Back To Top

 ಕುಡಿಯುವ ನೀರು ಕೂಡ ಅಪಾಯಕಾರಿ: ಪರೀಕ್ಷೆಗೊಳಪಡಿಸದಿದ್ದರೆ ಮನುಷ್ಯನ ಜೀವಕ್ಕೆ ಕಂಟಕ
April 12, 2025

ಕುಡಿಯುವ ನೀರು ಕೂಡ ಅಪಾಯಕಾರಿ: ಪರೀಕ್ಷೆಗೊಳಪಡಿಸದಿದ್ದರೆ ಮನುಷ್ಯನ ಜೀವಕ್ಕೆ ಕಂಟಕ

ಬಾಟಲಿಗಳಲ್ಲಿ ಸಿಗುವ ಕುಡಿಯುವ ನೀರಷ್ಟೇ ಅಲ್ಲ; ರಾಜ್ಯದ ಬಹುತೇಕ ಕಡೆ ಸಹಜವಾಗಿ ಸಿಗುವ ಕುಡಿಯುವ ನೀರು ಕೂಡ ಅಪಾಯಕಾರಿ ಮತ್ತು ವಿಷಕಾರಿಯಾಗಿದೆ. ಈ ಮೂಲಕ ಭೂಗರ್ಭದಲ್ಲಿರುವ ಜೀವಜಲವು ಮನುಷ್ಯನ ಜೀವಕ್ಕೆ ಕಂಟಕ ಎಂಬಂತಾಗಿದೆ.

jkk

ಬೆಂಗಳೂರು: ಬಾಟಲಿಗಳಲ್ಲಿ ಸಿಗುವ ಕುಡಿಯುವ ನೀರಷ್ಟೇ ಅಲ್ಲ; ರಾಜ್ಯದ ಬಹುತೇಕ ಕಡೆ ಸಹಜವಾಗಿ ಸಿಗುವ ಕುಡಿಯುವ ನೀರು ಕೂಡ ಅಪಾಯಕಾರಿ ಮತ್ತು ವಿಷಕಾರಿಯಾಗಿದೆ. ಈ ಮೂಲಕ ಭೂಗರ್ಭದಲ್ಲಿರುವ ಜೀವಜಲವು ಮನುಷ್ಯನ ಜೀವಕ್ಕೆ ಕಂಟಕ ಎಂಬಂತಾಗಿದೆ.
ಹೌದು! ಅಂತರ್ಜಲ ನಿರ್ದೇಶನಾಲಯ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ರಾಜ್ಯದ 23 ಜಿಲ್ಲೆಗಳ 450ಕ್ಕೂ ಹೆಚ್ಚಿನ ಅಂತರ್ಜಲದ ನೀರಿನ ಮಾದರಿಗಳಲ್ಲಿ ಫ್ಲೋರೈಡ್‌ ಮತ್ತು ನೈಟ್ರೇಟ್‌ ಪ್ರಮಾಣ ಮಿತಿಗಿಂತ ಹೆಚ್ಚಾಗಿದೆ.
ಈ ಅಂಶಗಳು ಕುಡಿಯುವ ನೀರಿನ ದೃಷ್ಟಿಯಿಂದ ಮಾನವ ಆರೋಗ್ಯಕ್ಕೆ ಹಾನಿಕಾರಕ. ಕೃಷಿಗೂ ಅಪಾಯಕಾರಿ ಎನ್ನಲಾಗುತ್ತದೆ. ಬೇಸಗೆಯಲ್ಲಿ ಈ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಬಹುದು.
“ಭಾರತೀಯ ಕುಡಿಯುವ ನೀರಿನ ನಿರ್ದಿಷ್ಟತೆಯ ಅನುಮತಿಸುವ ಮಿತಿಗಳು’ (ದಿ ಪರ್ಮಿಸೆಬಲ್‌ ಲಿಮಿಟ್ಸ್‌ ಆಫ್ ಇಂಡಿಯನ್‌ ಡ್ರಿಂಕಿಂಗ್‌ ವಾಟರ್‌ ಸ್ಪೆಸಿಫಿಕೇಷನ್‌) ಪ್ರಕಾರ ಒಂದು ಲೀಟರ್‌ ನೀರಿನಲ್ಲಿ 45 ಮಿ.ಗ್ರಾಂ ನೈಟ್ರೇಟ್‌ ಹಾಗೂ 1 ಮಿ.ಗ್ರಾಂ ಫ್ಲೋರೈಡ್‌ ಇರಬಹುದು. ಆದರೆ ರಾಜ್ಯದ ಬಹುತೇಕ ಕಡೆ ಈ ಮಿತಿ ದಾಟಿದೆ. 13 ಜಿಲ್ಲೆಗಳ 36 ತಾಲೂಕುಗಳ 100ಕ್ಕೂ ಅಧಿಕ ಗ್ರಾಮಗಳಲ್ಲಿ ಫ್ಲೋರೈಡ್‌ ಪ್ರಮಾಣ ಮಿತಿಗಿಂತ ಹೆಚ್ಚಾಗಿದೆ. ಅದೇ ರೀತಿ 26 ಜಿಲ್ಲೆಗಳ 100ಕ್ಕೂ ಅಧಿಕ ತಾಲೂಕುಗಳ 350ಕ್ಕೂ ಅಧಿಕ ಗ್ರಾಮಗಳಲ್ಲಿ ನೈಟ್ರೇಟ್‌ ಪ್ರಮಾಣ ಮಿತಿಗಿಂತ ಅಧಿಕವಾಗಿದೆ.
ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ಕುಡಿಯುವ ನೀರು ಒದಗಿಸುವುದು “ಸುಸ್ಥಿರ ಅಭಿವೃದ್ಧಿ ಗುರಿಗಳು-2030ರ’ ಪೈಕಿ ಶುದ್ಧ ನೀರಿನ ಲಭ್ಯತೆ ಪ್ರಮುಖವಾಗಿದೆ. ಈ ಗುರಿ ಸಾಧನೆಯಲ್ಲಿ ದೇಶದಲ್ಲಿ ಕರ್ನಾಟಕವು ಮುಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ಆದರೆ ರಾಜ್ಯದ ಅನೇಕ ಕಡೆ ನೀರಿನಲ್ಲಿ ನೈಟ್ರೇಟ್‌, ಫ್ಲೋರೈಡ್‌ ಮತ್ತಿತರ ವಿಷಕಾರಿ ಅಂಶಗಳು ಹೆಚ್ಚಾಗಿರುವುದು ಅಂತಿಮ ಗುರಿ ಸಾಧನೆಗೆ ಅಡ್ಡಿಯಾಗಲಿದೆ. ಅಂತರ್ಜಲದ ಅತಿಯಾದ ಬಳಕೆ ತಡೆದು, ಹೆಚ್ಚೆಚ್ಚು ಜಲಮೂಲಗಳ ಮರುಪೂರಣ ಇದಕ್ಕೆ ಪರಿಹಾರವಾಗಿದೆ ಎಂಬುದು ಅಂತರ್ಜಲ ತಜ್ಞರ ಅಭಿಪ್ರಾಯ.
ರಾಯಚೂರು ಜಿಲ್ಲೆಯ 34, ಕೋಲಾರ ಜಿಲ್ಲೆಯ 18 ಹಾಗೂ ಚಿತ್ರದುರ್ಗ ಜಿಲ್ಲೆಯ 14 ಗ್ರಾಮಗಳಲ್ಲಿ ಫ್ಲೋರೈಡ್‌ ಪ್ರಮಾಣ ಮಿತಿಗಿಂತ ಹೆಚ್ಚಾಗಿದೆ. ಅದರಲ್ಲೂ ಪ್ರತೀ ಲೀಟರ್‌ಗೆ ಫ್ಲೋರೈಡ್‌ ಪ್ರಮಾಣ ಗರಿಷ್ಠ 1 ಮಿಲಿ ಗ್ರಾಂ ಇದ್ದರೆ, ರಾಯಚೂರು ತಾಲೂಕು ದಿನ್ನಿ ಗ್ರಾಮದಲ್ಲಿ ಅತೀ ಹೆಚ್ಚು 3.43 ಮಿಲಿ ಗ್ರಾಂ ಇದೆ. ಅದೇ ರೀತಿ ಬೆಳಗಾವಿ ಜಿಲ್ಲೆಯ 45, ಕೊಪ್ಪಳ ಜಿಲ್ಲೆಯ 29, ಕೋಲಾರ ಜಿಲ್ಲೆಯ 27 ಗ್ರಾಮಗಳಲ್ಲಿ ನೈಟ್ರೇಟ್‌ ಪ್ರಮಾಣ ಮಿತಿಗಿಂತ ಹೆಚ್ಚಾಗಿದೆ. ಅದರಲ್ಲೂ ಪ್ರತೀ ಲೀಟರ್‌ಗೆ 45 ಮಿಲಿ ಗ್ರಾಂ ನೈಟ್ರೇಟ್‌ ಅನುಮತಿಸಬಹುದಾದ ಮಿತಿ ಇದ್ದರೆ, ಕೊಪ್ಪಳ ಜಿಲ್ಲೆಯ ಭಾನಾಪುರ ಗ್ರಾಮದಲ್ಲಿ ಗರಿಷ್ಠ ನೈಟ್ರೇಟ್‌ ಪ್ರಮಾಣ 65.57 ಮಿಲಿ ಗ್ರಾಂ ಇದೆ.

ಅಂತರ್ಜಲ ಗುಣಮಟ್ಟವನ್ನು ಆಗಾಗ ಪರಿಶೀಲನೆ ನಡೆಸಲಾಗುತ್ತದೆ. ಭಾರತೀಯ ವಿಜ್ಞಾನ ಸಂಸ್ಥೆ ಸೇರಿ ಕೇಂದ್ರ ಸರಕಾರದ ಇನ್ನೊಂದು ಸಂಸ್ಥೆಯಿಂದ ನೀರಿನ ಗುಣಮಟ್ಟದ ತಪಾಸಣೆ ನಡೆಸಲಾಗಿದೆ. ವಿಷಕಾರಿ ಅಂಶಗಳು ಕಂಡುಬಂದ ಕಡೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಇಲಾಖೆ ಇದರ ಬಗ್ಗೆ ನಿರಂತರವಾಗಿ ನಿಗಾ ಇಟ್ಟಿರುತ್ತದೆ.
– ಎನ್‌.ಎಸ್‌. ಬೋಸರಾಜ್‌, ಸಣ್ಣ ನೀರಾವರಿ ಸಚಿವ

-ರಫೀಕ್‌ ಅಹ್ಮದ್‌

ಇದನ್ನು ಓದಿ:

https://infomindz.in/swantha-makkala-mele-atyachara/
Prev Post

ಬೊಲೆರೋ ಹಾಗೂ ಸಾರಿಗೆ ಬಸ್ ನಡುವೆ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ನಾಲ್ವರು…

Next Post

ಮುಸ್ಲಿಂ ಯುವತಿ, ಹಿಂದೂ ಯುವಕನ ಮೇಲೆ ನೈತಿಕ ಪೊಲೀಸ್‌ಗಿರಿ ಪ್ರಕರಣ: ಅಪ್ರಾಪ್ತ ಸೇರಿ…

post-bars

Leave a Comment

Related post