ಅನಾರೋಗ್ಯದಿಂದ ನಿಧನರಾದ ನಿವೃತ್ತ ಯೋಧ, ಪಾರ್ಥೀವ ಶರೀರವನ್ನು ಸಾಗಿಸಲು ಊರಿನ ಜನರ ಹರಸಾಹಸ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ, ಪ್ರತಿಷ್ಠಿತ ಬಾಳುಗೋಡು ಮನೆತನದ ವೀರಯೋಧ ಶ್ರೀ ಧನಂಜಯರು ನಿನ್ನೆ ದಿನಾಂಕ 2 ಜುಲೈ 2025 ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನಲ್ಲಿ ಮೃತಪಟ್ಟರು.

ಸೇನೆಯ ನಿವೃತ್ತಿಯ ಬಳಿಕ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಇವರು ಕೆಲವು ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿ ಕೆಚ್ಚೆದೆಯ ಹೋರಾಟ ನಡೆಸಿದ್ದ ಇವರು ಉತ್ಸಾಹದ ಚಿಲುಮೆಯಾಗಿದ್ದು ಊರಿನಲ್ಲಿ ನಡೆಯುವ ಪ್ರತಿಯೊಂದು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಯುವಕರಿಗೆ ಮಕ್ಕಳಿಗೆ ಸ್ಪೂರ್ತಿಯಾಗಿದ್ದರು.
ದುರಂತದ ವಿಷಯವೇನೆಂದರೆ ಇವತ್ತು ಅವರ ಪಾರ್ಥಿವ ಶರೀರವನ್ನು ಕೊಂಡೊಯ್ಯಲು ಊರಿನ ಜನ, ಕುಟುಂಬಸ್ಥರು ಪಟ್ಟ ಪಾಡು ದೇಶವನ್ನು ಕಾಯುತ್ತಿದ್ದ ವೀರಯೋಧನಿಗೆ ದೇಶ ಕೊಡುವ ಕೊಡುಗೆ ಇದುವೇ ಏನು ಎನ್ನುವಂತಹ ಪ್ರಶ್ನೆ ಊರಿನ ಜನರಲ್ಲಿ ಮೂಡಿದ್ದರು ಅನುಮಾನವಿಲ್ಲ. ಕೆಲವು ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಶ್ರೀ ಧನಂಜಯರ ಮನೆಗೆ ತೆರಳುವ ಅಡಿಕೆ ಮರದಿಂದ ನಿರ್ಮಿಸಿದ ಕಾಲುಸಂಕ ಕೊಚ್ಚಿಕೊಂಡು ಹೋಗಿತ್ತು. ಅಷ್ಟೇ ಅಲ್ಲದೆ ನಿರ್ಮಾಣವಾದಾಗಿಂತ ಆಗಾಗ ಕೈಕೊಡುವ ಬಾಳುಗೋಡಿನ BSNL ಮೊಬೈಲ್ ಟವರ್ ಸಹ ರಾತ್ರಿ ಪೂರ್ತಿ ಆಫ್ ಆಗಿ ಊರಿನ ಜನರಿಗೆ, ಕುಟುಂಬದವರಿಗೆ, ಬಂಧುಗಳಿಗೆ ಮರಣದ ಸುದ್ದಿ ಮುಟ್ಟಿಸಲೂ ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಮೃತರ ಮನೆಯವರ ಕಣ್ಣೀರಿನ ಕೇಳಿಕೆಗೆ ಊರಿನ ವಿಶ್ವಯುವಕ ಮಂಡಲದ ಯುವಕರು ಹಾಗೂ ಗ್ರಾಮಸ್ಥರೇ ಇಂದು ಗುರುವಾರ ಬೆಳಗಿನ ಜಾವ ತಾತ್ಕಾಲಿಕವಾಗಿ ಕಾಲುಸಂಕವನ್ನು ನಿರ್ಮಿಸಿಕೊಟ್ಟರು.
ಈ ಭಾಗದ ಶಾಸಕರು, ಲೋಕಸಭಾ ಸದಸ್ಯರು, ಅಧಿಕಾರಿಗಳು ಪ್ರಯತ್ನಪಟ್ಟು ಇವರ ಮನೆಗೆ ತೆರಳಲು ಒಂದು ಶಾಶ್ವತ ಕಾಲುಸಂಕವಾದರೂ ಸರ್ಕಾರದ ವತಿಯಿಂದ ನಿರ್ಮಿಸಿ ಕೊಡಬೇಕು ಎನ್ನುವುದು ಮನೆಯವರ ಹಾಗೂ ಊರಿನವರ ಬೇಡಿಕೆಯಾಗಿರುತ್ತದೆ. ದೇಶ ಕಾಯುವ ವೀರಯೋಧನ ಮನೆಗೆ ತೆರಳುವ ಪರಿಸ್ಥಿತಿ ಹೀಗಾದರೆ ಊರಿನ ಉಳಿದ ಕಡೆಗಳಲ್ಲಿ ಕೇಳುವವರೇ ಇಲ್ಲದಂತೆ ಆಗಿದೆ. ಬಾಳುಗೋಡಿನ ಪದಕ ಎಂಬಲ್ಲಿರುವ ಮುಳುಗು ಸೇತುವೆ ಒಂದು ಬದಿ ಕೊಚ್ಚಿ ಹೋಗಿ ಕಳೆದ ಕೆಲವು ವರ್ಷಗಳಿಂದ ಈಗಲೋ ಆಗಲೋ ಎನ್ನುವಂತೆ ಕುಸಿದು ಹೋಗುವ ಪರಿಸ್ಥಿತಿಯಲ್ಲಿದೆ.
ಇನ್ನು ಊರಿನ ಸಣ್ಣಪುಟ್ಟ ಸಮಸ್ಯೆಗಳನ್ನು ಹರಿಹರ ಪಲ್ಲತಡ್ಕ ಗ್ರಾಮಪಂಚಾಯತ್ ನ ಗ್ರಾಮವಾಣಿ ಎಂಬ ವಾಟ್ಸಪ್ ಗ್ರೂಪ್ ನಲ್ಲಿ ಪಂಚಾಯತ್ ನ ಗಮನಕ್ಕೆ ತರುತ್ತಿದ್ದ ಕಾರಣಕ್ಕೆ ಪಿಡಿಓ ಶ್ಯಾಮ್ ಪ್ರಸಾದ್ ಅವರು ಗ್ರಾಮದ ಯುವಕ ಧನರಾಜ್ ಮುಚ್ಚಾರ ಇವರನ್ನು ಗ್ರೂಪಿನಿಂದಲೇ ತೆಗೆದು ಉದ್ಧಟತನ ಪ್ರದರ್ಶಿಸಿದ್ದಾರೆ. ಬಾಳುಗೋಡು ಸಮಸ್ಯೆಗಳ ಗೂಡಾಗಿ ಬದಲಾಗಿರುವ ಇಂತಹ ಸಂದರ್ಭದಲ್ಲಿ ಜನರ ಧ್ವನಿಯನ್ನು ಅಧಿಕಾರಿಗಳೇ ಅಡಗಿಸುವ ಪ್ರಯತ್ನದಲ್ಲಿ ತೊಡಗಿರುವುದು ವಿಷಾದನೀಯ.