ಕಿಲಾಳಿಗೆ ಸೀಮಂತವಾಯ್ತು ಇನ್ನು ಬಾಣಂತಿ ಆರೈಕೆ
ಆಕೆಯನ್ನು ನೋಡುತ್ತಿರುವುದು ಇದೇ ಮೊದಲಲ್ಲ, ಕೆಲ ತಿಂಗಳ ಹಿಂದೆ ಹೀಗೆಯೇ ಆಫೀಸಿನ ಅಕ್ಕಪಕ್ಕದಲ್ಲಿ ಓಡಾಡುತ್ತಿದ್ದಳು. ಆಗೆಲ್ಲ ಬಹಳಾ ಚಾಕಚಕ್ಯತೆಯಿಂದ ಗಲ್ಲಿಯಲ್ಲೆಲ್ಲ ನುಗ್ಗಿ, ಕಾಂಪೌಂಡಿನ ಗೋಡೆಗಳ ಮೇಲೆಲ್ಲ ಹತ್ತಿ ಹಾರಿ ಕುಣಿದಾಡುತ್ತಿದ್ದಳು. ಆದರೆ ಒಂದು ತಿಂಗಳಿನಿಂದ ಆಕೆಯ ಪತ್ತೆಯಿರಲಿಲ್ಲ. ಎಲ್ಲಿ ಹೋದಳೆನ್ನುವುದೇ ಗೊತ್ತಾಗಲಿಲ್ಲ. ಸಾಮಾನ್ಯವಾಗಿ ಪಟ್ಟಣದಲ್ಲಿ ಬೆಕ್ಕು, ನಾಯಿಗಳು ಸಿಕ್ಕುವುದು ನಾಪತ್ತೆಯಾಗುವುದು ಸಾಮಾನ್ಯ ಅಲ್ವೇ…
ನಾನೂ ಹಾಗೆಯೇ ಆಂದುಕೊಂಡಿದ್ದೆ.
ಹೌದು ಆಕೆ ಇಗ ತುಂಬು ಗರ್ಭಿಣಿ. ಅವಳಿಗೂ ಸೀಮಂತದ ಆಸೆಯಿದೆಯಲ್ಲವೇ. ನನ್ನ ಸ್ನೇಹಿತೆ, ಹಾಗು ಕಿಲಾ(ಬೆಕ್ಕು)ಳ ಹಿತೈಷಿ ಕಿಲಾಳಿಗೆ ಭರ್ಜರಿ ಊಟದ ವ್ಯವಸ್ಥೆ ಕಲ್ಪಿಸಿ ಆಕೆಯ ಸೀಮಂತದ ಜವಾಬ್ಧಾರಿಯನ್ನು ಮುಗಿಸಿದರು. ಇನ್ನೇನು ಕೆಲದಿನಗಳಲ್ಲಿ ಅವಳ ಪ್ರೀತಿಯ ಪ್ರತೀಕ ಭುವಿಗೆ ಬರಲಿದ್ದಾರೆ.ಕಳೆದೆರಡು ದಿನಗಳಲ್ಲಿ ಅವಳ ಕಳೆ ತುಂಬಿದ ಮುಖವನ್ನು ನೋಡುವುದೇ ಚಂದವಾಗಿದೆ.
ತನ್ನ ತುಂಬಿದ ಹೊಟ್ಟೆಯ ಭಾರವನ್ನು ಹೊರಲಾರದೇ ತನ್ನದೇ ರೀತಿಯಲ್ಲಿ ಆಕಡೆಗೊಮ್ಮೆ, ಈ ಕಡೆಗೊಮ್ಮೆ ವಾಲುತ್ತಾ, ಹೇಗೋ ತನ್ನೊಳಗಿನ ಸಂತೋಷವನ್ನು ನಮ್ಮೊಡನೆ ಹಂಚಿಕೊಳ್ಳುವ ತವಕದೊಡನೆ ಆಫೀಸಿನ ಬಳಿ ಬಂದು ಮಲಗುತ್ತಾಳೆ.
ಆಕೆ ಬಂದದ್ದನ್ನು ನಾವು ಗಮನಿಸಿಲ್ಲವಾದರೆ ತನ್ನದೇ ಶೈಲಿಯಲ್ಲಿ ನಮ್ಮ ಗಮನವನ್ನು ಅವಳೆಡೆಗೆ ಸೆಳೆದುಕೊಂಡು ತನ್ನ ಪ್ರೀತಿಯನ್ನು ತೋರುತ್ತಾಳೆ. ಇಷ್ಟಾದ ಮೇಲೆಯೂ ನಾವು ಅವಳ ಆಸೆ ಪೂರೈಸದಿದ್ದರೆ ಹುಸಿ ಮುನಿಸು ತೋರುತ್ತಾಳೆ. ಅವಳ ಮುಂಗೋಪ ಕಂಡಬಳಿಕ ಆಕೆಯ ಆಸೆಯಂತೆ ತಿನಿಸುಗಳನ್ನು ನೀಡಿ ಆಕೆ ಖುಷಿಯಿಂದ ತಿನ್ನುವುದನ್ನು ನೋಡಲೇ ಚಂದ.
ತಿಂದು ಮುಗಿದ ಬಳಿಕ ಅವಳಿಚ್ಛೆಯಂತೆ ಮೆಲ್ಲಗೆ ಎದ್ದು ಹೋಗುತ್ತಾಳೆ. ಮತ್ತೆ ಬೇಸರವಾದಾಗ ಮರಳಿ ಬಾಗಿಲ ಬಳಿ ಬರುತ್ತಾಳೆ. ಕೆಲದಿನಗಳಿಂದ ಇದೇ ಅವಳ ದಿನಚರಿಯಾಗಿದೆ.
ಇನ್ನು ಆಕೆಯ ಮಕ್ಕಳು ಭುವಿಗೆ ಬಂದಬಳಿಕ ಬಾಣಂತಿ ಆರೈಕೆಯ ಕೆಲಸವೂ ನಮ್ಮ ಪಾಲಿಗೆ ದೊರಕುವ ಎಲ್ಲಾ ಅನುಮಾನಗಳಿದ್ದು ಅವಳ ಮತ್ತು ಅವಳ ಮಕ್ಕಳ ಆರೈಕೆಯ ಬಗ್ಗೆ ಉಪದೇಶಗಳಿಗಾಗಿ ನಮಗೂ ಕಿವಿಯಿದೆ
🖋️ಚಂದನ್ ನಂದರಬೆಟ್ಟು
