ನಾಮದ ಚಿಲುಮೆಯಲ್ಲಿ ಅನುಮತಿಯಿಲ್ಲದೆ ಶೂಟಿಂಗ್ : ಚಿತ್ರೀಕರಣ ಬಂದ್
ತುಮಕೂರು : ನಗರದ ಮೀಸಲು ಅರಣ್ಯ ಪ್ರದೇಶವಾದ ನಾಮದಚಿಲುಮೆಯಲ್ಲಿ ಅನುಮತಿ ಇಲ್ಲದೇ ಚಿತ್ರೀಕರಣ ನಡೆಸಿದ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ರಕ್ಷಿತಾ ಪ್ರೇಮ್ ಸಹೋದರನ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ.
ಹೆಸರಿಡದ ಸಿನಿಮಾದ ಶೂಟಿಂಗ್ ಕಳೆದ ಐದು ದಿನಗಳಿಂದ ನಾಮದಚಿಲುಮೆಯಲ್ಲಿ ನಡೆಯುತ್ತಿದೆ.
ನಟಿ ರಕ್ಷಿತಾ ಪ್ರೇಮ್ ಸಹೋದರ ರಾಣಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹೊಸ ಸಿನಿಮಾದ ಚಿತ್ರೀಕರಣ ಅನುಮತಿ ಇಲ್ಲದೆ ನಾಮದಚಿಲುಮೆಯಲ್ಲಿ ನಡೆಯುತ್ತಿತ್ತು.
ಮಾಹಿತಿ ತಿಳಿದ ಅರಣ್ಯ ಇಲಾಖೆ ಎಸಿಎಫ್ ಪವಿತ್ರಾ ನೇತೃತ್ವದಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಚಿತ್ರೀಕರಣವನ್ನು ಬಂದ್ ಮಾಡಿಸಿ, ಚಿತ್ರೀಕರಣಕ್ಕೆ ಬಳಸಿದ್ದ ಕೆಲ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕಳೆದ 5 ದಿನದಿಂದ ನಾಮದಚಿಲುಮೆಯಲ್ಲಿ ನಡೆಯುತ್ತಿದ್ದ ಶೂಟಿಂಗ್, ತರುಣ್ ಸುಧೀರ್ ಕ್ರಿಯೇಟಿವ್ ಹೆಸರಿನಲ್ಲಿ ನಡೆಯುತ್ತಿತ್ತು. ನಟಿ ರಕ್ಷಿತಾ ಸಹೋದರ ರಾಣ, ಪ್ರಿಯಾಂಕಾ ಈ ಸಿನಿಮಾದಲ್ಲಿ ನಟಿಸುತ್ತಿದ್ದರು. ಸುಮಾರು 70-100 ಜನ ಈ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅರಣ್ಯ ಇಲಾಖೆ ದಾಳಿ ವೇಳೆ ಸಿನಿಮಾ ಚಿತ್ರೀಕರಣಕ್ಕೆ ಬಳಸಲಾಗಿರುವ ಕ್ಯಾರವಾನ್, ಕ್ಯಾಮರಾ ಲೈಟ್, ಕೆಲ ಸಾಮಗ್ರಿ ಪತ್ತೆ, ಲೈಟ್, ಅಡುಗೆ ಸಾಮಗ್ರಿ, ಚೇರ್ಗಳು, ಟೆಂಪೊ ಟ್ರಾವೆಲರ್ ಅನ್ನು ವಶಕ್ಕೆ ಪಡೆಯಲಾಗಿದೆ.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ದಾಳಿ ನಡೆಸಿ ಚಿತ್ರತಂಡದವರನ್ನು ವಿಚಾರಣೆ ನಡೆಸಿ ಸಿನಿಮಾದ ಶೂಟಿಂಗ್ ನಿಲ್ಲಿಸಿದ್ದಾರೆ. ನಾವು ಊಟಕ್ಕೆ ಮಾತ್ರ ನಿಲ್ಲಿಸಿದ್ದೆವು, ಸಿನಿಮಾದ ಶೂಟಿಂಗ್ ಮಾಡಿಲ್ಲ ಎಂದು ಚಿತ್ರತಂಡ ಸ್ಪಷ್ಟನೆ ನೀಡಿದೆ.
ಚಿತ್ರತಂಡ ತರುಣ್ ಸುಧೀರ್ ಪ್ರೊಡಕ್ಷನ್ಸ್ ಹೆಸರಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಕೋರಿ ಈ ಮೊದಲೇ ಅರ್ಜಿ ಸಲ್ಲಿಸಿತ್ತು ಆದರೆ ಅರಣ್ಯ ಇಲಾಖೆ ಅನುಮತಿ ನೀಡಿರಲಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡದ ಕಾರಣ, ಅನುಮತಿಯ ಹೊರತಾಗಿಯೂ ಚಿತ್ರತಂಡ ಚಿತ್ರೀಕರಣ ಶುರು ಮಾಡಿತ್ತು. ಇದೇ ಕಾರಣಕ್ಕೆ ಅರಣ್ಯ ಇಲಾಖೆಯವರು ಈಗ ಚಿತ್ರೀಕರಣ ಬಂದ್ ಮಾಡಿಸಿ, ಚಿತ್ರೀಕರಣಕ್ಕೆ ಬಳಸಿದ್ದ ವಸ್ತುಗಳನ್ನು ಸೀಜ್ ಮಾಡಿದೆ.