ಮೆಡಿಕಲ್ ಶಾಪ್ ಸಿಬ್ಬಂದಿ ನಿರ್ಲಕ್ಷ್ಯ:ಹಲ್ಲು ನೋವಿನ ಬದಲು ಬೇರೆ ಔಷಧ ಸೇವಿಸಿ ಮಹಿಳೆ ಸಾವು
ಭೋಪಾಲ್: ಮೆಡಿಕಲ್ ಶಾಪ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಹಲ್ಲು ನೋವಿನ ಬದಲು ಬೇರೆ ಔಷಧ ಸೇವಿಸಿ ಮಹಿಳೆ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಝಬುವಾದಲ್ಲಿ ನಡೆದಿದೆ.
ಹಲ್ಲುನೋವಿಗೆ ಪೇನ್ ಕಿಲ್ಲರ್ ಖರೀದಿಸಲು ಹೋದಾಗ ಔಷಧ ಅಂಗಡಿಯವರು ಸಲ್ಫಾಸ್ ಮಾತ್ರೆ ನೀಡಿದ್ದಾರೆ.ಆ ಸೇವಿಸಿದ ನಂತರ 32 ವರ್ಷದ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 105 (ಕೊಲೆಗೆ ಸಮಾನವಲ್ಲದ ಅಪರಾಧ) ಅಡಿಯಲ್ಲಿ ಅಂಗಡಿಯ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.
ಜಿಲ್ಲಾ ಕೇಂದ್ರದಿಂದ ಸುಮಾರು 3 ಕಿ.ಮೀ ದೂರದಲ್ಲಿರುವ ಧರಂಪುರಿ ಗ್ರಾಮದವರಾದ ರೇಖಾ, ಥಾಂಡ್ಲಾ ಗೇಟ್ ಬಳಿಯ ಮೆಡಿಕಲ್ಗೆ ಹೋಗಿ ಹಲ್ಲುನೋವಿಗೆ ಔಷಧಿ ಕೇಳಿದ್ದಾರೆ. ಮೆಡಿಕಲ್ನಲ್ಲಿದ್ದ ವ್ಯಕ್ತಿ ಪೇನ್ ಕಿಲ್ಲರ್ ಬದಲು ಸಲ್ಫಾಸ್ ಮಾತ್ರೆ ನೀಡಿದ್ದಾರೆ. ಆ ಮಾತ್ರೆ ಸೇವಿಸಿದ ಬೆನ್ನಲ್ಲೇ ಮಹಿಳೆಯ ಆರೋಗ್ಯ ಹದಗೆಟ್ಟಿತು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಹಿಳೆ ಬದುಕುಳಿಯಲಿಲ್ಲ.
ಮರಣೋತ್ತರ ಪರೀಕ್ಷೆಯ ಬಳಿಕ ಮಹಿಳೆಯ ಸಾವಿಗೆ ಸಲ್ಫಾಸ್ ಮಾತ್ರೆ ಕಾರಣ ಎಂದು ತಿಳಿದುಬಂದಿದೆ. ನಂತರ ಮಹಿಳೆಯ ಪತಿ ದೂರು ನೀಡಿದ್ದು, ಅಂಗಡಿಯ ಮಾಲೀಕ ಲೋಕೇಂದ್ರ ಬಾಬೆಲ್ ಎಂಬಾತನನ್ನು ಬಂಧಿಸಲಾಗಿದೆ.
ಸಲ್ಫಾಸ್ ಒಂದು ವಿಷಕಾರಿ ವಸ್ತುವಾಗಿದ್ದು, ಅದನ್ನು ಬ್ಯಾಕ್ಟೀರಿಯಾ, ಸಣ್ಣಪುಟ್ಟ ಕೀಟಗಳನ್ನು ಕೊಲ್ಲಲು ಬಳಸುತ್ತಾರೆ. ಆದರೆ, ಮೆಡಿಕಲ್ ಶಾಪ್ನಲ್ಲಿ ಸಲ್ಫಾಸ್ ಮಾತ್ರೆಗಳನ್ನು ಯಾಕೆ ಇರಿಸಲಾಗಿತ್ತು ಎಂದು ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಹೇಳಿದ್ದಾರೆ.
ತಾಳಿ ಕಟ್ಟಿ 20 ನಿಮಿಷಕ್ಕೆ ಹೃದಯಾಘಾತದಿಂದ ವರ ಸಾವು, ಸೂತಕದ ಮನೆಯಾದ ಮದುವೆ ಮಂಟಪ!