Back To Top

 ನಾಯಿ ಕೊಡೆಗಳಂತೆ ಹುಟ್ಟುತ್ತಿರುವ ಪಿಜಿಗಳಿಗೆ ಜಿಲ್ಲಾಡಳಿತದಿಂದ ಕಡಿವಾಣ ಶುರು
June 3, 2025

ನಾಯಿ ಕೊಡೆಗಳಂತೆ ಹುಟ್ಟುತ್ತಿರುವ ಪಿಜಿಗಳಿಗೆ ಜಿಲ್ಲಾಡಳಿತದಿಂದ ಕಡಿವಾಣ ಶುರು

ಜಿಲ್ಲಾಡಳಿತ ಪಿಜಿಗಳ ಮೇಲೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಪಿಜಿ ಮಾಲೀಕರು ಸಕ್ರಮವಾಗಿ ಕಾರ್ಯನಿರ್ವಹಿಸಲು ಮತ್ತು ತೆರಿಗೆ ಪಾವತಿಸಲು ಸಿದ್ಧರಿದ್ದಾರೆ ಎಂದು ಹೇಳುತ್ತಿದ್ದಾರೆ.

ಧಾರವಾಡ: ವಿದ್ಯಾಕಾಶಿ ಅಂತಲೇ ಪ್ರಸಿದ್ಧಿ ಪಡೆದಿದೆ. ಸರಕಾರಿ ಹಾಗೂ ಖಾಸಗಿ ವಿಶ್ವವಿದ್ಯಾಲಯಗಳು ಇಲ್ಲಿವೆ. ಅಲ್ಲದೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೋಚಿಂಗ್ ಸೆಂಟರ್ (Coaching Centre) ಗಳ ಸಂಖ್ಯೆಯೂ ಹೆಚ್ಚಾಗಿದೆ. ಅದಕ್ಕೆ ಪೂರಕವಾಗಿ ಪಿಜಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಆದರೆ ಎಗ್ಗಿಲ್ಲದೆ ಆರಂಭವಾಗುತ್ತಿರುವ ಪಿಜಿಗಳಲ್ಲಿ ಅಧಿಕೃತ ಎಷ್ಟು? ಅನಧಿಕೃತ ಎಷ್ಟು? ಎಂಬ ಲೆಕ್ಕ ಇಲ್ಲ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಗೆ ತೆರಿಗೆ ಸರಿಯಾಗಿ ಬರುತ್ತಿಲ್ಲ. ಮತ್ತೊಂದು ಕಡೆ ಇದೇ ಪಿಜಿಗಳು ಅಕ್ರಮ ದಂಧೆಗಳ ತಾಣವಾಗುತ್ತಿವೆ. ಇದಕ್ಕೆ ಲಗಾಮು ಹಾಕಲು ಜಿಲ್ಲಾಡಳಿತ ನಿರ್ಧರಿಸಿದೆ. ಐಎಎಸ್, ಕೆಎಎಸ್, ಪೊಲೀಸ್ ನೇಮಕಾತಿಯಿಂದ ಹಿಡಿದು ರಾಜ್ಯ ಮತ್ತು ಕೇಂದ್ರ ಸರ್ಕಾರದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಸೆಂಟರ್ಗಳು ಧಾರವಾಡದಲ್ಲಿವೆ.

ಒಂದು ಅಂದಾಜಿನ ಪ್ರಕಾರ ಇಲ್ಲಿರುವ ಹೊರ ಜಿಲ್ಲೆಗಳ ವಿದ್ಯಾರ್ಥಿಗಳ ಸಂಖ್ಯೆ ಒಂದು ಲಕ್ಷ ಮೇಲಿದೆ. ಇದಕ್ಕೆ ತಕ್ಕಂತೆ ಧಾರವಾಡದ ಮೂಲೆ ಮೂಲೆಗಳಲ್ಲಿ ಪಿಜಿಗಳು ತಲೆ ಎತ್ತಿವೆ. ಪಿಜಿಗಳು ಕಮರ್ಷಿಯಲ್ ವ್ಯಾಪ್ತಿಗೆ ಬರುತ್ತವೆ. ಆದರೆ ಬಹುತೇಕ ಕಡೆ ವಾಸದ ಮನೆಗಳನ್ನೇ ಪಿಜಿಗಳನ್ನಾಗಿ ಮಾಡಲಾಗಿದ್ದು, ಸರಿಯಾಗಿ ತೆರಿಗೆ ಕಟ್ಟುತ್ತಿಲ್ಲ. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳುತ್ತಿಲ್ಲ. ಇದನ್ನು ಮನಗಂಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಮಹಾನಗರ ಪಾಲಿಕೆ ಸಿಬ್ಬಂದಿಗೆ ಪಿಜಿಗಳ ಸಂಖ್ಯೆ ಹಾಗೂ ಅಲ್ಲಿರುವ ವ್ಯವಸ್ಥೆಗಳ ಬಗ್ಗೆ ಮಾಹಿತಿ ಕಲೆ ಹಾಕುವಂತೆ ಸೂಚನೆ ನೀಡಿದ್ದಾರೆ. ಧಾರವಾಡದಲ್ಲಿ ಆರಂಭದಲ್ಲಿ ಸಪ್ತಾಪುರ ಹಾಗೂ ಜಯನಗರ ಬಡಾವಣೆಗಳಲ್ಲಿ ಮಾತ್ರ ಕೋಚಿಂಗ್ ಸೆಂಟರ್ಗಳು ಇದ್ದವು. ಆ ಪ್ರದೇಶದ ಸುತ್ತಮುತ್ತ ಮಾತ್ರವೇ ಪಿಜಿಗಳು ಇದ್ದವು. ಆದರೆ ಈಗ ಕೋಚಿಂಗ್ ಸೆಂಟರ್ಗಳ ವ್ಯಾಪ್ತಿ ನಗರದ ತುಂಬೆಲ್ಲ ವ್ಯಾಪಿಸಿದೆ. ಧಾರವಾಡದಲ್ಲಿ ಅನೇಕ ಪ್ರತಿಷ್ಠಿತ ಕಾಲೇಜುಗಳಿದ್ದು, ಬೇರೆ ಜಿಲ್ಲೆಗಳ ವಿದ್ಯಾರ್ಥಿಗಳು ಕೂಡ ವ್ಯಾಸಂಗಕ್ಕಾಗಿ ಬರುತ್ತಾರೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ಹಾಸ್ಟೆಲ್ಗಳ ಲಭ್ಯತೆ ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ಪಿಜಿಗಳತ್ತ ಮುಖ ಮಾಡುತ್ತಿದ್ದಾರೆ.

ಇದನ್ನು ಓದಿ:

https://infomindz.in/kamal-hasan-helikege-nati-ramya-akrosha/
Prev Post

ನವಜಾತ ಶಿಶುವಿನ ಹೆಬ್ಬೆರಳು ಕತ್ತರಿಸಿದ ನರ್ಸ್: ದೂರು ದಾಖಲು

Next Post

ರಾಯಲ್ ಚಾಲೆಂಜರ್ಸ್ ಬೆಂಗಳೂರು  ಗೆಲುವಿಗೆ ವಿಶೇಷ ಪ್ರಾರ್ಥನೆ

post-bars

Leave a Comment

Related post