“ಯಕ್ಷಕಲಾ ಸಂಪನ್ನ”yakshakala sampanna
ರಾಮಚಂದ್ರ ಭಟ್ ಹಾಗೂ ಪದ್ಮಾವತಿ ಭಟ್ ಇವರ ಮಗನಾಗಿ 17.08.1986ರಂದು ಕೃಷ್ಣ ಪ್ರಸಾದ್ ಅವರ ಜನನ. BBM ಇವರ ವಿದ್ಯಾಭ್ಯಾಸ.

ಹಿರಿಯ ಕಲಾವಿದರಾದ ಶ್ರೀ ಕುಬಣೂರು ಶ್ರೀಧರ ರಾವ್, ಶ್ರೀ ಸುಬ್ರಾಯ ಹೊಳ್ಳರು, ಶ್ರೀ ಪುಂಡಿಕೈ ಗೋಪಾಲಕೃಷ್ಣ ಭಟ್, ಶ್ರೀನಿವಾಸ ಬಳ್ಳಮಂಜ ಅವರ ಪ್ರೇರಣೆಯಿಂದ ಯಕ್ಷಗಾನ ರಂಗಕ್ಕೆ ಬಂದು ಹವ್ಯಾಸಿ ಕಲಾವಿದರಾಗಿ ವೃತ್ತಿ ಆರಂಭಿಸಿ ಇಂದು ವೃತ್ತಿ ಕಲಾವಿದರಾಗಿ ಕಟೀಲು ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವ ಕಲಾವಿದರು ಕೃಷ್ಣ ಪ್ರಸಾದ್.
ಗುರುಗಳು:-
ಶ್ರೀ ಸುಬ್ರಾಯ ಹೊಳ್ಳರಿಂದ ಪ್ರಾಥಮಿಕ ಹೆಜ್ಜೆ ಮುಂದೆ ಸ್ವಯಂ ಕಲಿಕೆ
ಎಲ್ಲಾ ಪೌರಾಣಿಕ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು. ದೇವೇಂದ್ರ, ಅರ್ಜುನ, ಹಾಗೂ ಇತರೆ ಕಿರೀಟ ವೇಷಗಳು ಇವರ ನೆಚ್ಚಿನ ವೇಷಗಳು.

ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:-
ಮೊದಲಾಗಿ ಸಂಪೂರ್ಣ ಪ್ರಸಂಗದ ಮಾಹಿತಿಯನ್ನು ಪ್ರಸಂಗ ಪುಸ್ತಕಗಳ ಮೂಲಕ ತಿಳಿದು, ಪಾತ್ರದ ಸ್ವರೂಪ ಹಾಗೂ ಸ್ವಭಾವದ ಬಗ್ಗೆ ಅಧ್ಯಯನ ಮಾಡಿ, ಹಿರಿಯ ಅನುಭವಿ ಕಲಾವಿದರಿಂದ ಮಾಗದರ್ಶನ ಪಡೆದು ಅದಕ್ಕನುಗುಣವಾಗಿ ದೊರಕಿದ ಪಾತ್ರವನ್ನು ಚಂದಗಾಣಿಸಲು ಪ್ರಯತ್ನಿಸುತ್ತೇನೆ.
ವೃತ್ತಿಯಲ್ಲಿ ನೀವು ಬೇರೆ ಉದ್ಯೋಗದಲ್ಲಿ ಇದ್ದು ಪ್ರವೃತ್ತಿಯಲ್ಲಿ ಯಕ್ಷಗಾನ ಕಲಾವಿದರಾದ ನೀವು ಉದ್ಯೋಗ ಹಾಗೂ ಯಕ್ಷಗಾನ ಎರಡಕ್ಕೂ ಯಾವ ರೀತಿಯಲ್ಲಿ ಸಮಯ ಕೊಡುತ್ತೀರಿ:-
ಸಮಯದ ಹೊಂದಾಣಿಕೆ ಇಲ್ಲಿ ಬಹಳ ಮುಖ್ಯ. ಕಾರ್ಯ ಕ್ಷೇತ್ರದಲ್ಲಿರುವ ಒತ್ತಡಗಳನ್ನು ಮೀರಿ ಸಹನೆಯಿಂದ, ಸಂಯಮದಿಂದ ಮುಂದೆ ಸಾಗಿ ಕಷ್ಟವಾದರೂ ಇಷ್ಟಪಟ್ಟು ಮಾಡುವಾಗ ಮನಸಿಗೆ ನೆಮ್ಮದಿ ಸಿಗುತ್ತದೆ.

ನೀವು ಕಟೀಲು ಮೇಳದಲ್ಲಿ ಪ್ರಥಮವಾಗಿ ಹವ್ಯಾಸಿ ಕಲಾವಿದರಾಗಿ ತಿರುಗಾಟ ಶುರು ಮಾಡಿ ಈಗ ಮೇಳದಲ್ಲಿ ಪೂರ್ಣ ಪ್ರಮಾಣದ ಕಲಾವಿದರಾಗಿ ತಿರುಗಾಟ ಮಾಡುತ್ತಿದ್ದೀರಿ. ಹವ್ಯಾಸಿ ಕಲಾವಿದರಾಗಿ ಹಾಗೂ ವೃತ್ತಿ ಕಲಾವಿದರಾಗಿ ತಿರುಗಾಟ ಮಾಡಿದ ಅನುಭವ:-
ಹವ್ಯಾಸಿ ಕಲಾವಿದನಾಗಿರುವಾಗ ಅಥವಾ ಪ್ರೇಕ್ಷಕನಾಗಿ ಪಡೆದ ಅನುಭವ ಈಗ ವೃತ್ತಿ ಜೀವನದಲ್ಲಿ ಬಹಳಷ್ಟು ಪರಿಣಾಮ ಕೊಟ್ಟಿದೆ. ಪಾತ್ರಗಳ ನಿರ್ವಹಣೆಯಲ್ಲಿ ವೃತ್ತಿ ಕಲಾವಿದರಿಗೆ ಹೊಣೆಗಾರಿಕೆ ಹೆಚ್ಚಿದೆ. ಬಹಳ ಎಚ್ಚರಿಕೆಯ ಹಾಗೂ ತಾಳ್ಮೆಯ ನಡವಳಿಕೆ ಬಹಳ ಮುಖ್ಯ. ಟೀಕೆಗಳನ್ನು ಹಾಗೂ ಪ್ರಶಂಸೆಗಳನ್ನೂ ಸಮಾನವಾಗಿ ಸ್ವೀಕರಿಸಿ, ನಿರಂತರ ಕಲಿಕೆ, ಅಭ್ಯಾಸಗಳಿಂದ ಮುಂದುವರಿದರೆ ಯಶಸ್ಸು ಸಾಧ್ಯ.

ಮೇಳದಲ್ಲಿ ಅನೇಕ ಹಿರಿಯ ಕಲಾವಿದರ ಜೊತೆಗಿನ ತಿರುಗಾಟದ ಅನುಭವ:-
ಯಕ್ಷಗಾನ ವಿಷಯವಷ್ಟೇ ಅಲ್ಲದೆ ಜೀವನಾನುಭವಗಳನ್ನು ಬಹಳಷ್ಟು ಪಡೆದಿದ್ದೇನೆ. ಅನೇಕ ಹಿರಿಯ ಕಲಾವಿದರ ಮಾರ್ಗದರ್ಶನ, ಸಹಕಾರಗಳಿಂದ ನಾನೂ ಒಬ್ಬ ಕಲಾವಿದನಾಗಿ ರೂಪುಗೊಳ್ಳಲು ಸಾಧ್ಯವಾಗಿದೆ..
ಯಕ್ಷಗಾನದ ಇಂದಿನ ಸ್ಥಿತಿ ಗತಿ:-
ವರ್ತಮಾನ ಕಾಲಘಟ್ಟದಲ್ಲಿ ಯಕ್ಷಗಾನ ಕಲೆ ಉತ್ತಮ ಸ್ಥಿತಿಯಲ್ಲಿದೆ. ಕಲಾವಿದರಿಗೆ ಅವಕಾಶಗಳು ಹೇರಳವಾಗಿದೆ. ಯಕ್ಷಗಾನ ಪರಂಪರೆಯನ್ನು ಅನುಸರಿಸಿಕೊಂಡು ಮುಂದಿನ ಪೀಳಿಗೆಗಳಿಗೆ ಇದರ ನಿಜ ಸೌಂದರ್ಯವನ್ನು ದಾಟಿಸುವ ಹೊಣೆಗಾರಿಕೆ ನಮಗಿದೆ ಎಂಬ ಪ್ರಜ್ಞೆ ಕಲಾವಿದರಾಗಿ ನಮ್ಮಲ್ಲಿ ಇದ್ದಾಗ, ಕಲೆಯೊಂದಿಗೆ ನಾವೂ ಬೆಳವಣಿಗೆ ಹೊಂದುವುದಕ್ಕೆ ಸಾಧ್ಯ ಎಂಬುದು ನನ್ನ ಅಭಿಪ್ರಾಯ.

ಯಕ್ಷಗಾನದ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಾಲಮಿತಿ ಯಕ್ಷಗಾನಗಳ ಈ ಕಾಲಘಟ್ಟದಲ್ಲಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದರೂ ಪ್ರಾಮಾಣಿಕ ಪ್ರೇಕ್ಷಕರು ಸ್ವಲ್ಪ ಕಡಿಮೆ. ಕೇವಲ ಆಡಂಬರಗಳನ್ನು ಪ್ರೋತ್ಸಾಹಿಸದೆ, ಮನೋರಂಜಕವಾದ, ತತ್ವ ಜ್ಞಾನ ಸಮೃದ್ಧವಾದ ಈ ಕಲೆಯನ್ನು ಆಸ್ವಾದಿಸುವ, ಪ್ರೇರೇಪಿಸುವ ಪ್ರೇಕ್ಷಕರು ಅಧಿಕವಾದಾಗ ಯಕ್ಷಗಾನದ ಮೌಲ್ಯ ಇನ್ನಷ್ಟು ಅಧಿಕವಾಗುವುದಕ್ಕೆ ಸಾಧ್ಯ.
ಪುರಾಣಗಳ ವಿಷಯಗಳ ಸಂಗ್ರಹ, ಪ್ರವಾಸ ಇವರ ಹವ್ಯಾಸಗಳು.
ಕೃಷ್ಣ ಪ್ರಸಾದ್ ಅವರು 24.06.2012 ರಂದು ಸುಕನ್ಯಾ ಅವರನ್ನು ಮದುವೆಯಾಗಿ ಮಕ್ಕಳಾದ ಅಕ್ಷಯ್ ಕೆ ಭಟ್ ಹಾಗೂ ಅನನ್ಯ ಕೆ ಭಟ್ ಜೊತೆಗೆ ಸುಖಿ ಸಂಸಾರ ನಡೆಸುತ್ತಿದ್ದಾರೆ.
ಯಕ್ಷರಂಗದಲ್ಲಿ ನನ್ನನ್ನು ತೊಡಗಿಸಿಕೊಳ್ಳುವಲ್ಲಿ ಬೆನ್ನೆಲುಬಾಗಿ ನನಗೆ ಆಶೀರ್ವದಿಸಿದ ನನ್ನ ಹೆತ್ತವರಿಗೆ ಹಾಗೆಯೇ ಬೆಂಬಲವಾಗಿ ನನ್ನ ಜೊತೆಗಿರುವ ನನ್ನ ಮಡದಿ ಮಕ್ಕಳಿಗೆ, ಅದೇ ರೀತಿ ನಿರಂತರವಾಗಿ ಮಾರ್ಗದರ್ಶನ ನೀಡುತ್ತಿರುವ ಎಲ್ಲಾ ಹಿರಿ – ಕಿರಿಯ ಕಲಾವಿದರಿಗೆ, ಮೇಳದಲ್ಲಿರುವ ಸಹ ಕಲಾವಿದರಿಗೆ ನನ್ನ ಹೃದಯಾಂತರಾಳದ ಕೃತಜ್ಞತೆಗಳು.

ಮುಂದೆಯೂ ಇನ್ನಷ್ಟು ಈ ಕ್ಷೇತ್ರದಲ್ಲಿ ಉತ್ತಮ ಕಲಾವಿದನಾಗಿ ಬೆಳೆದು, ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ, ಅಭಿಮಾನಕ್ಕೆ ಚ್ಯುತಿ ಬಾರದಂತೆ ಮುಂದುವರಿಯಬೇಕು. ಕಲಾಮಾತೆಯ ಶ್ರೀ ಭ್ರಮರಾಂಬಿಕೆಯ ಅನುಗ್ರಹದೊಂದಿಗೆ ಸಾಧ್ಯವಾದಷ್ಟು ಸಮಯ ಕಲಾಸೇವೆ ಮಾಡುವ ಸೌಭಾಗ್ಯ ನನ್ನ ಜೀವನದಲ್ಲಿ ಒದಗಿ ಬರಲಿ ಎಂಬುದು ನನ್ನ ಪ್ರಾರ್ಥನೆ ಎಂದು ಹೇಳುತ್ತಾರೆ ಕೃಷ್ಣ ಪ್ರಸಾದ್.
ಇವರಿಗೆ ಇವರು ನಂಬಿರುವ ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ ಕಲೆಯಲ್ಲಿ ಇನ್ನಷ್ಟು ಸಾಧಿಸುವ ಶಕ್ತಿಯನ್ನು ಕರುಣಿಸಲಿ, ಅವರಿಗೆ ಶುಭವನ್ನು ಕರುಣಿಸಲಿ ಎಂದು ಬೇಡುತ್ತಿದ್ದೇವೆ ಹಾಗೂ ಕಲಾಮಾತೆಯು ಸಕಲ ಭಾಗ್ಯಗಳನ್ನೂ ಅನುಗ್ರಹಿಸಲಿ ಎಂದು ಕಲಾಭಿಮಾನಿಗಳೆಲ್ಲರ ಪರವಾಗಿ ಹಾರೈಕೆಗಳು.

ಶ್ರವಣ್ ಕಾರಂತ್ ಕೆ
ಸುಪ್ರಭಾತ
ಶಕ್ತಿನಗರ ಮಂಗಳೂರು.
:- +918317463705
ಇವರ ಜನ್ಮದಿನದ ಪ್ರಯುಕ್ತ ಶುಭಾಶಯಗಳೊಂದಿಗೆ ಈ ವಿಶೇಷ ಲೇಖನ. ಕಲಾಮಾತೆ ಹಾಗೂ ಕಟೀಲು ಶ್ರೀ ಭ್ರಮರಾಂಬೆ, ಶ್ರೀ ಅನಂತ ಪದ್ಮನಾಭ ಹಾಗೂ ಗುರು ನರಸಿಂಹ ಸಕಲ ಇಷ್ಟಾರ್ಥಗಳನ್ನು ನೆರವೇರಿಸಲಿ.