ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಸಿದ್ಧತೆ: ಫೆ.25ರಿಂದ ಪರೀಕ್ಷೆ ಆರಂಭ
ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಫೆ.25 ರಿಂದ ಮಾ. 4ರವರೆಗೆ ಪರೀಕ್ಷೆ ನಡೆಯಲಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಈ ಬಾರಿಯೂ ಏಕ ರೂಪದ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ನೀಡಲು ನಿರ್ಧರಿಸಿದೆ. ಪ್ರಶ್ನೆ ಪತ್ರಿಕೆಗಳನ್ನು ಮಂಡಳಿಯು ಎಲ್ಲಾ ಜಿಲ್ಲಾ ಉಪ ನಿರ್ದೇಶಕರಿಗೆ ಆನ್‌ಲೈನ್ ಮೂಲಕ ಕಳುಹಿಸಲಿದೆ.
ಪರೀಕ್ಷೆ ವೇಳಾಪಟ್ಟಿ ಹೀಗಿದೆ:
ಫೆ.25- ಪ್ರಥಮ ಭಾಷೆ
ಫೆ.27- ಗಣಿತ
ಫೆ.28 – ದ್ವಿತೀಯ ಭಾಷೆ
ಮಾ.1- ತೃತೀಯ ಭಾಷೆ,
ಮಾ.3 – ವಿಜ್ಞಾನ
ಮಾ.4-ಸಮಾಜ ವಿಜ್ಞಾನ
ಎಲ್ಲ ಪರೀಕ್ಷೆಗಳೂ ಬೆಳಗ್ಗೆ 10ಕ್ಕೆ ಆರಂಭವಾಗಲಿದ್ದು, ದ್ವಿತೀಯ ಮತ್ತು ತೃತೀಯ ಭಾಷಾ ಪರೀಕ್ಷೆಗಳು ಮಧ್ಯಾಹ್ನ -1 ಗಂಟೆವರೆಗೆ, ಉಳಿದ ಪರೀಕ್ಷೆಗಳು ಮಧ್ಯಾಹ್ನ 1.15ರವರೆಗೆ ನಡೆಯಲಿವೆ.
ಗ್ರೇಸ್ ಅಂಕಗಳು ಇಲ್ಲ: ಶಿಕ್ಷಣ ಸಚಿವರು
ಈ ವರ್ಷ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಗ್ರೇಸ್ ಮಾರ್ಕ್ಸ್ ಕೊಡುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಎಲ್ಲಾ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಜೊತೆ ನಿನ್ನೆ ಅವರು ಸಂವಾದ ನಡೆಸಿದರು.
ನಂತರ ಸುದ್ದಿಗೋಷ್ಠಿ ನಡೆಸಿದ ಅವರು, ಈ ಬಾರಿ ಪಾಸಿಂಗ್ ಗ್ರೇಸ್ ಅಂಕ ಇರೋದಿಲ್ಲ. ಕಳೆದ ಬಾರಿ ಕೊನೆ ಕ್ಷಣದಲ್ಲಿ ವೆಬ್‌ಕಾಸ್ಟಿಂಗ್ ಜಾರಿಗೆ ತಂದ ಕಾರಣ ಗ್ರೇಸ್ ಮಾರ್ಕ್ಸ್ ಕೊಡಲಾಗಿತ್ತು. ಈ ಬಾರಿ ಪ್ರತಿಯೊಂದು ಪರೀಕ್ಷಾ ಕೇಂದ್ರಗಳಲ್ಲಿಯೂ ವೆಬ್‌ಕಾಸ್ಟಿಂಗ್ ಇರಲಿದೆ ಎಂದರು.
SSLC ಪರೀಕ್ಷೆಗೂ ಮುನ್ನ ಶಿಕ್ಷಣ ಸಚಿವರು ಗ್ರೇಸ್ ಮಾರ್ಕ್ಸ್ ಕುರಿತಂತೆ ಸರಕಾರದ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಕಳೆದ ವರ್ಷ SSLC ಪರೀಕ್ಷೆಯಲ್ಲಿ 10% ಹೆಚ್ಚುವರಿ ಗ್ರೇಸ್ ಮಾರ್ಕ್ಸ್ ಕೊಟ್ಟು ಶಿಕ್ಷಣ ಇಲಾಖೆ ವಿವಾದಕ್ಕೀಡಾಗಿತ್ತು.
ಸಂವಾದದಲ್ಲಿ ಎಲ್ಲಾ ಜಿಲ್ಲೆಗಳ ನಿರ್ದೇಶಕರು ಹಾಗೂ ಉಪನಿರ್ದೇಶಕರು, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಲೆಯ ಶಿಕ್ಷಕರು ಹಾಗೂ ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದರು.