Back To Top

 ಆರ್ಸಿಬಿ ವಿಜಯೋತ್ಸವ: ಸಿಎಂ ಆದೇಶದ ಮೇರೆಗೆ ಬಂಧನ ಈ ಹಿನ್ನೆಲೆ ನಿಖಿಲ್ ಸೋಸಲೆ ಬಂಧನಕ್ಕೆ ತಡೆ ನೀಡುವಂತೆ ಪತ್ನಿ ರಿಟ್ ಅರ್ಜಿ

ಆರ್ಸಿಬಿ ವಿಜಯೋತ್ಸವ: ಸಿಎಂ ಆದೇಶದ ಮೇರೆಗೆ ಬಂಧನ ಈ ಹಿನ್ನೆಲೆ ನಿಖಿಲ್ ಸೋಸಲೆ ಬಂಧನಕ್ಕೆ ತಡೆ ನೀಡುವಂತೆ ಪತ್ನಿ ರಿಟ್ ಅರ್ಜಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಆದೇಶದ ಮೇರೆಗೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿಜಯೋತ್ಸವ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ಆದೇಶದ ಮೇರೆಗೆ ಕೆಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಗೆ ಆರ್‌ಸಿಬಿ ಆಯೋಜಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗುತ್ತಿದೆ.ಈ ಹಿನ್ನೆಲೆಯಲ್ಲಿ ಆರ್‌ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥರಾದ ನಿಖಿಲ್ ಸೋಸಲೆ (Nikhil Sosale) ಅವರನ್ನ ಬಂಧಿಸಲಾಗಿದೆ. ಇದನ್ನು ಪ್ರಶ್ನಿಸಿ ನಿಖಿಲ್ ಸೋಸಲೆ ಅವರ ಪತ್ನಿ ಮಾಳವಿಕಾ ನಾಯ್ಕ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಬಂಧನಕ್ಕೆ ತಡೆ ನೀಡುವಂತೆ ಅರ್ಜಿ ಮೂಲಕ ಹೈಕೋರ್ಟ್ ಗೆ ಮನವಿ ಮಾಡಿದ್ದಾರೆ. ಸಿಎಂ ಆದೇಶಾನುಸಾರ ತಮ್ಮ ಪತಿಯನ್ನ ಕಾನೂನುಬಾಹಿರವಾಗಿ ಬಂಧನ ಮಾಡಲಾಗಿದೆ ಎಂದು ನಿನ್ನೆಯ (ಜೂನ್ 05) ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಆಧಾರವಾಗಿಸಿ ರಿಟ್ ಅರ್ಜಿ ಸಲ್ಲಿಸಿದ್ದಾರೆ. ತನಿಖೆಯನ್ನೇ ನಡೆಸದೇ ಸಿಎಂ ಆದೇಶಾನುಸಾರ ಬಂಧಿಸಲಾಗಿದೆ. ಕಾನೂನು, ಸಂವಿಧಾನ ಕಡೆಗಣಿಸಿ ಬಂಧಿಸಲಾಗಿದ್ದು, ಈ ಮೂಲಕ ನಿಖಿಲ್ ಸೋಸಲೆಯ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಅಲ್ಲದೇ ಚಿನ್ನಸ್ವಾಮಿ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಡಿಸಿಎಂ ಭಾಗಿಯಾಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ಡಿಸಿಎಂ ವಿರುದ್ಧ ಗಂಭೀರ ಆರೋಪ

ಆನ್‌ಲೈನ್ ಮೂಲಕ ಉಚಿತ ಪಾಸ್ ವ್ಯವಸ್ಥೆ ಮಾಡಲಾಗಿತ್ತು. ಪಾಸ್ ಇದ್ದವರಿಗಷ್ಟೇ ಚಿನ್ನಸ್ವಾಮಿ ಸ್ಟೇಡಿಯಂಗೆ ಪ್ರವೇಶವಿತ್ತು. ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಖುದ್ದು ಡಿಸಿಎಂ ಸ್ವಾಗತಿಸಿದ್ದರು. ವಿಧಾನಸೌಧದಲ್ಲಿ ಸರ್ಕಾರ, ಸಿಎಂ, ಡಿಸಿಎಂ ಸನ್ಮಾನಿಸಿದ್ದರು. ನಂತರ ಚಿನ್ನಸ್ವಾಮಿ ಸ್ಟೇಡಿಯಂನ ಸಂಭ್ರಮಾಚರಣೆಯಲ್ಲಿ ಡಿಸಿಎಂ ಭಾಗಿಯಾಗಿದ್ದರು. ಅವಘಡ ಮಾಹಿತಿ ತಿಳಿದ ತಕ್ಷಣ ಆರ್‌ಸಿಬಿಯಿಂದ ಕಾರ್ಯಕ್ರಮ ಸ್ಥಗಿತ ಮಾಡಲಾಗಿತ್ತು. ಹೀಗಾಗಿ ಯಾವುದೇ ಲೋಪವೆಸಗಿಲ್ಲ. ಹೀಗಾಗಿ ನಿಖಿಲ್ ಸೋಸಲೆ ಬಂಧನಕ್ಕೆ ತಡೆ ನೀಡುವಂತೆ ಪತ್ನಿ ಮಾಳವಿಕಾ ನಾಯ್ಕ್ ರಿಟ್ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ವಿಮಾನ ನಿಲ್ದಾಣದಲ್ಲಿ ಬಂಧನ

ಸಿಎಂ ಸೂಚನೆ ಮೇರೆಗೆ ಕಬ್ಬನ್ ಪಾರ್ಕ್ ಪೊಲಿಸರು, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾರ್ಕೆಟಿಂಗ್‌ ಹೆಡ್‌ ನಿಖಿಲ್‌ ಸೋಸಲೆ ಅವರನ್ನು ಇಂದು(ಜೂನ್ 06) ಬಂಧಿಸಿದ್ದರು.ಬೆಂಗಳೂರಿನ ವಿಮಾನ ನಿಲ್ದಾಣದಿಂದ, ಮುಂಬೈಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ನಿಖಿಲ್‌ ಸೋಸಲೆ ಅವರನ್ನು ಬಂಧಿಸಲಾಗಿತ್ತು.

ಯಾರು ಈ ನಿಖಿಲ್ ಸೋಸಲೆ?

ನಿಖಿಲ್ ಸೋಸಲೆ ಆರ್‌ಸಿಬಿಯ ಮಾರ್ಕೆಟಿಂಗ್ ಮತ್ತು ಕಂದಾಯ ಮುಖ್ಯಸ್ಥರಾಗಿದ್ದಾರೆ. ನಿಖಿಲ್ ಸೋಸಲೆ ಮೂಲತಃ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (ಯುಎಸ್‌ಎಲ್‌) ನಡೆಸುತ್ತಿರುವ ಡಯಾಜಿಯೊ ಇಂಡಿಯಾದ ಉದ್ಯೋಗಿಯಾಗಿದ್ದಾರೆ. ಬೆಂಗಳೂರಿನಲ್ಲಿ ವಾಸಿಸುವ ಸೋಸಲೆ ಕಳೆದ 13 ವರ್ಷಗಳಿಂದ ಡಯಾಜಿಯೊದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆರ್‌ಸಿಬಿ ಫ್ರಾಂಚೈಸಿಯೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ.

ಹೈಕೋರ್ಟ್ ಗೆ ಕೆಎಸ್ ಸಿಎ ರಿಟ್ ಅರ್ಜಿ

ಇನ್ನೊಂದೆಡೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (KSCA) ಸಹ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದು,ಆರ್ಸಿಬಿ (RCB) ಐಪಿಎಲ್ ಟ್ರೋಫಿ ಗೆಲುವಿನ ಸಂಭ್ರಮಾಚರಣೆಯನ್ನು ವಿಧಾನಸೌಧದ ಎದುರು ನಡೆಸುವಂತೆ ಕರೆ ಕೊಟ್ಟಿದ್ದೇ ಸರ್ಕಾರ ಎಂದು ರಿಟ್ ಅರ್ಜಿಯಲ್ಲಿ ಸ್ಫೋಟಕ ಆರೋಪ ಮಾಡಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಚಿವರು ವಿಧಾನಸೌಧ ಗ್ರ್ಯಾಂಡ್ ಸ್ಟೆಪ್ಸ್ ವೇದಿಕೆಯಲ್ಲಿ ಆಟಗಾರರನ್ನು ಸನ್ಮಾನಿಸಿದ್ದಾರೆ. ಸರ್ಕಾರ, ಸಚಿವರ ಮೇಲಿನ ಜನರ ಆಕ್ರೋಶದ ಹಾದಿ ತಪ್ಪಿಸಲು ಎಫ್ಐಆರ್ ದಾಖಲಿಸಲಾಗಿದೆ ಎಂದು ರಿಟ್ ಅರ್ಜಿಯಲ್ಲಿ ಕೆಎಸ್ಸಿಎ ಉಲ್ಲೇಖಿಸಿದೆ.

ಇದನ್ನು ಓದಿ:

https://infomindz.in/rcb-vijayotsavadalli-durantha-chinnaswamy-kidanganada-bali-kalthulithakke-13-bali/
Prev Post

ಹೆಣ್ಣು ಮಕ್ಕಳ ಜೊತೆ ತಾಯಿ ಕೆರೆಗೆ ಹಾರಿ ಆತ್ಮಹತ್ಯೆ

Next Post

ಕಾಲ್ತುಳಿತ: ರಾಜ್ಯ ಮಾನವ ಹಕ್ಕುಗಳ ಆಯೋಗದಿಂದ ಪೊಲೀಸ್‌ ಆಯುಕ್ತ ಸಹಿತ ಮೂವರಿಗೆ ನೋಟಿಸ್‌

post-bars

Leave a Comment

Related post