Back To Top

 ಮಗನ ಮದುವೆ: ಹತ್ತು ಸಾವಿರ ಕೋಟಿ ರೂ. ದಾನ ಮಾಡಿದ ಗೌತಮ್‌ ಅʼದಾನಿʼ
February 9, 2025

ಮಗನ ಮದುವೆ: ಹತ್ತು ಸಾವಿರ ಕೋಟಿ ರೂ. ದಾನ ಮಾಡಿದ ಗೌತಮ್‌ ಅʼದಾನಿʼ

ಮುಂಬೈ: ಭಾರತದ ನಂ.1 ಶ್ರೀಮಂತ ಉದ್ಯಮಿ ಗೌತಮ್‌ ಅದಾನಿ ಅವರ ಕಿರಿಯ ಪುತ್ರ ಜೀತ್‌ ವಿವಾಹವನ್ನು ಶುಕ್ರವಾರಫೆ.7ರಂದು ಸರಳವಾಗಿ ನೆರವೇರಿಸಿದರು. ಸಂಬಂಧಿಕರು ಹಾಗೂ ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾದ ಜೀತ್‌ ಅವರು ವಜ್ರೋದ್ಯಮಿ ಪುತ್ರಿ ದಿವ್ಯಾ ಶಾ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮಗನ ಮದುವೆಯನ್ನು ಸರಳವಾಗಿ ನೆರವೇರಿಸಿರುವ ಗೌತಮ್‌ ಅದಾನಿ ವಿವಿಧ ಸಾಮಾಜಿಕ ಕಾರ್ಯಗಳಿಗೆ ಬರೋಬ್ಬರಿ 10000 ಕೋಟಿ ರು. ನೆರವು ಘೋಷಿಸಿದ್ದು ಸಾಕಷ್ಟು ಸುದ್ದಿಯಾಗಿದ್ದಾರೆ.
ಸಾಮಾನ್ಯವಾಗಿ ಶ್ರೀಮಂತರ ಮಕ್ಕಳ ಮದುವೆ ಎಂದರೆ ದುಂದು ವೆಚ್ಚ ಮತ್ತು ಆಡಂಬರ ಸಹಜ. ಆದರೆ ಗೌತಮ್‌ ಅದಾನಿ ಮಗನ ವಿವಾಹವನ್ನು ಯಾವುದೇ ಅದ್ಧೂರಿ ಮತ್ತು ತೋರಿಕೆಗೆ ಮಾಡದೆ ಆಪ್ತರ ಸಮ್ಮುಖದಲ್ಲಿಸರಳವಾಗಿ ನೆರವೇರಿಸುವ ಮೂಲಕ ಸುದ್ದಿಯಾಗಿದ್ದಾರೆ. ಅದಾನಿ ಕುಟುಂಬದ ಕುಡಿಯ ಮದುವೆ ಸರಳವಾಗಿ ನಡೆದರೂ, ಹಲವು ಸಾಮಾಜಿಕ ಕಾರ್ಯಗಳಿಗಾಗಿ ಬರೋಬ್ಬರಿ 10 ಸಾವಿರ ಕೋಟಿ. ರು ದೇಣಿಗೆ ನೀಡುವ ಮೂಲಕ ಅದಾನಿ ಸಾಮಾಜಿಕ ಕಳಕಳಿಯನ್ನು ಮೆರೆದಿದ್ದಾರೆ. ಈ ಹಣವನ್ನು ಜನ ಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ವಿಶ್ವ ದರ್ಜೆಯ ಆಸ್ಪತ್ರೆ, ವೈದ್ಯಕೀಯ ಕಾಲೇಜು, ಶಾಲೆಗಳು, ಉದ್ಯೋಗಾವಕಾಶ ನೀಡುವ ಜಾಗತಿಕ ಕೌಶಲ್ಯ ಸಂಸ್ಥೆಗಳ ಸ್ಥಾಪನೆ ಯೋಜನೆಗೆ ಮೀಸಲಿಡಲಾಗಿದೆ. ಇನ್ನು ಪ್ರತಿ ವರ್ಷ 500 ದಿವ್ಯಾಂಗ ವಧುಗಳ ವಿವಾಹಕ್ಕೆ ತಲಾ 10 ಲಕ್ಷ ರು. ನೀಡುವುದಾಗಿಯೂ ಈಗಾಗಲೇ ಜೀತ್‌ ಅದಾನಿ – ದಿವಾ ಶಾ ಜೋಡಿ ಘೋಷಿಸಿದೆ.
ಎಕ್ಸ್‌ನಲ್ಲಿ ಮಗನ ಮದುವೆ ಪೋಟೊ ಹಂಚಿಕೊಂಡಿರುವ ಗೌತಮ್ ಅದಾನಿ, “ದೇವರ ಆಶೀರ್ವಾದದಿಂದ ಜೀತ್ ಮತ್ತು ದಿವಾ ಇಂದು ದಾಂಪತ್ಯ ಬದುಕಿಗೆ ಕಾಲಿರಿಸಿದ್ದಾರೆ. ಅಹಮದಾಬಾದ್‌ನಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪ್ರೀತಿಪಾತ್ರರ ಸಮ್ಮುಖದಲ್ಲಿ ವಿವಾಹ ನಡೆಯಿತು. ಇದು ಚಿಕ್ಕದಾದ ಮತ್ತು ಅತ್ಯಂತ ಖಾಸಗಿ ಕಾರ್ಯಕ್ರಮವಾಗಿತ್ತು, ಆದ್ದರಿಂದ ನಾವು ಬಯಸಿದ್ದರೂ ಸಹ ಎಲ್ಲಾ ಹಿತೈಷಿಗಳನ್ನು ಆಹ್ವಾನಿಸಲು ಸಾಧ್ಯವಾಗಲಿಲ್ಲ, ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. ದಿವಾ ಮತ್ತು ಜೀತ್‌ಗೆ ನಿಮ್ಮೆಲ್ಲರಿಂದ ಆಶೀರ್ವಾದಗಳನ್ನು ಬಯಸುತ್ತೇನೆ ಎಂದು ಹೇಳಿದ್ದಾರೆ.

Prev Post

ಪೀಣ್ಯ ಮೆಟ್ರೋ ಸ್ಟೇಷನ್‌ ಸ್ಥಳ ಬದಲಾವಣೆ: BMRCL ಏನು ಹೇಳಿದೆ

Next Post

ಟಿ20 ವಿಶ್ವಕಪ್‌: ವಿಜೇತ ಆಟಗಾರರಿಗೆ ವಜ್ರದುಂಗುರ

post-bars

Leave a Comment

Related post