ಒಂದು ಪ್ರೇಮದ ಕತೆ
ದೂರದ ಕೊಟ್ಟಾಯಂಗೆ ಬಂದು ಮಲಯಾಳಿ ಗಂದ ಗಾಳಿ ಇಲ್ಲದ ನನಗೆ ಇಲ್ಲೇ ಕಲಿಯಲು ಒತ್ತಯಿಸಿದ ಅಪ್ಪನಿಗೆ ಏನನ್ಬೇಕು. ಮೆಡಿಕಲ್ ಕೋರ್ಸ್ ಎಲ್ಲಾದರೇನು ಡಾಕ್ಟ್ರರ್ ಡಾಕ್ಟರೇ ಅಲ್ಲವೇ. 10-20 ವರ್ಷ ಕೇರಳಾದ ಏಳೆಂಟು ರೈಲ್ವೆ ಸ್ಟೇಷನ್ ಮಾಸ್ಟರ್ ಆಗಿದ್ದ ಅವರಿಗೆ ದೇವರ ನಾಡಿನ ಪ್ರೀತಿ ಹೆಚ್ಚಿದರೆ ಮಗನಿಗೆ ಏನು ನಂಟು. ನನ್ನ ಕರ್ಮ ಇಲ್ಲಿ ಬಂದು ಮನೆಯ ಸಂತೋಷ್ ಆಗಿದ್ದ ನಾನು ಸಂದೋಷೆ….ಅದೆ..ಇನ್ನು ಕೊನೆಗೆ ದೋಸೆಯಾಗದಿದ್ರೆ ಸಾಕಪ್ಪ. ಸುಮ್ನೆ ಮಂಗ್ಳೂರಲ್ಲೇ ಎನಾದ್ರು ಮಾಡ್ವಾ ಅಂತ ಇದ್ದೆ ಇಲ್ಲದಿದ್ರೆ ಬೆಂಗಳೂರು..ಎಲ್ಲ ಕನಸು.
ದೂರದೂರಿನ ಸಹವಾಸ ಅಲೆಮಾರಿ ಉಪವಾಸವೇ.
ತಿಂದದ್ದು ತೃಪ್ತಿ ಇಲ್ಲ..ಬೇಕಾದ್ದು ಒಂದೂ ಸಿಗುವುದಿಲ್ಲ. ಹೆಸರಾಂತ ಕಾಲೇಜಾದ್ದರಿಂದ ವ್ಯವಸ್ಥೆ ತಕ್ಕಮಟ್ಟಿಗೆ ಹಿತವೆನಿಸಿದ್ದರೂ ಕೊರತೆಗಳು ಇನ್ನೂ ಬಾಕಿ ಇವೆ. ಈ ಪ್ರಾಯದಲ್ಲಿ ಕಲ್ಲು ತಿಂದರೂ ಕರಗಬಹುದು ಅಂತ ಇರೋಣ…ಆದರೆ ಮನೆ ಬೇಕಲ್ಲ. ಹಾಸ್ಟೆಲ್ ಜೀವನ ನಂಗೆ ಒಂಚೂರು ಇಷ್ಟವಿಲ್ಲ. ಆದರೆ, ದಿನದ ಅರ್ಧವಂತೂ ಪುಸ್ತಕ, ತರಗತಿ, ಮೃತ ದೇಹಗಳು, ಪರೀಕ್ಷೆಯಲ್ಲೇ ಮುಳುಗುತ್ತದೆ. ಇನ್ನರ್ಧ ಖುಷಿಯಾಗಿ ಇರ್ಬೇಕಾದರೆ ನಮ್ದೇ ಒಂದು ಸ್ಪೇಸ್ ಬೇಕು. ಅದಕ್ಕೆ ಹುಡುಕಾಡಿ ಸಿಕ್ಕಿದವರು ಇಬ್ಬರು ತಮಿಳುನಾಡಿನವರು. ರೂಮ್ ಶೇರ್ ಮಾಡುವುದಾಗಿ ಒಪ್ಪಂದ ಆಯಿತು.

ಒಂದಿನ ಕಾಲೇಜು ಮುಗಿಸಿ ಮೂವರು ಗೃಹಾನ್ವೇಶಣೆಗೆ ಹೊರಟೆವು. ಇದೊಂದು ದೊಡ್ಡ ಸವಾಲು. ಯಾಕೆಂದರೆ ಮಧ್ಯವರ್ತಿಗಳ ಜಾಲ ಭೇದಿಸಿ, ನಿಜಾ ಮಾಲೀಕರ ತಾಣ ಅರಿತು, ಮನೆಯ ಬಣ್ಣ, ಗಾತ್ರ, ಸವಲತ್ತುಗಳ ಅವಲೋಕನ ನಡೆಸಿ, ಇದೇ ಮನೆ ಸಾಕು ಅಂತ ನಿರ್ಧಾರಕ್ಕೆ ಬರುವುದು ಕಠಿಣ. ಅಂತೂ ಕಾಲೇಜಿನಿಂದ 2 ಕಿಮೀ ದೂರದಲ್ಲೇ ಒಂದು ಸೂರು ಪಡೆದೆವು. ಬಾಡಿಗೆ ಏನೋ ಸಮಂಜಸವಾಗಿತ್ತು ಮೂರು ಮಂದಿಯಾದ್ದರಿಂದ ಹೊರೆ ಅಲ್ಲ ಅಂತ ಭಾವಿಸಿ, ಒಂದು ದಿನ ಹಾಲು ಕಾಯಿಸದೇ ಮನೆಯ ಎಷ್ಟನೇಯದ್ದೋ ಪ್ರವೇಶ ಮಾಡಿದೆವು. ಹಿಂದೆ ಯಾರಿದ್ದರು, ಏನಾಯಿತು ಅಂತೆಲ್ಲ ಇಂಥ ಜಾಗದಲ್ಲಿ ಯೋಚಿಸಬಾರದು. ಮುಂದೇನು…ಅಷ್ಟೇ. ಇಬ್ಬರಲ್ಲಿ ಒಬ್ಬ ಸೆಲ್ವಾ. ಜವಾಬ್ದಾರಿಗಳನ್ನು ಮೊದಲದಿನದಿಂದಲೇ ತನ್ನ ಹೆಗಲಲ್ಲಿ ಅಲ್ಲ ತಲೆಯಲ್ಲೇ ಇಟ್ಟುಕೊಂಡ. ಮನೆಗೆ ಬೇಕಾದ್ದೆಲ್ಲ ಲಿಸ್ಟ್ ಹಾಕಿ ತಂದಿಳಿಸಿದ.
ಸ್ವಲ್ಪ ಬಾಯಿ ಜಾಸ್ತಿ ಬಿಟ್ರೆ ಕೈ ಎಲ್ಲದಕ್ಕೂ ನಮ್ದೆ ಮುಂದೆ ಹೋಗಬೇಕಿತ್ತು. ಇನ್ನೊಬ್ಬ ತಲೆ ಹರಟೆ ಮಣಿ ಅಂತ ಹೆಸರು. ಹೊಂದಾಣಿಕೆಯಲ್ಲೇ ಸಾಗುತ್ತಿದ್ದ ನಮ್ಗೆ ಯಾರಿಗೂ ಯಾವ ಚಟವೂ ಇರಲಿಲ್ಲ. ಆದರೆ ಒಂದು ದಿನ…. ಮಣಿ ಬಂದು ನಿನಗೆ ಓಜೋ ಗೊತ್ತಾ ಅಂತ ಕೇಳಿದ. ನಾನು ಕೇಳಿದ್ದು ಹೊಸತ್ತು. ಆತ್ಮಾವಲೋಕನ ಅಂತ ಚುಟುಕಾಗಿ ವಿವರಿಸಿದ. ನಿಜಕ್ಕೂ ನನ್ನ ಕುತೂಹಲದ ಕಟ್ಟೆ ಒಡೆಯಿತು..ಮೆಡಿಕಲ್ ವಿದ್ಯಾರ್ಥಿಗಳಾದ ನಾವು ಮೃತದೇಹ, ಮನುಷ್ಯನ ವಿನ್ಯಾಸದಂತಹಾ ವಿಷಯದಲ್ಲೇ ಮುಳುಗಿರುವುದರಿಂದ ಆತ್ಮ, ಸತ್ತ ನಂತರದ ಜೀವನದ ಜಿಜ್ಞಾಸೆ ಮೂಡಿದ್ದು ಸಹಜ. ಅವನು ಮುಂದುವರಿಸಿ, ಓಜೋ ಬೋರ್ಡ್ ಮಾಡಿ, ಕಾಯಿನ್ ಇಟ್ಟು ಎಲ್ಲರೂ ಕೈ ಹಿಡಿದು ಕರೆದರೆ ಪ್ರೇತ ಬರುತ್ತದಂತೆ…ನಮಗೇನು ಉಪದ್ರ ಕೊಡದೆ ತನ್ನ ಕಥೆ, ವ್ಯಥೆ ತಿಳಿಸುತ್ತದೆ ಎಂದ. ಸೆಲ್ವನಿಗೆ ಸ್ವಲ್ಪ ಭಯವಾದರೂ ನಮ್ಮ ಧೈರ್ಯದ ಮಾತಿಗೆ ಕರಗಿದ. ಹೊಸದೇನಾದರು ಮಾಡಿ ಅನುಭವ ಪಡೆಯುವ ತವಕ ನನ್ನನು ಈ ಕೆಲಸಕ್ಕೂ ಹುರಿದುಂಬಿಸಿತು.
ರಾತ್ರಿಯಾದಂತೆ ಬೋರ್ಡ್ ತಯಾರಿಸಿದೆವು. ಅಲ್ಲಿ ಒಂದು ಕಡೆ ಎಬಿಸಿಡಿ ಬರೀಬೇಕು. ಮಧ್ಯದಲ್ಲಿ ವೃತ್ತ. ಕಾಯಿನ್ಗೆ ಒಂದು ಗಾಜಿನ ಲೋಟಾ. ಮಣಿ ಇದರ ಬಗ್ಗೆ ಹೆಚ್ಚಾಗಿ ತಿಳಿದಿದ್ದ. ಯಾಕೆಂದರೆ ಅವನ ಮಲಯಾಳಿ ಗೆಳೆಯರು ಕೊಟ್ಟ ಜ್ಞಾನ ಇದು. ಅವರೂ ಪ್ರಯೋಗಿಸಿದ್ದರಂತೆ ಅಂತ ಇವನೂ ನಮ್ಗೆ ಕಥೆ ಹೇಳಿದ್ದ. ಎಲ್ಲವನ್ನೂ ಸಿದ್ಧಗೊಳಿಸಿ, ಪ್ರಯೋಗ ಮಾಡಿದೆವು. ಕೋಟ್ಯಾಧಿಪತಿ ಕಾರ್ಯಕ್ರಮದಂತೆ ಪ್ರಶ್ನೆ ಉತ್ತರದ ಸುತ್ತು ಇದು. ಆತ್ಮವನ್ನು ಆಹ್ವಾನ ಮಾಡಿದರೆ ಬಂತೇ ಇಲ್ಲವೇ ಎಂದು ಕೇಳಿದಾಗ ಯೆಸ್ ಆರ್ ನೋ ಅಂತ ಕಾಯಿನ್ ಚಲಿಸಿ ಉತ್ತರಿಸುತ್ತದೆ. ಮತ್ತೆ ಕೇಳುವ ಒಂದೊಂದು ಪ್ರಶ್ನೆಗೂ ಲೆಟರ್ಗಳ ಮೇಲೆ ಕಾಯಿನ್ ಚಲಿಸಿ, ಅದನ್ನು ಜೋಡಿಸುವ ಮೂಲಕ ನಾವು ಉತ್ತರ ಕಂಡುಕೊಳ್ಳಬೇಕು. ಆದರೆ ಆತ್ಮಕ್ಕೆ ಸಿಟ್ಟು ಬರುವ ಹಾಗೆ ಪ್ರಶ್ನೆ ಕೇಳಬಾರದು. ಪರ್ಸನಲ್ ಮ್ಯಾಟರ್ ಸಲ್ಲ ಹಾಗೆ ಹೀಗೆ ಅಂತ ಆಟದಲ್ಲಿ ಹತ್ತಾರು ನಿಬಂಧನೆಗಳಿತ್ತು. ಎಲ್ಲವನ್ನೂ ಸಂಶೋದನೆ ಮಾಡಿಯೇ ಸರಿಯಾದ ಆಟ ಆಡಿದೆವು.
ಸೆಲ್ವಾ ಆತ್ಮ ಬಂತು.. ಬಂತು.. ಎಂದು ಭೀತಿಯಿಂದ ಕಿರುಚಾಡಿದ..ನಾನು ಮೆಲ್ಲನೆ ನಾಲಿಗೆ ತಡವರಿಸಿ ಹೆಸರೇನೆಂದು ಕೇಳಿದೆ..ಆಗ ಸಿ..ಎಚ್..ಐ..ಪಿ..ಪಿ..ಐ ಅಂತ ಕಾಯಿನ್ ಮೂವ್ ಆಯ್ತು ಮಣಿ ಚಿಪ್ಪಿ ಚಿಪ್ಪಿ ಅಂತ ಕರೆದ..ಕಾಯಿನ್ ಯಸ್ ಕಡೆ ಬಂತು. ಹೌದು ಆತ್ಮದ ಹೆಸರು ಚಿಪ್ಪಿ. ನಿನಗೆಷ್ಟು ವರ್ಷ ಅಂತ ಕೇಳಿದಾಗ 1234…ನಂಬರ್ಗಳಿದ್ದ ಕಡೆ ಸರಿದ ಕಾಯಿನ್ 2..0..3ಕ್ಕೆ ನಿಂತಿತು. ಅಬ್ಬಾ 203 ವರ್ಷ ಅಂತ ಎಲ್ಲರೂ ಬೆರಗಾದೆವು. ಚಿಪ್ಪಿಯ ಹಿನ್ನೆಲೆಯನ್ನು ಕೇಳುತ್ತಾ ಹೋದೆವು…203 ವರ್ಷ ಹಿಂದಿನ ಕಥೆ. ಹೇಗೆ ಸತ್ತಳು ಅಂತ ಕೇಳಬಹುದಿತ್ತೋ ಇಲ್ಲವೋ ಅಂತ ಗೊತ್ತಿರಲಿಲ್ಲ …ಭಯದಿಂದ ಕೇಳಿದೆವು. ೈರಿಡ್ ಅಂತ ಬಂತು.
ನಿಜಕ್ಕೂ ಆಕೆಯ ಕಥೆ ಕಣ್ಣಿನಲ್ಲಿ ನೀರು ಬರಿಸಿತು. ಚಿಕ್ಕಂದಿನಲ್ಲೇ ದಾಸಿ ಜೀವನ ನಡೆಸುತ್ತಿದ್ದ ಆಕೆಯ ಕುಟುಂಬ. 10ನೇ ಪ್ರಾಯದಲ್ಲೇ ಮದುವೆ. ಸ್ವಲ್ಪ ಮೇಲು ಸ್ತರದವರಾದ್ದರಿಂದ ಗಂಡಿನ ಕಡೆಯವರು ತುಂಬಾ ಕಾಡಿಸ್ತಿದ್ದರಂತೆ. ಮಾತನಾಡದ ಗಂಡ…ಹೋದ ಮನೆಯಲ್ಲಿ ನೆಮ್ಮದಿ ಇಲ್ಲದೇ ಒಮದು ದಿನ ಗಂಡನ ಅನಿರೀಕ್ಷಿತ ಸಾವಿನಿಂದ ಅವನ ಚಿತೆಗೆ ಹಾರಿ ಸತ್ತ ಹೆಣ್ಣು ಮಗುವಿನ ಅಸಹಾಯಕತೆ ತುಂಬಿದ ಕಥೆ…ಅಲ್ಲಿಗೆ ನಿಲ್ಲಿಸಿದೆವು. ರಾತ್ರಿ ನಿದ್ದೆಯೇ ಬರಲಿಲ್ಲ. ಅವಳ ನೋವು ಎಷ್ಟಿರ ಬಹುದು ಅಂತ ಕಾಡುತ್ತಿತ್ತು.
ಸತಿ, ಬಾಲ್ಯವಿವಾಹ ನಿಲ್ಲಿಸಿದ ನಮ್ಮ ದೇಶದ ಮಹಾತ್ಮರ ಕೊಡುಗೆಯ ಮಹತ್ವ ನಿಜಕ್ಕೂ ನನ್ನ ಮನ ತಟ್ಟಿತು. ಮರುದಿನ 100 ವರ್ಷ ಹಿಂದೆ ಜಮೀನ್ದಾರನ ಜೀತಾ ಕೆಲಸ ಮಾಡುತ್ತಿದ್ದ ಅಲೆಮಾರಿ ಗುಂಪಿನ ಹೆಣ್ಣು ಮಗಳು ಸೌಪರ್ಣಿಕಾ…ತನ್ನ 16ನೇ ವಯಸ್ಸಿನಲ್ಲೇ ಪ್ರಭಾವಿಗಳಿಂದ ಬಲಾತ್ಕಾರಕ್ಕೊಳಗಾಗಿ..ಅತ್ಯಾಚಾರ ಎಸಗಿ ಸಾವನ್ನಪ್ಪಿದ ಮಾನಹಾನಿಯ ಕಥೆ. ಆತ್ಮಗಳ ಗೋಳು ಕೇಳುವವರಾರು?….
ಕೆಳವೊಮ್ಮೆ ನನಗನಿಸಿದ್ದು…ಅದರ ನೋವಿನ ಕಥೆಗೆ ಕಿವಿಯಾದ ನಮಗೆ ಅವರು ನಿಜಕ್ಕೂ ಧನ್ಯವಾದ ತಿಳಿಸುತ್ತಿರಬಹುದು ಅಂತ. ಎಷ್ಟೋ ವರ್ಷದ ನೋವು ಹೇಳಿಕೊಳ್ಳಲಾಗದೆ..ಕೊರಗಿದ ಅವುಗಳಿಗೆ ವೇದಿಕೆಯಂತಿತ್ತು. ಆದರೆ ದಿನಾ ಒಂದೊಂದು ಕಥೆ ಕೇಳಿ, ಅರಗಿಸಿಕೊಂಡ ಕಷ್ಟ ನಮಗೇ ಗೊತ್ತು.