ಪ್ರೀತಿಯ ಅನುಭಾವ್ಯಕ್ಕೆ ಪರಸ್ಪರ ತಬ್ಬಿಕೊಳ್ಳುವ ಸಾಂತ್ವನ
ಶರಣ್ಯ ಕೋಲ್ಚಾರ್
ನಾನು ನಿನ್ನ ಜೊತೆಗಿರುವೆ ಎನ್ನುವ ಸಾಂತ್ವನ ಮತ್ತು ನಂಬಿಕೆಗೆ ತಬ್ಬಿಕೊಳ್ಳುವುದು ಉತ್ತಮವಾದುದೇ ಆಗಿದೆ.
ಅಪ್ಪಿಕೊಳ್ಳುವುದು ಈಗ ಟ್ರೆಂಡ್ ಆಗಿಬಿಟ್ಟಿದೆ. ಸ್ನೇಹಿತರಂತೂ ಎಲ್ಲೇ ಸಿಕ್ಕಿದರೂ ಒಬ್ಬರಿಗೊಬ್ಬರು ಅಪ್ಪಿಕೊಂಡು ವಿಶ್ ಮಾಡುತ್ತಾರೆ.
ಇದು ಬರೀ ಫ್ಯಾಶನ್ ಮಾತ್ರವಲ್ಲ ಇದರಿಂದ ಆರೋಗ್ಯಕ್ಕೂ ಲಾಭಗಳಿವೆ.
ಇನ್ನು ಪ್ರೇಮಿಗಳ ದಿನಾಚರಣೆಯಲ್ಲಿ ಒಂದು ದಿನವನ್ನು “ಹಗ್ ಡೇ” ಎಂದೇ ಆಚರಿಸುತ್ತಾರೆ. ಈ ಬಾರಿ ಫೆ. 12 ರಂದು ಹಗ್ ಡೇಯನ್ನು ಆಚರಿಸಲಾಗುತ್ತದೆ.
ರೋಸ್ ಡೇ ದಿನ ಗುಲಾಬಿ ಹೂ ನೀಡಿ ಶುಭಾಶಯ ತಿಳಿಸಿ ಮರುದಿನ ಪ್ರಪೋಸ್ ಡೇಗೆ ಪ್ರೀತಿ ನಿವೇದಿಸಿಕೊಂಡು ಆತ ಅಥವಾ ಆಕೆ ಒಪ್ಪಿಕೊಂಡರೆ ಚಾಕಲೇಟ್ ನೀಡಿ ಸಿಹಿ ಸಂಬಂಧ ವೃದ್ಧಿಸಿಕೊಳ್ಳುವಾಗಲೇ ಪ್ರಾಮಿಸ್ ಡೇ ಬಂತು. ಪರಸ್ಪರ ಪ್ರೀತಿ ನಿವೇದಿಸಿಕೊಂಡು ಜೀವನ ಪೂರ್ತಿ ಜೊತೆಗಿರುವ ಭರವಸೆಗೆ ಪ್ರಾಮಿಸ್ ನೀಡುವಾಗ ಹಗ್ ಡೇ ಹೆಸರಿನ ಅಪ್ಪುಗೆ ಭಾಂಧವ್ಯವನ್ನು ಗಟ್ಟಿಗೊಳಿಸಲೇ ಬೇಕಲ್ಲಾ.
ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಫೆಬ್ರವರಿ 12ನ್ನು ಹಗ್ ಡೇ ಅಂದರೆ ಅಪ್ಪುಗೆಯ ದಿನವೆಂದು ಆಚರಿಸಲಾಗುವುದು. ನಮ್ಮ ಸಂಗಾತಿ ನೀಡುವ ಪ್ರೀತಿಯ ಅಪ್ಪುಗೆ ನಮ್ಮೆಲ್ಲಾ ನೋವಗಳನ್ನು ಮರೆಸುತ್ತೆ, ಅಂಥ ಶಕ್ತಿ ಅಪ್ಪುಗೆಯಲ್ಲಿದೆ. ಪ್ರೀತಿಯ ಒಂದು ಅಪ್ಪುಗೆ ನಾನು ನಿನ್ನೊಂದಿಗೆ ಇರುವೆ ಎಂಬ ಧೈರ್ಯವನ್ನು ನೀಡುವಂತಿರುತ್ತದೆ, ಆ ಅಪ್ಪುಗೆಯಲ್ಲಿ ಒಂದು ಕ್ಷಣ ಎಲ್ಲವನ್ನೂ ಮರೆತು ಅದರಲ್ಲಿ ತಲ್ಲೀನರಾಗುತ್ತೇವೆ.
ಅಪ್ಪುಗೆ ಎಂಬುವುದು ತಾಯಿ ಮಕ್ಕಳಿಗೆ ನೀಡಬಹುದು, ಸ್ನೇಹಿತರು ನೀಡಬಹುದು ಆ ಅಪ್ಪುಗೆ ಭಿನ್ನವಾದರೆ ಪ್ರೇಮಿ ನೀಡುವ ಅಪ್ಪುಗೆಯೇ ಭಿನ್ನ ಅನುಭವ ನೀಡುವುದು, ಪ್ರೇಮಿ ಬಿಗಿಯಾಗಿ ಅಪ್ಪಿಕೊಂಡಾಗ ಓಡುತ್ತಿರುವ ಗಡಿಯಾರ, ಚಲಿಸುತ್ತಿರುವ ಭೂಮಿ ಎಲ್ಲವೂ ಸ್ತಬ್ಧವಾಗಲಿ, ನಾನು ಈ ಅಪ್ಪುಗೆಯಲ್ಲೇ ಕಳೆದು ಹೋಗಬಹುದು ಎಂದು ಅನಿಸಿದಿರಲ್ಲ, ಅಂಥ ಹಿತ ಅನುಭವವೇ ಅಪ್ಪುಗೆ.
ಅಪ್ಪುಗೆಯ ದಿನದಂದು ಜನರು ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ವಿಶೇಷ ಭಾವನೆ ಮೂಡಿಸುತ್ತಾರೆ. ಮಾತ್ರವಲ್ಲದೆ ಈ ಆಲಿಂಗನ ಆರೋಗ್ಯಕ್ಕೆ ಉತ್ತಮವಾದ ಅನೇಕ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ.
ಹಗ್ ಡೇ ಅನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಆದರೆ ಇದನ್ನು ಫೆಬ್ರವರಿ 12 ರಂದು ಮಾತ್ರ ಏಕೆ ಆಚರಿಸಲಾಗುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಇಂದಿನ ದಿನಗಳಲ್ಲಿ ಯಾರನ್ನಾದರೂ ತಬ್ಬಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಫೆಬ್ರವರಿಯಲ್ಲಿ ಪ್ರೀತಿಯ ವಾರ ಅಂದರೆ ಹಗ್ ಡೇ ದಿನ ಪ್ರೇಮಿಯನ್ನು ಅಪ್ಪಿಕೊಳ್ಳುವುದು ತುಂಬಾ ವಿಶೇಷವಾಗಿದೆ. ನೀವು ಪ್ರೀತಿಸುತ್ತಿದ್ದರೆ ಈ ಸಂದರ್ಭದಲ್ಲಿ ನಿಮ್ಮ ಪ್ರೇಮಿಯನ್ನು ಸಹ ತಬ್ಬಿಕೊಳ್ಳಬಹುದು. ಇದೊಂದು ವಿಶೇಷ ಅನುಭವವನ್ನು ನೀಡುವುದು ಮಾತ್ರವಲ್ಲದೆ ಪರಸ್ಪರ ಪ್ರೀತಿಯನ್ನು ಹೆಚ್ಚಿಸುತ್ತದೆ.
ಆಲಿಂಗನದಿಂದ ಅನೇಕ ಆರೋಗ್ಯಕರ ಪ್ರಯೋಜನಗಳು ಸಿಗುತ್ತವೆ ಎಂಬುದು ಎಲ್ಲರಿಗೂ ಗೊತ್ತು. ತಬ್ಬಿಕೊಂಡಾಗ ಪ್ರೀತಿಸುವವರ ಕಡೆಗೆ ಪ್ರೀತಿ ಮತ್ತು ವಿಶ್ವಾಸವು ಹೆಚ್ಚಾಗುತ್ತದೆ. ಅಪ್ಪುಗೆಯ ದಿನದಂದು ಪ್ರೇಮಿಯನ್ನು ತಬ್ಬಿಕೊಂಡಾಗ ಪ್ರೇಮಿಗಳು ಅಪಾರ ಪ್ರೀತಿಯನ್ನು ಅನುಭವಿಸುತ್ತಾರೆ.
.ಜೊತೆಗೆ ಅಪ್ಪಿಕೊಳ್ಳುವುದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ. ಅಪ್ಪುಗೆಯಿಂದ ಮಹಿಳೆಯರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಅಪ್ಪುಗೆಯು ಅವರ ಮನಸ್ಸಿನಿಂದ ಭಯವನ್ನು ಹೋಗಲಾಡಿಸುತ್ತದೆ ಮತ್ತು ಶಾಂತಿಯನ್ನು ನೀಡುತ್ತದೆ.
ಹೊಸ ಉತ್ಸಾಹ ದೊರೆಯುತ್ತದೆ. ಚಿಕ್ಕ ಅಪ್ಪುಗೆಯು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ
ಅಪ್ಪಿಕೊಳ್ಳುವುದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.
ಅಪ್ಪುಗೆ ಹೃದಯದ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ ಆಗಿದೆ. ಪಬ್ಮೆಡ್ ಸೆಂಟ್ರಲ್ ಜರ್ನಲ್ ಪ್ರಕಾರ, ಒಂದು ಅಧ್ಯಯನವನ್ನು ದಂಪತಿಗಳ ಮೇಲೆ ನಡೆಸಲಾಯಿತು. ಈ ವೇಳೆ ಕೆಲವು ಜೋಡಿಗಳು 10 ನಿಮಿಷಗಳ ಕಾಲ ಪರಸ್ಪರರ ಕೈಗಳನ್ನು ಹಿಡಿದಿಟ್ಟುಕೊಳ್ಳುವಂತೆ ಹೇಳಲಾಯಿತು ಮತ್ತು ಕೆಲವು ಜೋಡಿಗಳನ್ನು 20 ಸೆಕೆಂಡುಗಳ ಕಾಲ ತಬ್ಬಿಕೊಳ್ಳುವಂತೆ ಸೂಚಿಸಲಾಯಿತು. ಕೇವಲ 20 ಸೆಕೆಂಡುಗಳ ಕಾಲ ಮುದ್ದಾಡಿದ ನಂತರ, ಗಂಡ ಮತ್ತು ಹೆಂಡತಿಯ ರಕ್ತದೊತ್ತಡದ ಮಟ್ಟವು ತಕ್ಷಣವೇ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳು ತಿಳಿಸಿದೆ. ಇದು ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ.
ಅಪ್ಪಿಕೊಳ್ಳುವುದು ಸಹ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ತಬ್ಬಿಕೊಂಡ ನಂತರ, ಮೆದುಳು ವೇಗವಾಗಿ ಕೆಲಸ ಮಾಡುತ್ತದೆ, ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.
ಹಾಗಾಗಿ ಹಗ್ ಡೇ ದಿನ ನಿಮ್ಮ ಪ್ರೀತಿ ಪಾತ್ರರನ್ನು ಅತ್ಯಂತ ಪ್ರೀತಿಯಿಂದ ತಬ್ಬಿಕೊಳ್ಳಿ ಮತ್ತು ನಂಬಿಕೆ ಮತ್ತು ಪ್ರೀತಿಯ ಆಳವನ್ನು ಹೆಚ್ಚಿಸಿಕೊಳ್ಳಿ.