ಚೀನಾ- ಅಮೆರಿಕ ನಡುವಿನ ಪ್ರತಿಸುಂಕದ ವ್ಯಾಪಾರ ಬಿಕ್ಕಟ್ಟು: ಚಿನ್ನದ ಬೆಲೆ ಏರಿಕೆ
ಚೀನಾ ಮತ್ತು ಅಮೆರಿಕ ನಡುವಿನ ಪ್ರತಿಸುಂಕದ ವ್ಯಾಪಾರ ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರಿದ್ದಲ್ಲದೇ, ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 5,000 ರೂಪಾಯಿ ಏರಿಕೆಯಾಗಿದ್ದು, ಇದರಿಂದ ಹಳದಿ ಲೋಹದ ಬೆಲೆ ಗಗನಕ್ಕೇರಿದಂತಾಗಿದೆ.

ನವದೆಹಲಿ: ಚೀನಾ ಮತ್ತು ಅಮೆರಿಕ ನಡುವಿನ ಪ್ರತಿಸುಂಕದ ವ್ಯಾಪಾರ ಬಿಕ್ಕಟ್ಟು ಜಾಗತಿಕವಾಗಿ ಪರಿಣಾಮ ಬೀರಿದ್ದಲ್ಲದೇ, ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಬರೋಬ್ಬರಿ 5,000 ರೂಪಾಯಿ ಏರಿಕೆಯಾಗಿದ್ದು, ಇದರಿಂದ ಹಳದಿ ಲೋಹದ ಬೆಲೆ ಗಗನಕ್ಕೇರಿದಂತಾಗಿದೆ.
ಶುಕ್ರವಾರ (ಏ.11) ಭಾರತದಲ್ಲಿ 2,000 ರೂಪಾಯಿ ಏರಿಕೆಯಾಗಿದೆ.
ಗುರುವಾರ (ಏ.10) ಚಿನ್ನದ ಬೆಲೆ 2,940 ರೂ. ಏರಿಕೆ ಕಂಡಿದ್ದು, ಕಳೆದ ಎರಡು ದಿನಗಳಲ್ಲಿ 5,000 ರೂ. ಏರಿಕೆಯಾದಂತಾಗಿದೆ ಎಂದು ವರದಿ ತಿಳಿಸಿದೆ.
ವಾಣಿಜ್ಯ ನಗರಿ ಮುಂಬೈನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ಬೆಲೆ 87,450 ರೂಪಾಯಿಗೆ ಏರಿಕೆಯಾಗಿದ್ದು, 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 95,400ಕ್ಕೆ ಹೆಚ್ಚಳವಾಗಿದೆ. 75 ದೇಶಗಳ ಮೇಲಿನ ಆಮದು ಸುಂಕವನ್ನು 90 ದಿನಗಳವರೆಗೆ ವಿನಾಯ್ತಿ ನೀಡಲಾಗಿದೆ ಎಂದು ಅಮೆರಿಕ ಘೋಷಿಸಿದ ನಂತರವೂ ಪ್ರತಿಸುಂಕದ ವಿಚಾರದಲ್ಲಿ ಅಮೆರಿಕ-ಚೀನಾ ನಡುವಿನ ಸಂಘರ್ಷ ಮುಂದುವರಿದಿರುವುದು ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 87,450 ರೂಪಾಯಿ ಹಾಗೂ 24 ಕ್ಯಾರೆಟ್ ನ ಹತ್ತು ಗ್ರಾಮ್ ಚಿನ್ನದ ಬೆಲೆ 96,280 ರೂಪಾಯಿ. ಅದೇ ರೀತಿ ಬೆಳ್ಳಿ ಬೆಲೆಯಲ್ಲಿ 100 ರೂಪಾಯಿ ಹೆಚ್ಚಳವಾಗಿದ್ದು, ಮುಂಬೈನಲ್ಲಿ 1ಕೆಜಿ ಬೆಳ್ಳಿ ಬೆಲೆ 97,100 ರೂಪಾಯಿಗೆ ಏರಿಕೆಯಾಗಿದೆ ಎಂದು ಗುಡ್ ರಿಟರ್ನ್ಸ್ ಡಾಟ್ ಇನ್ ತಿಳಿಸಿದೆ.