ಸರ್ಕಾರಿ ಶಾಲೆಯ ಕನಸು ಹೊತ್ತು “ಗುರಿ” ಮುಟ್ಟಿದ ಮಕ್ಕಳು
ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್, ಉಗ್ರಂ ಮಂಜು, ಜಯಶ್ರೀ, ನಾಗಾಭರಣ, ಪವನ್, ಜಾಕ್, ಮಲ್ಲು, ಕೆಜಿಎಫ್ ಕೃಷ್ಣಪ್ಪ, ಚಂದ್ರಪ್ರಭಾ, ಮಿಮಿಕ್ರಿ ಗೋಪಿ, ಸಂದೀಪ್ ಮಲಾನಿ, ರವಿ ಗೌಡ ಪಾತ್ರಗಳಿಗೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ.
ಗ್ರಾಮೀಣ ಜೀವನದಲ್ಲಿ ಸರ್ಕಾರಿ ಶಾಲೆಯ ಮಹತ್ವ ತಿಳಿಸುವ “ಗುರಿ” ಸಿನಿಮಾ ಹಳ್ಳಿಗಾಡಿನ ಜನರ ನೆಮ್ಮದಿಯ ಬದುಕಿಗೆ ಖಾಸಗೀಕರಣ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತದೆ ಮತ್ತು ಬಡವರನ್ನು ಲೂಟಿ ಮಾಡುವ ಉದ್ಯಮಿಗಳ ಮಾತಿಗೆ ಮರುಳಾಗಿ ಜನ ಖಾಸಗಿ ಶಾಲೆಗಳತ್ತ ಮುಖ ಮಾಡಿ ಸರ್ಕಾರಿ ಶಾಲೆಯನ್ನು ಕಡೆಗಣಿಸುವ ಪ್ರಸ್ತುತ ಪರಿಸ್ಥಿತಿಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.
ತೀರಾ ಹಳ್ಳಿಗಾಡಿನ ಪರಿಸರದಲ್ಲಿ ಗ್ರಾಮೀಣ ಜೀವನದ ದಿನನಿತ್ಯದ ಬದುಕನ್ನು ತೋರಿಸುವ ಹಾಡಿನೊಂದಿಗೆ ತೆರೆದುಕೊಳ್ಳುವ ಗುರಿ ಸಿನಿಮಾದಲ್ಲಿ ಕುಡುಕ ತಂದೆ, ಹೊಟ್ಟೆ ತುಂಬಿಸಲು ಕಷ್ಟಪಡುವ ತಾಯಿಗೆ ಇಬ್ಬರು ಮುದ್ದಾದ ಗಂಡು ಮಕ್ಕಳಿರುತ್ತಾರೆ. ತುಂಬಾ ಚುರುಕು ಸ್ವಭಾವದ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿರುತ್ತಾರೆ.
ಆ ಶಾಲೆಯಲ್ಲಿ ಬೆರಳೆಣಿಕೆಯ ಮಕ್ಕಳಿದ್ದು ಒಬ್ಬರೇ ಒಬ್ಬ ಶಿಕ್ಷಕರಿರುತ್ತಾರೆ. ಅವರೇ ಒಂದರಿಂದ ಏಳರವರೆಗೂ ಪಾಠ ಮಾಡುತ್ತಾರೆ. ಅತ್ಯಂತ ಉತ್ತಮ ಶಿಕ್ಷಕರಾದ್ದರಿಂದ ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟವೂ ಚೆನ್ನಾಗಿರುತ್ತದೆ.
ಬಡವರ ಮಕ್ಕಳಿಗೆ ವರದಾನವಾಗಿದ್ದ ಸರ್ಕಾರಿ ಶಾಲೆಗೆ ಮೆಚ್ಚುಗೆ ಕೂಡ ಸಿಕ್ಕಿರುತ್ತದೆ.
ಆದರೆ ಗ್ರಾಮೀಣ ಜನರನ್ನು ಸುಲಭವಾಗಿ ಮರುಳು ಮಾಡಬಹುದು ಎಂದಕೊಂಡ ಕೆಲವು ಉದ್ಯಮಿಗಳು ಖಾಸಗಿ ಶಾಲೆ ತೆರೆದು ಫೀಸ್ ಸಂಗ್ರಹಿಸಿ ಶಿಕ್ಷಣ ಕೊಡಲು ಮನೆ ಮನೆಗೆ ಕಾನ್ವೆಂಟ್ ಸ್ಕೂಲ್ ಪ್ರಚಾರ ಮಾಡಿಸುತ್ತಾರೆ.
ಸರ್ಕಾರಿ ಶಾಲೆಯ ಮಕ್ಕಳೆಲ್ಲ ಖಾಸಗಿ ಶಾಲೆಗಳತ್ತ ಓಡುತ್ತಾರೆ. ಸರ್ಕಾರಿ ಶಾಲೆ ಮುಚ್ಚುವ ಹಂತಕ್ಕೆ ಬರುತ್ತದೆ. ಆಗ ಶಾಲೆ ಮೇಷ್ಟ್ರು ಶಿಕ್ಷಣ ಇಲಾಖೆಗೆ ಮನವಿ ಮಾಡಿ ಶಾಲೆ ಪುನರಾರಂಭ ಮಾಡುವ ಬಗ್ಗೆ ಪ್ರಸ್ತಾಪಿಸುವಾಗ ದಬ್ಬಾಳಿಸುವ ಅಧಿಕಾರಿಗಳಿಂದ ಬೇಸತ್ತು ಶಾಲೆ ಮುಚ್ಚಿ ಹೋಗುತ್ತದೆ.
ಇತ್ತ ತೀರಾ ಬಡತನದಲ್ಲಿ ಬೆಳೆಯುತ್ತಿರುವ ಮಕ್ಕಳ ಶಿಕ್ಷಣದ ಭವಿಷ್ಯ ಮಣ್ಣು ಪಾಲಾಗುತ್ತದೆ. ಆಗ ಕುಡುಕ ತಂದೆಯ ಇಬ್ಬರು ಮಕ್ಕಳು ಮುಖ್ಯಮಂತ್ರಿಗೆ ಮನವಿ ನೀಡಿದರೆ ಶಾಲೆ ಮರು ಪ್ರಾರಂಭವಾಗುತ್ತದೆ ಎಂದು ಅರಿತು ರಾತ್ರೋ ರಾತ್ರಿ ಮನೆ ಬಿಟ್ಟು ಬೆಂಗಳೂರಿಗೆ ಹೊರಡುತ್ತಾರೆ. ಊಟ ನಿದ್ದೆ ಉಳಿದುಕೊಳ್ಳಲು ನೆಲೆ ಸಿಗದೆ ಪಡಬಾರದ ಕಷ್ಟ ಪಡುತ್ತಾರೆ. ಕಳ್ಳರ ಕೈಗೆ ಸಿಕ್ಕಿ ಮಾರಾಟವಾಗುತ್ತಾರೆ. ನಂತರ ಯಾರ ಯಾರ್ಯಾರೋ ಮಾತಿಗೆ ಮರುಳಾಗಿ ಮೀಡಿಯಾ ಕೈಗೆ ಸಿಗುತ್ತಾರೆ.
ನಂತರ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಆಗ್ತಾರಾ? ಅಥವಾ ಮಕ್ಕಳ ಕಳ್ಳರ ಕೈಗೆ ಸಿಕ್ಕಿ ದಂಧೆಯಲ್ಲಿ ಸಾಯುತ್ತಾರೋ? ಮನೆ ಬಿಟ್ಟು ಬಂದ ಮಕ್ಕಳ ತಂದೆ ತಾಯಿ ಏನಾದರೂ?. ಸರ್ಕಾರಿ ಶಾಲೆ ಕನಸು ನನಸಾಯಿತಾ? ಇದೆಲ್ಲದಕ್ಕೆ ಉತ್ತರ ಸಿಗಬೇಕಾದರೆ ಈ ಸಿನಿಮಾ ಎಲ್ಲರೂ ನೋಡಬೇಕು.
ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಮಾಸ್ಟರ್ ಮಹಾನಿಧಿ, ಮಾಸ್ಟರ್ ಜೀವಿತ್ ಭೂಷಣ್ ನಟಿಸಿದ್ದಾರೆ. ಅಚ್ಯುತ್ ಕುಮಾರ್, ಅವಿನಾಶ್, ಉಗ್ರಂ ಮಂಜು, ಜಯಶ್ರೀ, ನಾಗಾಭರಣ, ಪವನ್, ಜಾಕ್, ಮಲ್ಲು, ಕೆಜಿಎಫ್ ಕೃಷ್ಣಪ್ಪ, ಚಂದ್ರಪ್ರಭಾ, ಮಿಮಿಕ್ರಿ ಗೋಪಿ, ಸಂದೀಪ್ ಮಲಾನಿ, ರವಿ ಗೌಡ ಪಾತ್ರಗಳಿಗೆ ಜೀವ ತುಂಬಿ ಅದ್ಭುತವಾಗಿ ನಟಿಸಿದ್ದಾರೆ.
ನಿರ್ಮಾಪಕರಾಗಿ ರಾಧಿಕಾ, ಚಿತ್ರಲೇಖಾ ಹಾಗೂ ನಿರ್ದೇಶಕರಾಗಿ ಸೆಲ್ವಂ ಮುತ್ತಪ್ಪನ್ ಮತ್ತು ಈ ಸಿನಿಮಾದ ಸಂಗೀತ ಪಳನಿ ಡಿ ಸೇನಾನಿ ಅವರದ್ದಾಗಿದೆ. ವಿಷ್ಣುದುರ್ಗಾ ಪ್ರೋಡಕ್ಷನ್ ಅಡಿಯಲ್ಲಿ ಮೂಡಿಬಂದ ಈ ಚಲನಚಿತ್ರದಲ್ಲಿ ಉತ್ತಮ ಹಾಡುಗಳು, ಕ್ಯಾಮೆರಾ ವರ್ಕ್, ಡೈಲಾಗ್ಸ್, ಸ್ಕ್ರೀನ್ ಪ್ಲೇ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ.
ಶರಣ್ಯ ಕೋಲ್ಚಾರ್