Back To Top

 ತಾಯ್ನಾಡಿಗೆ ಮರಳಿದ ಹ್ಯಾಟ್ರಿಕ್‌ ಹೀರೋ ಶಿವಣ್ಣ: ಅದ್ದೂರಿ ಸ್ವಾಗತ, ಮೆರವಣಿಗೆ
January 26, 2025

ತಾಯ್ನಾಡಿಗೆ ಮರಳಿದ ಹ್ಯಾಟ್ರಿಕ್‌ ಹೀರೋ ಶಿವಣ್ಣ: ಅದ್ದೂರಿ ಸ್ವಾಗತ, ಮೆರವಣಿಗೆ

ಬೆಂಗಳೂರು: ಯಶಸ್ವಿ ಶಸ್ತ್ರ ಚಿಕಿತ್ಸೆ ನಂತರ ತಾಯ್ನಾಡಿಗೆ ಮರಳಿರುವ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌(Shiva Rajkumar) ಅವರಿಗೆ ಏರ್‌ಪೋರ್ಟ್‌ನಲ್ಲೇ ಭವ್ಯ ಸ್ವಾಗತ ದೊರೆತಿದೆ. ಕ್ಯಾನ್ಸ್‌ರ್‌ನಿಂದ ಬಳಲುತ್ತಿದ್ದ ಅವರು ಅಮೆರಿಕದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಇದೀಗ ಒಂದು ತಿಂಗಳ ನಂತರ ಅವರು ಚೇತರಿಸಿಕೊಂಡಿದ್ದು, ಇಂದು ಬೆಳಗ್ಗೆ ಬೆಂಗಳೂರಿಗೆ ಮರಳಿದ್ದಾರೆ.
ಇಂದು ಬೆಂಗಳೂರಿನ ದೇವನಹಳ್ಳಿ ಬಳಿ ಇರುವ ಕೆಂಪೇಗೌಡ ಏರ್ಪೋರ್ಟ್‌ಗೆ ಶಿವಣ್ಣ ಬಂದಿಳಿಯುತ್ತಿದ್ದಂತೆ ಅವರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಆಗಮಿಸಿತ್ತು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಗಮಿಸಿ ಶಿವಣ್ಣನನ್ನು ಬರ ಮಾಡಿಕೊಂಡಿದ್ದಾರೆ. ಅಭಿಮಾನಿಗಳು ಕೈಯಲ್ಲಿ ಹಾರಗಳನ್ನು ಹಿಡಿದುಕೊಂಡು ಸ್ವಾಗತಕ್ಕೆ ಜಮಾಯಿಸಿದ್ದರು.

ನಟ ಶಿವರಾಜ್‌ ಕುಮಾರ್‌ ಹಾಗೂ ಗೀತಾ ಶಿವರಾಜ್‌ ಕುಮಾರ್‌ ಅವರು ಬೆಂಗಳೂರಿಗೆ ಬರುವ ಕುರಿತು ವಿಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ನಿಮ್ಮ ಪ್ರೀತಿ ಮತ್ತು ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮನ್ನೆಲ್ಲಾ ನೋಡಲು ನಾನು ಜನವರಿ 26ರಂದು ಗಣರಾಜ್ಯೋತ್ಸವ ದಿನ ಬೆಂಗಳೂರಿಗೆ ಬರುತ್ತಿದ್ದೇನೆ. ನಿಮ್ಮ ಆಶೀರ್ವಾದ ಹೀಗೇ ಇರಲಿ ಎಂದು ಹ್ಯಾಟ್ರಿಕ್‌ ಹೀರೋ ಶಿವರಾಜ್ ಕುಮಾರ್ ಅವರು ಹೇಳಿಕೊಂಡಿದ್ದರು.
ಏರ್‌ಪೋರ್ಟ್‌ನಲ್ಲಿ ಅದ್ದೂರಿ ಸ್ವಾಗತ ಪಡೆದ ಶಿವರಾಜ್‌ ಕುಮಾರ್‌ ಅವರು ತಮ್ಮ ಕಾರಿನಲ್ಲೇ ಅಭಿಮಾನಿಗಳತ್ತ ಕೈ ಬೀಸಿದರು. ನೆಚ್ಚಿನ ನಟನಿಗಾಗಿ ಅಭಿಮಾನಿಗಳು ಕೈಯಲ್ಲಿ ಹಾರ, ಕೇಕ್‌ ಹಿಡಿದು ಆಗಮಿಸಿದ್ದರು. ಅಲ್ಲದೇ ನೂರಾರು ಅಭಿಮಾನಿಗಳು ಜೈಕಾರ ಕೂಗಿದರು. ಬಳಿಕ ಶಿವಣ್ಣ ಮಾನ್ಯತಾ ಟೆಕ್ ಪಾರ್ಕ್‌ನ ನಿವಾಸಕ್ಕೆ ತೆರಳಿದರು.
ಮೂತ್ರ ಕೋಶದ ಕ್ಯಾನ್ಸರ್ ಸಂಬಂಧ ಶಿವರಾಜ್ ಕುಮಾರ್ ಡಿಸೆಂಬರ್ 18 ರಂದು ಅಮೆರಿಕಾಕ್ಕೆ ಪ್ರಯಾಣ ಮಾಡಿದ್ದರು. ಡಿಸೆಂಬರ್ 24ರಂದು ಶಿವರಾಜ್ ಕುಮಾರ್‌ಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆರೋಗ್ಯ ಸಂಬಂಧ ಶಿವರಾಜ್ ಕುಮಾರ್ 6 ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಸಿಕೊಂಡಿದ್ದು ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ.

Prev Post

ದೆಹಲಿಯಲ್ಲಿ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮುಕರ್ತವ್ಯ ಪಥದಲ್ಲಿ ಸೇನಾ ಶಕ್ತಿ ಅನಾವರಣ

Next Post

ಆಸ್ಪತ್ರೆಯಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್‌ಕರ್‌ ಡಿಸ್ಚಾರ್ಜ್‌: ವೈದ್ಯರಿಗೆ ಪತ್ರ

post-bars

Leave a Comment

Related post