ಜೊತೆ ತನ್ನ ಕ್ಲಿನಿಕ್ ಅನ್ನು ಪ್ರಾರಂಭಿಸಿದರು. ಆದರೆ ಶೀಘ್ರದಲ್ಲೇ ಅವರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿಕೊಂಡವು. ಹೀಗಾಗಿ, ತಲಾಲ್ ತನಗೆ ದೌರ್ಜನ್ಯ ಎಸಗಿ, ಚಿತ್ರಹಿಂಸೆ ನೀಡಿದ್ದಾನೆ ಎಂದು ಆಕೆ ಆರೋಪಿಸಿದ್ದರು. ಇದೇ ಕೋಪದಲ್ಲಿ ಆಕೆ ಯೆಮೆನ್ ಬಿಟ್ಟು ಹೋಗದಂತೆ ನೋಡಿಕೊಳ್ಳಲು ಅವನು ಅವಳ ಪಾಸ್‌ಪೋರ್ಟ್ ಅನ್ನು ಸಹ ತೆಗೆದುಕೊಂಡಿದ್ದ ಎನ್ನಲಾಗಿದೆ.


ಬಳಿಕ ತಲಾಲ್ ವಿರುದ್ಧ ನಿಮಿಷಾ ಪೊಲೀಸ್ ದೂರು ದಾಖಲಿಸಿದರು. ಇದರಿಂದ 2016ರಲ್ಲಿ ಆತನನ್ನು ಬಂಧಿಸಲಾಯಿತು. ಅದಾದ ಸ್ವಲ್ಪ ಸಮಯದ ನಂತರ ಅವನನ್ನು ಬಿಡುಗಡೆ ಮಾಡಲಾಯಿತು. ಹೊರಗೆ ಬಂದ ತಲಾಲ್ ಮತ್ತು ನಿಮಿಷಾ ನಡುವೆ ಮತ್ತೆ ಜಗಳ ಹೆಚ್ಚಾಗಿತ್ತು. 2017ರಲ್ಲಿ ಇಬ್ಬರೂ ಜಗಳವಾಡಿದಾಗ ನಿಮಿಷಾ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯಲು ಮತ್ತು ಭಾರತಕ್ಕೆ ಹಿಂತಿರುಗಲು ಸ್ಥಳೀಯ ಜೈಲು ವಾರ್ಡನ್‌ನ ಸಹಾಯವನ್ನು ಕೋರಿದರು. ಅವರು ತಲಾಲ್ನನ್ನು ಅಶಕ್ತಗೊಳಿಸಲು ನಿದ್ರಾಜನಕಗಳನ್ನು ಬಳಸಲು ಸೂಚಿಸಿದರು. ಅವರ ಸಲಹೆಯಂತೆ ನಿಮಿಷಾ ತಲಾಲ್ ಬಳಿಯಿದ್ದ ತನ್ನ ಪಾಸ್‌ಪೋರ್ಟ್ ಅನ್ನು ಮರಳಿ ಪಡೆಯುವ ಪ್ರಯತ್ನದಲ್ಲಿ ಅವನಿಗೆ ಅಮಲಿನ ಡ್ರಗ್ ಚುಚ್ಚಿದಳು. ಆದರೆ, ಅದು ಓವರ್ ಡೋಸ್ ಆಗಿ ಆತ ಸಾವನ್ನಪ್ಪಿದನು. ಇದರಿಂದ ಆಕೆಯನ್ನು ಬಂಧಿಸಿ, ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು ಎಂದು ತಿಳಿದು ಬಂದಿದೆ.

Prev Post

Ahmedabad Bridge Collapse ಕುಸಿದ ಸೇತುವೆ: 9 ಮಂದಿ ಸಾವು, ವಾಹನಗಳು ನೀರುಪಾಲು,…

Next Post

ನವಜಾತ ಶಿಶುಗಳನ್ನು ಕದಿಯಲು ಬಂದಾತನಿಗೆ ಸಾರ್ವಜನಿಕರಿಂದ ಥಳಿತ

post-bars

Leave a Comment