Back To Top

March 10, 2025

“ಯಕ್ಷ ಕಲಾ ನಿಪುಣ”

ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ ಯಾರು :-
ನಮ್ಮ ಪರಿಸರವೇ ಯಕ್ಷಗಾನದ ಆಡುಂಬೊಲವಾಗಿತ್ತು. ವರ್ಷಕ್ಕೆ ಅನೇಕ ಮೆಳಗಳು ಇಲ್ಲಿ ಬಂದು ಪ್ರದರ್ಶನ ನೀಡುತ್ತಾ ಇರುತ್ತಿದ್ದವು. ಬಾಲ್ಯದಲ್ಲಿ, ನಮ್ಮೂರಿನಲ್ಲಿ ನಡೆಯುತ್ತಿದ್ದ ಎಲ್ಲಾ ಆಟಗಳನ್ನು ಪ್ರೇಕ್ಷಕರಾಗಿ ತಾತ್ಸಾರವಿಲ್ಲದೆ ನೋಡುತ್ತಿದ್ದೆ. ಮರುದಿನ ಬೆಳಗ್ಗೆ, ಅಮ್ಮನ ಸೀರೆ ಮತ್ತು ಅಪ್ಪನ ಪಂಚೆಯನ್ನು ಬಳಸಿ, ನನ್ನದೇ ಕಲ್ಪನೆಯ ವೇಷಧಾರಣೆ ಮಾಡುತ್ತಿದ್ದೆ. ಮನೆಯಲ್ಲಿ ಇದ್ದ ಟೇಪ್ ರೆಕಾರ್ಡರ್‌ನಲ್ಲಿ ಯಕ್ಷಗಾನದ ಪದ್ಯಗಳನ್ನು ಹಾಕಿಕೊಂಡು ಕುಣಿಯುತ್ತಿದ್ದೆ. ಆ ಕ್ಷಣಗಳು ಅನಿರ್ವಚನೀಯ ಸಂತೋಷವನ್ನು ನೀಡುತ್ತಿದ್ದವು. ಕ್ರಮೇಣ, ಈ ಆಸಕ್ತಿ ಯಕ್ಷಗಾನ ಕಲಿಯುವ ಹಂಬಲವಾಗಿ ಬೆಳೆಯಿತು. ಆದರೆ, ಊರಿನಲ್ಲಿ ಕಲಿಯಲು ಸೂಕ್ತ ಅವಕಾಶಗಳು ಇರಲಿಲ್ಲ. ವಿದ್ಯಾಭ್ಯಾಸ ಮುಗಿದ ಬಳಿಕ, ಉದ್ಯೋಗದ ನಿಮಿತ್ತ ಬೆಂಗಳೂರಿಗೆ ಬಂದೆ. ಬೆಂಗಳೂರಿನಲ್ಲಿ ಯಕ್ಷಗಾನ ಕಲಿಕೆ ಸಾಧ್ಯವಿದೆ ಎಂಬುದು ತಿಳಿದಾಗ, ನನ್ನ ೨೫ನೇ ವಯಸ್ಸಿನಲ್ಲಿ ಯಕ್ಷಗಾನವನ್ನು ಅಧಿಕೃತವಾಗಿ ಕಲಿಯಲು ಪ್ರಾರಂಭಿಸಿದೆ.

ನಿಮ್ಮ ನೆಚ್ಚಿನ ಪ್ರಸಂಗಗಳು:-
ಬಹುತೇಕ ಎಲ್ಲಾ ಪೌರಾಣಿಕ ಪ್ರಸಂಗಗಳು ಇಷ್ಟ. ನಮ್ಮ ಬದುಕು ನೆಲೆಯಾಗಿರುವುದೇ ಭಾವನೆಗಳ ಮೇಲೆ. ಅಂತಹ ಭಾವ ತೀವ್ರತೆಯನ್ನು ಬೇಡುವ ಪ್ರಸಂಗಳು ಬಹಳವೇ ಇಷ್ಟವಾಗುತ್ತವೆ.
ನೆಚ್ಚಿನ ವೇಷಗಳು:-
ಕಚದೇವಯಾನಿ ಪ್ರಸಂಗದ ಶುಕ್ರ, ಮಾನಿಷಾದದ ಲಕ್ಷ್ಮಣ, ಕಂಸ ವಧೆಯ ಕಂಸ, ಜಾಂಬವತಿ ಕಲ್ಯಾಣದ ಜಾಂಬವ, ಲವಕುಶದ ರಾಮ, ಅತಿಕಾಯ ಕಾಳಗದ ಅತಿಕಾಯ, ರುಕ್ಮಿಣಿ ಕಲ್ಯಾಣದ ರುಕ್ಮ, ರಾವಣ ವಧೆಯ ರಾವಣ, ವಾಲಿ ವಧೆಯ ವಾಲಿ ಇತ್ಯಾದಿ.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಒಂದು ಪ್ರಸಂಗದ ಪಾತ್ರವೆಂದರೆ, ಅದು ನಮ್ಮ ಸ್ವಭಾವಕ್ಕಿಂತ ವಿಭಿನ್ನವಾದ ಮನಸ್ಥಿತಿ ಮತ್ತು ವ್ಯಕ್ತಿತ್ವ. ಅದನ್ನು ಆವಾಹಿಸಲು ಪೂರ್ವಸಿದ್ಧತೆ ಅತ್ಯಗತ್ಯ. ನನ್ನ ಕಲ್ಪನೆಯಲ್ಲಿ ಇದು ಸಾಯುಜ್ಯದ ಸ್ಥಿತಿ – ಪಾತ್ರದೊಂದಿಗೆ ಪರಿಪೂರ್ಣ ತಾದಾತ್ಮ್ಯ. ರಂಗದಲ್ಲಿ ಆ ಪ್ರವೇಶ ನಮಗೆ ಸಾಧ್ಯವಾಗದಿದ್ದರೆ, ನಮ್ಮ ಸ್ವಂತ ವ್ಯಕ್ತಿತ್ವವೇ ಕಾಣಿಸಿಕೊಳ್ಳುವ ಅಪಾಯವಿದೆ. ಈ ಜಾಗೃತಿ ಪ್ರತಿಯೊಬ್ಬ ನಟನಿಗೂ ಅಗತ್ಯ. ನಾನು ಮಾಡುವ ಪ್ರತಿಯೊಂದು ಪಾತ್ರಕ್ಕಾಗಿ ನನ್ನ ಮಿತಿಯಲ್ಲೇ ಪೂರ್ವಸಿದ್ಧತೆ ಮಾಡಿಕೊಳ್ಳುತ್ತೇನೆ. ಪಾತ್ರಗಳ ಸ್ಥಾಯಿಭಾವ ಮತ್ತು ಸಂಚಾರಿಭಾವ ಅರ್ಥೈಸಿಕೊಳ್ಳಲು ಪ್ರಯತ್ನಿಸುತ್ತೇನೆ. ರಂಗದ ದೃಷ್ಟಿಯಿಂದ ಇದು ಸೂಕ್ಷ್ಮ ವಿಷಯವಾಗಿರುವುದರಿಂದ, ಪಾತ್ರಗಳ ಅಧ್ಯಯನವೇ ಇದನ್ನು ಸಂಪೂರ್ಣವಾಗಿ ಅರಿಯುವ ಮಾರ್ಗ. ಅದಕ್ಕಾಗಿ ಪೌರಾಣಿಕ ಪುಸ್ತಕಗಳನ್ನು ಓದಿ ಪಾತ್ರದ ಬಗ್ಗೆ ಆಳವಾಗಿ ತಿಳಿಯಲು ಪ್ರಯತ್ನಿಸುತ್ತೇನೆ. ನಾನು ಮಾಡುವ ಪಾತ್ರದ ಜೊತೆಗೆ ಎದುರಿನ ಪಾತ್ರಗಳ ಬಗ್ಗೆಯೂ ಅಧ್ಯಯನ ಮಾಡುತ್ತೇನೆ. ಪೌರಾಣಿಕ ಪಾತ್ರಗಳ ಬಗ್ಗೆ ತಳಹದಿ ಅಧ್ಯಯನ ಮಾಡಿದ ಶ್ರೀಧರ ಡಿ.ಎಸ್. ಅವರೊಂದಿಗೆ ಚರ್ಚಿಸುತ್ತೇನೆ. ಜೊತೆಗೆ ಅಜಿತ್ ಕಾರಂತ್, ಗಣಪತಿ ಹೆಗಡೆ ಕಪ್ಪೆಕೆರೆ ಮುಂತಾದ ಸ್ನೇಹಿತರೊಂದಿಗೆ ಪಾತ್ರ, ಪ್ರಸಂಗ, ಸನ್ನಿವೇಶಗಳ ಬಗ್ಗೆ ಚರ್ಚಿಸುವುದರಿಂದ ಹೆಚ್ಚಿನ ಸ್ಪಷ್ಟತೆ ದೊರಕುತ್ತದೆ.
ಮುಖ್ಯವಾಗಿ, ಪ್ರಸಂಗದ ಆಶಯ, ದೃಶ್ಯ ನಿರ್ಮಾಣ, ಪಾತ್ರಗಳ ಅಭಿವ್ಯಕ್ತಿ, ಹಾಗೂ ಪರಿಣಾಮ ಬೀರುವ ಮಾತುಗಳ ಬಗ್ಗೆ ನೋಟ್ಸ್ ಮಾಡಿಕೊಂಡು ಅಧ್ಯಯನ ಮಾಡುತ್ತೇನೆ.

ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ಕಲೆಯ ಇಂದಿನ ಸ್ಥಿತಿ-ಗತಿ ಕುರಿತು ಮಾತನಾಡುವಾಗ ಎರಡು ಪ್ರಮುಖ ಅಂಶಗಳನ್ನು ಗಮನಿಸಬೇಕಾಗುತ್ತದೆ – ವ್ಯವಹಾರಿಕತೆ ಮತ್ತು ಕಲಾತ್ಮಕತೆ. ಮಾರ್ಕೆಟ್ ದೃಷ್ಟಿಯಿಂದ ನೋಡಿದರೆ, ಕಲೆ ಹಿಂದಿಗಿಂತ ಖಂಡಿತವಾಗಿಯೂ ಬೆಳವಣಿಗೆಯ ಹಾದಿಯಲ್ಲಿದೆ. ಪ್ರತಿ ವರ್ಷ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿವೆ. ಇದು ಯಾವುದೇ ಕಲೆಗೆ ಅಪೂರ್ವ ದಾಖಲೆ. ಈ ಬೆಳವಣಿಗೆ ಹೆಮ್ಮೆ ಪಡುವಂತಹದ್ದು.

ಆದರೆ, ಇದರೊಂದಿಗೇ ಒಂದು ಬೇಸರದ ಸಂಗತಿಯಾಗಿರುವುದು – ಕಲಾತ್ಮಕತೆ ದಿನೇ ದಿನೇ ಕುಸಿಯುತ್ತಿರುವುದು. ಕಲೆ ತನ್ನ ಮೂಲ ಆಶಯವನ್ನು ಕಳೆದುಕೊಳ್ಳುತ್ತಿರುವುದನ್ನು ಯಾರೂ ನಿರಾಕರಿಸಲಾರರು. ಇದರ ಹೊಣೆ ಎಲ್ಲರ ಮೇಲೂ ಇದೆ. ಆರು-ಏಳು ಶತಮಾನಗಳ ಕಾಲ ಬೆಳೆದಿರುವ ಈ ಕಲೆಯ ಶ್ರೇಷ್ಠತೆಯನ್ನು ಉಳಿಸಿಕೊಳ್ಳಲು ಪ್ರತಿಯೊಬ್ಬರೂ ಶ್ರಮಿಸಬೇಕಾಗಿದೆ. ಯಾರು ತಪ್ಪು ಮಾಡಿದರೆಂದು ದೂರುವ ಹಂತವನ್ನು ಮೀರಿ, ಈ ಕಲೆಯನ್ನು ಮುಂದಿನ ತಲೆಮಾರಿಗೆ ಶ್ರೇಷ್ಠವಾದ ಸ್ಥಿತಿಯಲ್ಲಿ ಬಿಟ್ಟುಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.

ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕನ್ನಡದ ಮಹಾನ್ ಸಾಹಿತಿಗಳಾದ ಭೈರಪ್ಪನವರ ಪ್ರೇಕ್ಷಕರ ಬಗ್ಗೆ ಹೇಳಿದ ಮಾತು ಯಾವಾಗಲೂ ನೆನಪಾಗುತ್ತದೆ:
‘ಪ್ರೇಕ್ಷಕ ಬಯಸಿದ್ದಾನೆ ಎಂಬ ಕಾರಣಕ್ಕಾಗಿ ಅವರ ಮಟ್ಟದಲ್ಲಿ ಕಲೆಯನ್ನು ಪ್ರದರ್ಶಿಸಬಾರದು. ನಮ್ಮ ಪ್ರದರ್ಶನದಿಂದ ಪ್ರೇಕ್ಷಕನೇ ನಮ್ಮ ಮಟ್ಟಕ್ಕೆ ಬೆಳೆಯಬೇಕು. ಆ ಸಾಮರ್ಥ್ಯ ನಮ್ಮಲ್ಲಿ ಇದೆಯೇ ಎಂಬುದನ್ನು ಮೊದಲಾಗಿ ನಾವು ಕೇಳಿಕೊಳ್ಳಬೇಕು.’ಎಂತಹ ಅದ್ಭುತ ಮಾತು ಅಲ್ಲವೇ? ಇದು ಯಕ್ಷಗಾನಕ್ಕೂ ಅಚ್ಚುಕಟ್ಟಾಗಿ ಅನ್ವಯಿಸುತ್ತದೆ. ಈ ಮಾತನ್ನು ಸತ್ಯವಾಗಿಸುವುದಕ್ಕಾಗಿ ಕಲಾವಿದರಾಗಿ ನಾವು ಎಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ? ಕಲೆ ಯಾವತ್ತೂ ಕಲಾವಿದನಿಂದ ಪ್ರೇಕ್ಷಕನ ಕಡೆಗೆ ಹರಿಯಬೇಕು, ಪ್ರೇಕ್ಷಕನಿಂದ ಕಲಾವಿದನ ಕಡೆಗೆ ಅಲ್ಲ. ಈ ತತ್ವವನ್ನು ಉಳಿಸಿಕೊಂಡಾಗ ಮಾತ್ರ ಕಲೆಯ ಶ್ರೇಷ್ಠತೆಯು ಮುಂದುವರಿಯುತ್ತದೆ.

ನೀವು ಹೆಚ್ಚಾಗಿ ನಡುತಿಟ್ಟು ಯಕ್ಷಗಾನದ ವೇಷಗಳ ಬಗ್ಗೆ ಹೆಚ್ಚಿನ ಗಮನವನ್ನು ಕೊಡುತ್ತೀರಿ ಅದರ ಬಗ್ಗೆ ನಿಮ್ಮಗೆ ಒಲವು ಹೇಗೆ:-
ಕನ್ನಡ ಭಾಷೆಯನ್ನು ತೆಗೆದುಕೊಂಡರೆ ಕುಂದಗನ್ನಡ, ಮಂಡ್ಯ ಕನ್ನಡ, ಬಯಲುಸೀಮೆ ಕನ್ನಡ, ಹವ್ಯಕ ಕನ್ನಡ ಇತ್ಯಾದಿ ಪ್ರಭೇದಗಳನ್ನು ಕಾಣುವುದಕ್ಕೆ ಸಾಧ್ಯ. ಇದು ಒಂದು ಭಾಷೆಯ ಸೊಗಸಿನ ಸಂಕೇತ ಮತ್ತು ಅದರ ಶ್ರೀಮಂತಿಕೆಯ ಪ್ರತೀಕ. ಅಂತೆಯೇ ನಡುತಿಟ್ಟು ಎನ್ನುವುದು ಯಕ್ಷಗಾನದ ಪ್ರಾದೇಶಕವಾದ ಭಿನ್ನತೆ ಮತ್ತು ಅದೊಂದು ನಮ್ಮ ಕಲೆಯ ಸೌಂದರ್ಯದ ಸಂಕೇತ. ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿರುವ ಆಹಾರ್ಯಕ್ಕೆ ತನ್ನದೇಯಾದ ಲಾವಣ್ಯವಿದೆ. ನಡುತಿಟ್ಟಿನಲ್ಲಿ ಹೆಚ್ಚಾಗಿ ಪ್ರದರ್ಶನ ಕಾಣುವ ವೀರರಸ ಪ್ರಧಾನವಾದ ಪ್ರಸಂಗಗಳ ಭಾವವನ್ನು ಆ ಆಹಾರ್ಯಗಳು ಹೆಚ್ಚಿಸುತ್ತವೆ. ಪಾತ್ರಗಳಿಗೆ ಬೇಕಾದ ಗಂಭೀರತೆಯನ್ನು, ಪ್ರಬುದ್ಧತೆಯನ್ನು ಅವು ಆಹಾರ್ಯದ ಮೂಲಕವಾಗಿ ಎತ್ತಿಹಿಡಿಯುವುದನ್ನು ಕಾಣಬಹುದು. ಈ ಕಾರಣಕ್ಕಾಗಿ ಪ್ರಸಂಗ, ಪಾತ್ರ ಮತ್ತು ಅದರ ಭಾವವನ್ನು ನೋಡಿಯೇ ಆ ಬಗೆಯಲ್ಲಿ ವೇಷವನ್ನು ಮಾಡುತ್ತೇನೆ. ಹಾಗಾಗಿ ನಡುತಿಟ್ಟಿನ ಬಗ್ಗೆ ವಿಶೇಷ ಪ್ರೀತಿ. ಹಾಗಂತ ಬೇರೆ ತಿಟ್ಟಿನ ಬಗ್ಗೆ ಆಕ್ಷೇಪವಿದೆ ಎಂಬ ಅರ್ಥವಲ್ಲ. ಆ ತಿಟ್ಟಿನ ಮಟ್ಟಿನ ರುಚಿ ಆ ತಿಟ್ಟಿಗೆ ಆ ಮಟ್ಟಿಗೆ. ಇದರ ಜೊತೆಗೆ ನಮ್ಮ ಯಕ್ಷಗಾನದಲ್ಲಿ ಕೆಲವು ಆಹಾರ್ಯಗಳು ಕಾಲದ ಪ್ರಭಾವದಿಂದ ರಂಗಭೂಮಿಯಿಂದ ಬಂದಿರುವುದನ್ನು ಕಾಣುತ್ತೇವೆ. ಉದಾಹರಣೆ ಬಿಟ್ಟ ಮೈ ವೇಷಗಳು, ಬಾಲವನ್ನು ಕಟ್ಟಿ, ಚಡ್ಡಿಯಂತೆ ಹಾಕಿಕೊಳ್ಳುವ ಹನುಮಂತನ ಪಾತ್ರ ಇತ್ಯಾದಿಗಳು. ಇಂತಹ ಪಾತ್ರಗಳಿಗೆ ನಡುತಿಟ್ಟಿನ ಆಹಾರ್ಯ ದೊಡ್ಡ ಪರಿಹಾರವನ್ನು ಒದಗಿಸುತ್ತವೆ.

ಪ್ರೇಕ್ಷಕರನ್ನು ಮುಟ್ಟುವುದಕ್ಕೆ ಹಳೆಯ ಪ್ರಸಂಗ / ಹೊಸ ಪ್ರಸಂಗ ಬೇಕಾ:-
ಯಕ್ಷಗಾನದಲ್ಲಿ ಹಳೆಯ ಪ್ರಸಂಗ ಬೇಕಾ, ಹೊಸದು ಬೇಕಾ ಎನ್ನುವುದು ಮುಖ್ಯ ವಿಷಯವಲ್ಲ. ಮುಖ್ಯವಾದುದು.ನಾವು ಆಯ್ದುಕೊಂಡ ಪ್ರಸಂಗ ಎಷ್ಟು ಯಕ್ಷಗಾನೀಯವಾಗಿ ಪ್ರದರ್ಶನಗೊಳ್ಳುತ್ತಿದೆ ಎಂಬುದಾಗಿದೆ. ಪೌರಾಣಿಕ ಹಳೆಯ ಪ್ರಸಂಗವನ್ನೇ ತೆಗೆದುಕೊಂಡರೂ, ಅದನ್ನು ಯಕ್ಷಗಾನೀಯವಾಗಿ ರೂಪಿಸುವಲ್ಲಿ ವಿಫಲರಾದರೆ, ಅದು ಯಾವುದೇ ಪ್ರಯೋಜನವಿಲ್ಲ.

ಇಂದಿನ ಹೊಸ ಪ್ರಸಂಗಗಳಲ್ಲಿ ಸಿನಿಮಾ ಹಾಡುಗಳನ್ನೋ, ಡಿಸ್ಕೋ ಡ್ಯಾನ್ಸ್‌ಗಳನ್ನೋ ಬಳಸುವ ಪ್ರವೃತ್ತಿ ಕಾಣಸಿಗುತ್ತಿದೆ. ಆದರೆ ಯಕ್ಷಗಾನದ ನಿಜವಾದ ಪ್ರೇಕ್ಷಕ ಇಂತಹ ಅಂಶಗಳನ್ನು ಯಕ್ಷಗಾನದಲ್ಲಿ ನೋಡಲು ಬಯಸುವುದಿಲ್ಲ. ಹಾಗೆ ಬಯಸುವುದಾದರೆ, ಅದನ್ನು ಒಳ್ಳೆಯ ತುಪ್ಪದಲ್ಲಿ ಮಾಡಿದ ಕೇಸರಿ ಭಾತಿಗೆ ಬೆಳ್ಳುಳ್ಳಿ ಒಗ್ಗರಣೆ ಹಾಕಿದಂತೆ ಅಸ್ವಾಭಾವಿಕವಾಗಿ ಕಾಣಬಹುದು. ಇಲ್ಲಿಯೇ ದೊಡ್ಡ ಸಮಸ್ಯೆ ತಲೆದೋರುತ್ತದೆ—ನಾವು ಪ್ರೇಕ್ಷಕರಾಗಿ ಏನನ್ನು ಬಯಸುತ್ತೇವೆ ಎಂಬುದರ ಬಗ್ಗೆ ನಮ್ಮಲ್ಲಿ ಸ್ಪಷ್ಟತೆ ಇಲ್ಲದಿರುವುದು ಈ ಸಮಸ್ಯೆಯ ಕಾರಣ ಎನ್ನಬಹುದು

ಬೆಂಗಳೂರಿನಲ್ಲಿ ಪಾರಂಪರಿಕ ಯಕ್ಷಗಾನದ ಬಗ್ಗೆ ಪ್ರೇಕ್ಷಕರ ಅಭಿಪ್ರಾಯ ಹೇಗೆ ಇದೆ:-
ಬೆಂಗಳೂರಿನಲ್ಲಿ ಪಾರಂಪರಿಕ ಪ್ರೇಕ್ಷಕರಾಗಲಿ, ಸಿದ್ಧ ಪ್ರೇಕ್ಷಕರಾಗಲಿ ಅಷ್ಟು ಹೆಚ್ಚು ನಮಗೆ ಸಿಗುವುದಿಲ್ಲ (ಇಲ್ಲವೆಂದಲ್ಲ). ನಾವು ಮಾಡುವ ಬಹುತೇಕ ಪ್ರದರ್ಶನಗಳಲ್ಲಿ ಶೇಕಡಾ ೫೦ ಹೊಸ ಪ್ರೇಕ್ಷಕರಿರುತ್ತಾರೆ. ಅದರಲ್ಲಿ ಬಹಳಷ್ಟು ಕನ್ನಡೇತರರು ಕೂಡ ನೋಡುತ್ತಾರೆ. ಜೊತೆಗೆ ಬೇರೆ ಬೇರೆ ಕಲೆಯನ್ನು ಅನುಭವಿಸಿದವರು ಹಾಗೂ ಸಂಗೀತದ ಜ್ಞಾನ ಹೊಂದಿದವರೂ ಇರುತ್ತಾರೆ. ಅಂತವರಿಗೆ ನಾವು ಯಕ್ಷಗಾನವನ್ನು ಹೇಗೆ ಪರಿಚಯಿಸುತ್ತೇವೆ ಎಂಬುದು ಬಹಳ ಮುಖ್ಯ. ಈಗಾಗಲೇ ಹಲವು ಬಡಾವಣೆಗಳಲ್ಲಿ ನಾವು ಪ್ರದರ್ಶನಗಳನ್ನು ಮಾಡಿದ್ದೇವೆ. ಅಲ್ಲಿ ಯಕ್ಷಗಾನ ಅರಿಯದವರು ಕೂಡ ಆನಂದಿಸಿ ಬೆಂಬಲವನ್ನು ಕೊಟ್ಟಿದ್ದಾರೆ. ಬಹುಶಃ ಇದೆಲ್ಲ ಯಕ್ಷಗಾನದ ವಿಸ್ತರಣೆಯಲ್ಲಿ ಮಹತ್ವದ ಸಂಗತಿಯಾಗಿದೆ

ಯಕ್ಷಗಾನದ ಪ್ರಸಂಗ ಕೋಶಗಳ ವಿಷಯದಲ್ಲಿ ನಿಮ್ಮ ಕಾರ್ಯ ಹೇಗೆ ಸಾಗಿದೆ:-
ಯಕ್ಷವಾಹಿನಿ ಸಂಸ್ಥೆಯ ಹಲವು ಯೋಜನೆಗಳಲ್ಲಿ ಪ್ರಸಂಗಕೋಶವೂ ಒಂದು. ಇಲ್ಲಿ ಸಮೂಹವಾಗಿ ಯಕ್ಷಗಾನದ ಅನೇಕ ವಿಚಾರಗಳನ್ನು ಸ್ಥಿರವಾಗಿ ಮುಂದಿನ ತಲೆಮಾರಿಗೆ ಪಸರಿಸುವುದು ಯೋಜನೆಗಳ ಪ್ರಮುಖ ಭಾಗ. ಈ ಯೋಜನೆಯಡಿಯಲ್ಲಿ ೩೦ಕ್ಕೂ ಹೆಚ್ಚು ಕಾರ್ಯಕರ್ತರು ಏಕಮನಸ್ಸಿನಿಂದ ಯಕ್ಷಗಾನಕ್ಕಾಗಿ ಶ್ರಮಿಸುತ್ತಿದ್ದಾರೆ. ನಾನು ಕೂಡ ಅವರಂತೆಯೇ ಒಬ್ಬ ಸದಸ್ಯ.

ನಮ್ಮ ಸಂಸ್ಥೆಯ ಪ್ರಸಂಗಕೋಶ ಯೋಜನೆಯಲ್ಲಿ ೨೬೦ ಪ್ರಸಂಗಗಳು ಮತ್ತು ಪ್ರಸಂಗ ಸಂಗ್ರಹಕೋಶ ಯೋಜನೆಯಲ್ಲಿ ೧೬೭೦ ಪ್ರಸಂಗಗಳು ಡಿಜಿಟಲೀಕರಣಗೊಂಡಿವೆ. ಇನ್ನೂ ಅನೇಕ ಪ್ರಸಂಗಗಳನ್ನು ಡಿಜಿಟಲೀಕರಿಸಲು ಸಂಸ್ಥೆ ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಎಲ್ಲರ ಸಹಾಯ ಮತ್ತು ಸಹಕಾರ ಅಗತ್ಯ. ಯಾರ ಬಳಿಯಾದರೂ ಪ್ರಸಂಗಗಳ ಪ್ರತ್ಯಯಗಳು ಇದ್ದರೆ, ದಯವಿಟ್ಟು ಅದರ ಸ್ಕಾನ್ ಪ್ರತಿಯನ್ನು ನಮಗೆ ತಲುಪಿಸಲು ವಿನಂತಿ.

ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ವಿಶೇಷವಾಗಿ ಯಾವುದೇ ಮುಂದಿನ ಯೋಜನೆ ಇಲ್ಲ. ಲಭ್ಯವಿರುವ ಅವಕಾಶದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಶ್ರಮಿಸುವುದಷ್ಟೇ ಉದ್ದೇಶ.

ನಾನು ವೃತ್ತಿಪರವಾಗಿ ಯಾವುದೇ ಮೇಳದಲ್ಲಿ ಕೆಲಸ ಮಾಡಿಲ್ಲ. ಆದರೆ, ಪ್ರವೃತ್ತಿಯಾಗಿ ಯಕ್ಷಗಾನವನ್ನು ಸ್ವೀಕರಿಸಿದ್ದೇನೆ. ೧೫ ವರ್ಷಗಳ ಹಿಂದೆ, ಸಮಾನಮನಸ್ಕರೊಂದಿಗೆ ಒಂದಾಗಿ, ನಮ್ಮದೇ ಯಕ್ಷಸಿಂಚನ ಟ್ರಸ್ಟ್ ಎಂಬ ಹವ್ಯಾಸಿ ತಂಡವನ್ನು ಸ್ಥಾಪಿಸಿದ್ದೇವೆ. ಇದುವರೆಗೆ, ರಾಜ್ಯದ ಬೇರೆ ಬೇರೆ ಪ್ರದೇಶಗಳು ಮತ್ತು ಆರು-ಏಳು ರಾಜ್ಯಗಳಲ್ಲಿ ೫೦೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದೇವೆ

ಸನ್ಮಾನ ಹಾಗೂ ಪ್ರಶಸ್ತಿ:-
♦️ ೨೦೨೦ನೇ ಸಾಲಿನ ಪ್ರಜಾವಾಣಿಯ ಕೊಡಮಾಡುವ ವರುಷದ ವ್ಯಕ್ತಿ ಪ್ರಶಸ್ತಿ,
♦️ ರಾಜರಾಜೇಶ್ವರಿ ಹವ್ಯಕ ಸಮತಿಯವರ ವಾರ್ಷಿಕ ಸನ್ಮಾನ,
♦️ ಸಂಪೆಕಟ್ಟೆ ಯಕ್ಷಗಾನ ಅಭಿಮಾನಿಗಳ ಗೌರವ ಸನ್ಮಾನ ಇತ್ಯಾದಿ.

ಹವ್ಯಾಸಗಳು:-
ಪ್ರವಾಸ, ಕಲೆ, ಸಂಗೀತ, ನಾಟಕ, ರಂಗಭೂಮಿ, ಅಡುಗೆ, ಫೋಟೋಗ್ರಫಿ, ತಂತ್ರಜ್ಞಾನ, ಬ್ಯಾಟ್ಮಿಂಟನ್, ಓದು, ಬರಹ – ಹೀಗೆ ನನ್ನ ಆಸಕ್ತಿಗಳ ಪಟ್ಟಿ ಬೆಳೆಯುತ್ತಿದೆ. ಯಕ್ಷಗಾನದ ಮಟ್ಟಿಗೆ ಹೇಳುವುದಾದರೆ, ಕಲೆಯ ಜೊತೆಗೆ ಯಕ್ಷಗಾನದ ಅಕಾಡಮಿಕ್ ಕೆಲಸಗಳೂ ನನಗೆ ಬಹಳ ಇಷ್ಟ.

ಸಾಹಿತ್ಯ ವಿದ್ಯಾರ್ಥಿಯಾಗಿರುವ ನಾನು, ಮಲೆನಾಡಿನ ಶತಮಾನಗಳ ಯಕ್ಷಗಾನ ಇತಿಹಾಸವನ್ನು ಪರಿಚಯಿಸುವ ‘ಮಲೆನಾಡಿನ ಯಕ್ಷಚೇತನಗಳು’ ಎಂಬ ಕೃತಿಯನ್ನು ಪ್ರಕಟಿಸಿದ್ದೇನೆ, ಮತ್ತು ಅದರ ಎರಡನೇ ಸಂಪುಟ ಸಿದ್ಧವಾಗುತ್ತಿದೆ. ಇದಲ್ಲದೇ, ‘ನಮ್ಮಲ್ಲೇ ಮೊದಲು’ ಹಾಗೂ ‘ಪ್ರಸಂಗಕರ್ತ ಶ್ರೀಧರ್ ಡಿ.ಎಸ್’ ನನ್ನ ಇತರ ಕೃತಿಗಳು. ಐವತ್ತಕ್ಕೂ ಹೆಚ್ಚು ಲೇಖನಗಳು, ಕತೆಗಳು, ಲಲಿತ ಪ್ರಬಂಧಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ರವಿ ಮಡೋಡಿ ಅವರು 30 ಮೇ ೨೦೧೨ ರಂದು ಪೂರ್ಣಿಮಾ ಹೆಗಡೆ ಅವರನ್ನು ಮದುವೆಯಾಗಿ ಮಗ ಅವ್ಯಕ್ತ ಜೊತೆಗೆ ಸುಖೀ ಸಂಸಾರವನ್ನು ನಡೆಸುತ್ತಿದ್ದಾರೆ.

ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರವಿ ಮಡೋಡಿ.

ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು‌ ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

📝
ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
☎ :- +918317463705

New Project 87

Prev Post

Next Post

ಏರ್ಪೋಟಿನಲ್ಲಿ ವ್ಹೀಲ್ ಚೇರ್ ಕೊಡಲು ನಿರಾಕರಣೆ : ಅಶಕ್ತ ವೃದ್ದೆ ಬಿದ್ದು ಐಸಿಯೂ…

post-bars

Leave a Comment

Related post