ಹಕ್ಕಿ ಜ್ವರ ಹಿನ್ನೆಲೆ ಕೋಳಿಗೆ ಡಿಮ್ಯಾಂಡ್ ಇಲ್ಲದಿದ್ದರೂ ಬೆಲೆ ಏರಿಕೆ!!! ಗಗನಕ್ಕೇರಿದ ಮಟನ್
ಬೆಂಗಳೂರು: ಕಳೆದೊಂದು ತಿಂಗಳಲ್ಲಿ ಆಂಧ್ರಪ್ರದೇಶ, ತೆಲಂಗಾಣದಲ್ಲಿ ‘ಹಕ್ಕಿಜ್ವರ’ ವ್ಯಾಪಕವಾಗಿದ್ದ ಹಿನ್ನೆಲೆಯಲ್ಲಿ ಅಲ್ಲಿ ಕೋಳಿಗಳನ್ನು ನಾಶಪಡಿಸಲಾಗಿದೆ. ರಾಜ್ಯದಲ್ಲೂ ಕೂಡ ಕೋಳಿ ಉತ್ಪಾದನೆಯನ್ನು ಪೌಲ್ಟ್ರಿ ಕಂಪನಿಗಳು ಕಡಿಮೆ ಮಾಡಿವೆ. ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿದ್ದು, ಸೋಂಕು ಪೀಡಿತ ಸಾವಿರಾರು ಕೋಳಿಗಳನ್ನು ನಾಶಪಡಿಸಲಾಗಿದೆ. ಬೆಂಗಳೂರು ಸುತ್ತಮುತ್ತಲೂ ಕೋಳಿ ಫಾರಂಗಳಲ್ಲಿ ಮಾಲೀಕರು ತೀವ್ರ ನಿಗಾ ವಹಿಸಿದ್ದಾರೆ. ಇವೆಲ್ಲ ಕಾರಣದಿಂದ ಮಾರುಕಟ್ಟೆಗೆ ಚಿಕನ್ ಪೂರೈಕೆಯೂ ಇಳಿದಿದೆ.
‘ಹಕ್ಕಿ ಜ್ವರ’ದ ಆತಂಕ, ಬಿರು ಬಿಸಿಲ ಹಿನ್ನೆಲೆಯಲ್ಲಿ ನಗರದಲ್ಲಿ ಚಿಕನ್ ವಹಿವಾಟು ಅರ್ಧದಷ್ಟು ಕುಸಿದಿದ್ದು, ಮಟನ್ ವ್ಯಾಪಾರ ಹೆಚ್ಚಾಗಿದೆ. ಆದರೆ, ಪೂರೈಕೆ ಕಡಿಮೆ ಇರುವ ಕಾರಣಕ್ಕೆ ಕೋಳಿ ದರ ಕೇಜಿಗೆ ₹20- ₹30 ರಷ್ಟು ಹೆಚ್ಚಾಗಿದೆ. ಮೊಟ್ಟೆ ದರ ಎಂದಿನಂತೆ ಸಾಮಾನ್ಯವಾಗಿದೆ.
ಹಕ್ಕಿಜ್ವರ ಬಂದಾಗ ದರ ಕಡಿಮೆ ಆಗುವುದು ಸಾಮಾನ್ಯ. ಆದರೆ, ಕಳೆದ ಒಂದು ತಿಂಗಳಿಂದ ಹಕ್ಕಿಜ್ವರದ ಸುದ್ದಿ ಜೋರಾಗಿದ್ದ ಹಿನ್ನೆಲೆಯಲ್ಲಿ ಬೆಂಗಳೂರಿನ ಕಂಪನಿಗಳು, ಪೌಲ್ಟ್ರಿಗಳು ಮುಂಜಾಗೃತೆಯಿಂದ 45 ದಿನಗಳಿಂದಲೇ ಉತ್ಪಾದನೆ ಕಡಿಮೆ ಮಾಡಿವೆ. ಹೀಗಾಗಿ ಕಳೆದ ವಾರ ಬೆಲೆ ಇಳಿದಿದ್ದರೂ ಈಗ ಪುನಃ ಹೆಚ್ಚಾಗಿದೆ. ಗ್ರಾಹಕರು ಆತಂಕದಿಂದ ಚಿಕನ್ ಖರೀದಿ ಮಾಡುತ್ತಿಲ್ಲ. ಹೀಗಾಗಿ ಚಿಲ್ಲರೆ ಮಳಿಗೆಯವರು ಹೆಚ್ಚು ಕೋಳಿಗಳನ್ನು ತೆಗೆದುಕೊಳ್ಳುತ್ತಿಲ್ಲ. ಸುಮಾರು ಅರ್ಧದಷ್ಟು ವ್ಯಾಪಾರ ಬಿದ್ದಿದೆ ಎಂದು ಹೊಲ್ಸೆಲ್ ವ್ಯಾಪಾರಸ್ಥರೊಬ್ಬರು ತಿಳಿಸಿದರು.
ನಗರದ ಮಾಂಸಾಹಾರ ಪ್ರಿಯರು ಮಟನ್ನತ್ತ ಮುಖ ಮಾಡುತ್ತಲೇ ಮಟನ್ಗೆ ಬೇಡಿಕೆ ಹೆಚ್ಚಾಗಿದೆ. ಇದರಿಂದ ದರ ಕೂಡ ಕೊಂಚ ಏರಿಕೆಯಾಗಿದೆ. ಕಳೆದ ವಾರ ಕೇಜಿಗೆ ₹700-750 ಇದ್ದ ಮಟನ್ ಈ ವಾರ ಪ್ರತೀ ಕೆಜಿ ಮಟನ್ ದರದಲ್ಲಿ ₹50 ಏರಿಕೆಯಾಗಿ ₹800 ತಲುಪಿದೆ. ಕೆಲವರು ₹900ಕ್ಕೂ ಮಾರಾಟ ಮಾಡುತ್ತಿದ್ದಾರೆ. ಮಟನ್ ದರ ಏರಿಕೆ ಹೊರತಾಗಿಯೂ ಮಾಂಸಪ್ರಿಯರು ಮಟನ್ ಖರೀದಿಯಲ್ಲಿ ತೊಡಗಿದ್ದಾರೆ ಎಂದು ವ್ಯಾಪಾರಿಗಳು ತಿಳಿಸಿದರು.