Back To Top

 ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ
January 29, 2025

ಶ್ರೀಹರಿಕೋಟಾದಿಂದ GSLV-F15 ರಾಕೆಟ್‌ ಯಶಸ್ವಿ ಉಡಾವಣೆ

ಮತ್ತೊಂದು ಐತಿಹಾಸಿಕ ಸಾಧನೆಯತ್ತ ಇಸ್ರೋ

ಹೊಸ ಮೈಲಿಗಲ್ಲು ಸೃಷ್ಟಿಸುತ್ತಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಬುಧವಾರ (ಜ. 29) ಐತಿಹಾಸಿಕ ಸಾಧನೆ ಮಾಡಿದ್ದು, ಬೆಳಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -02 ಹೊತ್ತ ಜಿಎಸ್‌ಎಲ್‌ವಿ-ಎಫ್ 15 ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಗಿದೆ.

nbr 1

ಅಮರಾವತಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಬುಧವಾರ (ಜ. 29) ಐತಿಹಾಸಿಕ ಸಾಧನೆ ಮಾಡಿದೆ. ಬೆಳಗ್ಗೆ 6:23ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -02 (NVS-02) ಹೊತ್ತ ಜಿಎಸ್‌ಎಲ್‌ವಿ-ಎಫ್ 15 (GSLV-F15) ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಹೊಸ ಸಾಧನೆ ಮಾಡಿದೆ.  ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ನಡೆಸಿದ100ನೇ ಯೋಜನೆ ಇದಾಗಿದ್ದು, ಈ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಜಿಎಸ್ಎಲ್‌ವಿ-ಎಫ್ 15 ಯೋಜನೆ ಭಾರತದ ಜಿಎಸ್‌ಎಲ್‌ವಿಯ 15ನೇ ಹಾರಾಟವಾಗಿದ್ದು, ಭಾರತೀಯ ನಿರ್ಮಾಣದ ಕ್ರಯೋಜನಿಕ್ ಎಂಜಿನ್ ಬಳಸಿ ನಡೆಸಲಿರುವ 8ನೇ ಕಾರ್ಯಾಚರಣೆ (ಒಟ್ಟಾರೆ 11ನೇ ಹಾರಾಟ) ಎನಿಸಿಕೊಂಡಿದೆ.

nbr2

2023ರ ಮೇ 29ರಂದು 2ನೇ ತಲೆಮಾರಿನ ಉಪಗ್ರಹಗಳಲ್ಲಿ ಮೊದಲನೆಯದಾದ ನ್ಯಾವಿಗೇಷನ್ ಉಪಗ್ರಹ ಎನ್‌ವಿಎಸ್‌ -01 ಅನ್ನು ಯಶಸ್ವಿಯಾಗಿ ಹೊತ್ತೊಯ್ದ ಜಿಎಸ್‌ಎಲ್‌ವಿ-ಎಫ್ 12 ಮಿಷನ್ ಅನ್ನು ಜಿಎಸ್ಎಲ್‌ವಿ-ಎಫ್ 15 ಮಿಷನ್ ಅನುಸರಿಸಲಿದೆ.  ಇತ್ತೀಚೆಗೆ ಅಧಿಕಾರ ವಹಿಸಿಕೊಂಡ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಿ.ನಾರಾಯಣನ್ ಅವರಿಗೆ ಇದು ಮೊದಲ ಯೋಜನೆ ಎನ್ನುವುದು ವಿಶೇಷ. ಜತೆಗೆ ಈ ವರ್ಷದ ಇಸ್ರೋದ ಮೊದಲ ಉಡಾವಣೆ ಎನಿಸಿಕೊಂಡಿದೆ. 27.30 ಗಂಟೆಗಳ ಕ್ಷಣಗಣನೆ ಮುಗಿಯುತ್ತಿದ್ದಂತೆ 50.9 ಮೀಟರ್ ಎತ್ತರದ ರಾಕೆಟ್ ಶ್ರೀಹರಿಕೋಟಾದ 2ನೇ ಉಡಾವಣಾ ಪ್ಯಾಡ್‌ನಿಂದ ನಭಕ್ಕೆ ಚಿಮ್ಮಿತು.

ಇಸ್ರೋದ ಈ ಐತಿಹಾಸಿಕ ಸಾಧನೆಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್  ಅಭಿನಂದನೆ ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, “ಶ್ರೀಹರಿಕೋಟಾದಿಂದ 100ನೇ ಉಡಾವಣೆಯ ಹೆಗ್ಗುರುತನ್ನು ಸಾಧಿಸಿದ್ದಕ್ಕಾಗಿ ಇಸ್ರೋಗೆ ಅಭಿನಂದನೆಗಳು. ಜಿಎಸ್ಎಲ್‌ವಿ-ಎಫ್ 15 / ಎನ್‌ವಿಎಸ್‌ -02 ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ನೀವು ನಮ್ಮನ್ನು ಮತ್ತೊಮ್ಮೆ ಹೆಮ್ಮೆಪಡುವಂತೆ ಮಾಡಿದ್ದೀರಿʼʼ ಎಂದು ತಿಳಿಸಿದ್ದಾರೆ.

nbr3

ಜಿಎಸ್‌ಎಲ್‌ವಿ-ಎಫ್ 15 ರಾಕೆಟ್ ನಿಂದ ಏನೆಲ್ಲ ಅನುಕೂಲ

ನಿಖರ ಮಿಲಿಟರಿ ಕಾರ್ಯಾಚರಣೆ, ಭೂಮಿ, ಆಕಾಶ ಮತ್ತು ಸಮುದ್ರಗಳ ನಿಖರ ಮಾಹಿತಿ ಸಂಗ್ರಹ, ನಿಖರ ಕೃಷಿ ಮತ್ತು ವ್ಯವಸಾಯ ಚಟುವಟಿಕೆ, ಭೂ, ನಕಾಶೆ ಮತ್ತು ಭೂಮಿತಿ ಆಧಾರಿತ ಸಮೀಕ್ಷೆ, ತುರ್ತು ಪರಿಸ್ಥಿತಿ, ವಿಪತ್ತುಗಳು ಸಂಭವಿಸಿದಾಗ ತುರ್ತು ನೆರವು, ನಿಖರವಾದ ಉಪಗ್ರಹ ಕಕ್ಷಾ ವೀಕ್ಷಣೆಗೆ ಜಿಎಸ್‌ಎಲ್‌ವಿ-ಎಫ್ 15 ರಾಕೆಟ್‌ ಬಳಸಲಾಗುತ್ತದೆ.

1,500 ಕಿ.ಮೀ. ವ್ಯಾಪ್ತಿಯ ಪ್ರದೇಶ ದಿಕ್ಸೂಚಿ ಸೇವೆ ಒದಗಿಸಲು ನೆರವಾಗುವ ಈ ಉಪಗ್ರಹ ನ್ಯಾವಿಗೇಶನ್‌ ವಿತ್‌ ಇಂಡಿಯನ್‌ ಕನ್ಸಸ್ಟಲೇಶನ್‌ (ನಾವಿಕ್‌) ಸರಣಿಯ 2ನೇ ಉಪಗ್ರಹವಾಗಿದೆ. ಈ ಉಡಾವಣೆಯು ಭಾರತದ ಪ್ರಾದೇಶಿಕ ನ್ಯಾವಿಗೇಷನ್ ಉಪಗ್ರಹ ವ್ಯವಸ್ಥೆಯನ್ನು ನಾಲ್ಕರಿಂದ ಐದು ಉಪಗ್ರಹಗಳಿಂದ ನವೀಕರಿಸಲು ಸಹಾಯ ಮಾಡುತ್ತದೆ ಎಂದು ಇಸ್ರೋದ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ ನಿರ್ದೇಶಕ ನಿಲೇಶ್ ದೇಸಾಯಿ ಹೇಳಿದ್ದಾರೆ.

Prev Post

ಏರ್‌ಲೈನ್ಸ್‌ ಸುಲಿಗೆ ! ಪ್ರಯಾಗ್‌ ರಾಜ್‌ ಟಿಕೆಟ್‌ ದರ 50 ಸಾವಿರ ರೂ.!!

Next Post

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ: ಕನಿಷ್ಠ 15 ಮಂದಿ ಮೃತರಾಗಿರುವ ಶಂಕೆ

post-bars

Leave a Comment

Related post