18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಮೇ 17ರಿಂದ ಪುನಾರಂಭ
ಜೂ 11ರಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್
ಬೆಂಗಳೂರು: ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವಿನ ಬಿಕ್ಕಟ್ಟಿನಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಇದೇ ಮೇ 17ರಿಂದ ಪುನಾರಂಭವಾಗುತ್ತಿದೆ. ಜೂನ್ 3ರಂದು ಫೈನಲ್ ಪಂದ್ಯ ನಡೆಯಲಿದೆ. ಇನ್ನು ಟೂರ್ನಿ ಸ್ಥಗಿತಗೊಂಡಿದ್ದ ಕಾರಣ ತಮ್ಮ ತವರಿಗೆ ಪಯಣ ಬೆಳೆಸಿದ್ದ ವಿದೇಶಿ ಆಟಗಾರರು ತಂಡಗಳಿಗೆ ಮರಳುತ್ತಿದ್ದು, ಕೆಲ ಆಟಗಾರರು ವಾಪಸ್ಸಾಗಲಾಗದೇ ನಿರಾಸೆ ಮೂಡಿಸಿದ್ದಾರೆ. ಐಪಿಎಲ್ ಬಳಿಕ ಜೂನ್ 11ರಂದು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಯಾಗಲಿವೆ. ಜೂನ್ 11 ರಿಂದ ಲಾರ್ಡ್ಸ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗೆ ದಕ್ಷಿಣ ಆಫ್ರಿಕಾ ಸಿದ್ಧತೆ ನಡೆಸುತ್ತಿದ್ದು, ತನ್ನ ಆಟಗಾರರಿಗೆ ಐಪಿಎಲ್ 2025ರಿಂದ ಮೇ 26ರೊಳಗೆ ಮರಳುವಂತೆ ಸೂಚಿಸಿದೆ. ಐಪಿಎಲ್ ಪ್ಲೇಆಫ್ಗಳು ಮೇ 29 ರಿಂದ ಆರಂಭವಾಗಲಿದ್ದು, ಆರ್ಸಿಬಿ, ಜಿಟಿ, ಎಂಐ, ಪಿಬಿಕೆಎಸ್ ತಂಡಗಳಿಗೆ ಸವಾಲಾಗಲಿದೆ.