Back To Top

 ಆದಿಯೋಗಿಯ ನೋಡುವ ಯೋಗ
January 4, 2025

ಆದಿಯೋಗಿಯ ನೋಡುವ ಯೋಗ

ಜಾಗರಣೆ ಏನು ಹೊಸತಲ್ಲ…ಯಕ್ಷಗಾನ ಮೇಳದಲ್ಲಿದ್ದಾಗ ಆರು ತಿಂಗಳು ಇಡೀ ನಮ್ಮದು ಜಾಗರಣೆಯೇ. ಆದರೆ ಇದು ಶಿವನಿಗೋಸ್ಕರ, ಊರಲ್ಲಿದ್ದಾಗ ಶಿವರಾತ್ರಿಗೆ ಬೊಂಡ (ಎಳನೀರು) ಕದಿಯುದು ರೂಢಿಯ ಮಾತಾದರು, ಹತ್ತಿರದ ಈಶ್ವರ ದೇವಾಲಯದಲ್ಲಿ ನಡೆಯುವ ಜಾತ್ರೆಗೆ ಹೋಗುವುದು ಮಾಮುಲಿ ಪ್ಲ್ಯಾನ್.
ಬೆಂಗಳೂರಿನ ಕಟ್ಟಡದ ಕಾಡುಗಳ ಮಧ್ಯೆ ಮರದಲ್ಲೆಲ್ಲಿ ಬೊಂಡ, ಕಂಡರೂ ಆದು ಯಾರದೋ ತಳ್ಳೋ ಗಾಡಿಲಿ ಬಿಟ್ಟರೆ, ಕದಿಯುವ ಮಾತೇ ಇಲ್ಲ. ಮತ್ತೆ ಶಿವನ ದೇವಸ್ಥಾನಗಳು ಸೋಮವಾರವೇ ಕಾಲಿಡಲು ಜಾಗ ಇರುವುದಿಲ್ಲ ಇನ್ನು ಶಿವರಾತ್ರಿಯ ಕಥೆ ಕೇಳ್ಬೇಕಾ…ಹೀಗೆ ಕಳೆದ ಶಿವರಾತ್ರಿ ಶಿವ ಶಿವಾ ಅಂತ ಕಳೆದೆ.

kkk 1

ಆದರೆ, ಈ ಬಾರಿ ಬಯಸದೇ ಬಂದ ಭಾಗ್ಯ. ಎರಡು ದಿನಕ್ಕೂ ಮುನ್ನ ಗೆಳೆಯ ಫೋನ್ ಮಾಡಿ, ಕೊಯಂಬತ್ತೂರಿಗೆ ಬರ್ತಿಯಾ ಆಂತ ಕೇಳಿದ..ಕೆಲಸಕ್ಕೆ ರಜೆ ಹಾಕಿ ಅಲ್ಲ, ಕೆಲಸದ ಮೇರೆಗೆ ಇಶಾಫೌಂಡೇಷನ್ ನಿಂದ ಸದ್ಗುರು ಜಗದೀಶ್ (ಜಗ್ಗಿ) ವಾಸುದೇವ್ ಅವರ ನೇತೃತ್ವದಲ್ಲಿ ನಡೆಯುವ ಮಹಾಶಿವರಾತ್ರಿ ಉತ್ಸವಕ್ಕೆ ಅದೂ ಮಿಡಿಯಾ ಪರವಾಗಿ, ಸುಯೋಗವಲ್ಲದೆ ಮತ್ತೇನು.
ಸ್ಟೇಟಸ್‌ಗಳಲ್ಲಿ ಬಣ್ಣ ಬಣ್ಣವಾಗಿ ಬರುವ ಆದಿಯೋಗಿ ವಿಡಿಯೋಗಳಲ್ಲಿ ಇಷ್ಟವಾದ ಕೆಲವನ್ನು ಹಲವು ಬಾರಿ ಸ್ಟೇಟಸ್ ಹಾಕಿದ್ದೆ. ಇರಲು ಅಪ್ಪಟ ಕೃಷ್ಣ ಭಕ್ತನಾದರೇನು ಹರಿ-ಹರರು ಮಾತ್ರವಲ್ಲ ಎಲ್ಲ ದೇವರು ಒಂದೇ ಎಂಬ ಮನಸ್ಥಿತಿ ಬೇಕು. ನಮ್ಮ ಇಷ್ಟ ದೇವರು ಯಾರೇ ಇರಲಿ, ಎಲ್ಲ ದೇವರು ನಮ್ಮನ್ನು ಇಷ್ಟ ಪಡುತ್ತಾರೆ ಯಾಕೆಂದರೆ ನಾವು ಭಕ್ತರು. ಆದರೆ ಆ ಆದಿಯೋಗಿಯನ್ನು ನೋಡುವ ಯೋಗ ಈಗ ಬರುತ್ತದೆ ಎಂಬ ಊಹೆ ನನಗೆ ಇರಲಿಲ್ಲ. ಒಂದಂಥು ಸ್ಪಷ್ಟವಾಗಿತ್ತು, ಈ ಶಿವರಾತ್ರಿ ಮರೆಯಲಾಗದ ನೆನಪುಗಳನ್ನು ಕೊಡುತ್ತದೆ ಎಂದು. ಹಾಗೆ ಆಯಿತು.
ಮಿಡಿಯಾದವರ ಗುಂಪಾದ್ದರಿಂದ ಸಂಸ್ಥೆಯ ಕಡೆಯಿಂದಲೇ ಅಚ್ಚುಕಟ್ಟಾದ ವ್ಯವಸ್ಥೆ ಇತ್ತು. ಬೆಳಗ್ಗೆ 6 ಕ್ಕೆ ಮೆಜೆಸ್ಟಿಕ್‌ನಿಂದ ಪ್ರಯಾಣ ಪ್ರಾರಂಭಿಸಿದ್ದೆವು.

oo

12 ಗಂಟೆಗಳ ಸುಧೀರ್ಘ ಪ್ರಯಾಣ ಗುರಿ ತಲುಪುವ ಮುನ್ನ 10 ಕಿಮೀ ಇರುವಾಗಲೇ ಬಸ್ ಟ್ರಾಫಿಕ್‌ನಲ್ಲಿ ಸಿಕ್ಕಿಕೊಂಡಿತು. ನಾವೇನು ನಿಜವಾಗಯೂ ದೇವೇಂದ್ರನ ಐರಾವತದ ಮೇಲೆ ಕುಳಿತಿದ್ದೇವೋ ಅಂತ ಅನ್ನಿಸಿ ಬಿಡ್ತು. ಬೇರೇನಲ್ಲ ಬೇರೆ ರಾಜ್ಯದ ಬಸ್ಸುಗಳ ಸ್ಥಿತಿಗತಿ, ಅವರು ನಮ್ಮ ಬಸ್ ಅನ್ನು ನೊಡುವ ಪರಿ ಕಂಡಾಗ ಹಾಗನ್ನಿಸಿದ್ದು. ಆದರೂ ಇದು ಎಸಿ ಲಕ್ಸೂರಿ ಗಾಡಿಯೇ ಆದರೆ, ಇದಕ್ಕಿಂತ ಚೆನ್ನಾಗಿ ಇರುವುದು ಇದೆ, ಇನ್ನು ಅದನ್ನು ನೋಡಿದರೆ ಇವರ ಪ್ರತಿಕ್ರಿಯೆ ಹೇಗಿರಬಹುದು ಅಂತ ಸುಮ್ನೆ ಆಲೋಚಿಸಿದ್ದು. ಅಂತೂ ರಾಜಾರೋಷವಾಗಿಯೇ ಕಾರ್ಯಕ್ರಮದ ಸ್ಥಳಕ್ಕೆ ತಲುಪಿದೆವು. ಸುತ್ತಲು ಬೆಟ್ಟದ ತಡೆಗೋಡೆಗಳು ಮಧ್ಯೆ ವಿಶಾಲವಾದ ಸಮತಟ್ಟು ಪ್ರದೇಶ. ಎಲ್ಲಿ ನೋಡಿದರು ಜನ, ವಾಹನ. ನಾವು ತಲುಪಿದಾಗ ಕಾರ್ಯಕ್ರಮಕ್ಕೆ ಸಮಯವಾಗಿತ್ತು. ರೆಸ್ಟ್ ಮಾಡಲು ಸಮಯವಿಲ್ಲ. ಇಲ್ಲಾಂದ್ರು ರೆಸ್ಟ್‌ಗೆ ಬಂದವರಲ್ಲ.

oioi

ರಾಜ್ಯ, ಹೊರ ರಾಜ್ಯ, ದೇಶ, ವಿದೇಶದಿಂದ ಬಂದು ಸೇರಿದ ಜನಸ್ತೋಮ. ಹರಿಯುವ ನದಿಗೆ ದುಮುಖಿದ ಹಾಗೆ ಜನರ ಮಧ್ಯೆ ಇಳಿದು ಸಾಗಿದೆವು. ಅಬ್ಬಾ..ಕೊನೆಗೂ ಆದಿಯೋಗಿಯ ದರ್ಶನವಾಯಿತು. ಅದು ಈ ವಿಶೇಷ ದಿನದಂದು ನಿಜಕ್ಕೂ ಧನ್ಯನಾದೆ.
ಮಾಧ್ಯಮದವರಿಗೆ ಮೊದಲ ಸರದಿಯಲ್ಲಿ ಮೀಸಲಿದ್ದ ಜಾಗದಲ್ಲಿ ಕುಳಿತುಕೊಂಡೆವಾದರು ಹಿಂದೆ ಇದ್ದವರು ಹೇಗೆ ನೊಡುತ್ತಾರೆ ಎಂಬುದು ನನ್ನ ಚಿಂತೆ. ಅಲ್ಲಲ್ಲಿ ಎಲ್‌ಸಿಡಿ ಪರದೆಗಳಿದ್ದರೂ ಅದರಲ್ಲಿ ಕುಳಿತು ಲೈವ್ ನೊಡಬೇಕು. ಲೈವ್ ನೋಡೋದಾದರೆ ಇಲ್ಲೇಕೆ ಬರಬೇಕು. ದೊಡ್ಡ ದೊಡ್ಡ ಕಾರ್ಯಕ್ರಮದಲ್ಲಿ ಕಾಡೋ ಮೂಲಭೂತ ಪ್ರಶ್ನೆ ಇದು. ಆದ್ರೆ ಇಲ್ಲಿ ಮಾತ್ರ ಸದ್ಗುರು ಸಭೆಯ ಮಧ್ಯೆ ಇರುವ ಉದ್ದದ ಪ್ಲ್ಯಾಟ್‌ಾರ್ಮ್‌ನಲ್ಲಿ ಕುಣಿಯುತ್ತಾ ಬಂದು ಜನರನ್ನು ಭೇಟಿ ಮಾಡುತ್ತಿದ್ದರು.

iio

ಅವರನ್ನು ಹುರಿದುಂಬಿಸುತ್ತಿದ್ದರು. ಎಲ್ಲಾ ಭಕ್ತರು ಭಕ್ತಿಯ ಸಾಗರದಲ್ಲಿ ಮುಳುಗಿ ಏಳುತ್ತಿರುವುದನ್ನು ಕಂಡೆ. ನಮಗೆ ವೇದಿಕೆಯೂ ಕಾಣಬಹುದಿತ್ತು. ಖ್ಯಾತ ಗಾಯಕ ಶಂಕರ್ ಮಹದೇವನ್ ಜತೆ ಹಲವು ಪ್ರಸಿದ್ಧ ಬಾಲಿವುಡ್ ಸಿಂಗರ್‌ಗಳೇ ಕಾರ್ಯಕ್ರಮ ನಡೆಸಿಕೊಡುತ್ತಿದ್ದರು.
ಸದ್ಗುರುಗಳ ಡ್ರೀಮ್ ಪ್ರಾಜೆಕ್ಟ್ ಸಂಸ್ಕೃತಿ ಎಂಬ ಹೆಸರಿನಲ್ಲಿ ಭರತನಾಟ್ಯ ಪ್ರದರ್ಶನ ಅದ್ಭುತವಾಗಿತ್ತು. ಪ್ರತಿ ಕಲಾವಿದನು ಉತ್ತಮ ಪ್ರದರ್ಶನ ನೀಡಿದ್ದರು. ಶಂಕರ್ ಮಹದೇವನ್ ಹಾಡಿಗಂಥು ಜನ ಕುಣಿದು ಕುಪ್ಪಳಿಸಿದರು.
ಸದ್ಗುರುಗಳ ಮಾರ್ಗದರ್ಶನದ ಮಾತುಗಳನ್ನು ಮರೆಯಲು ಸಾಧ್ಯವಿಲ್ಲ. ಕೊನೇಗೆ ಹಲವು ಮಂದಿ ಕಾದುಕುಳಿತ ಲೇಸರ್‌ಲೈಟ್ ಶೋ ಬಂದೇಬಿಡ್ತು. ಬಣ್ಣದ ಬೆಳಕುಗಳು ಆದಿಯೋಗಿಯ ಪ್ರತಿಮೆಯ ಮೇಲೆ ಹರಿದಾಡುತ್ತಿದ್ದಂತೆ ಭಕ್ತರೆಲ್ಲ ಮಂತ್ರಮುಗ್ಧರಾಗಿ ಬಿಡುಗಣ್ಣಿಂದ ನೋಡುತ್ತಲೇ ಕೂತರು.

nm jpg

ಶಿವನನ್ನು ಎಲ್ಲರು ದೇವರೆಂದು ಕೊಂಡಾಡಿದರೆ, ಆದಿಯೋಗಿಯನ್ನು ಮೊದಲ ಯೋಗ ಗುರು, ದೇವರು ಎಂದೆ ಕಾಣುತ್ತೇವೆ. ಅದರ ಜತೆಗೆ ಬರುವ ಆದಿಯೋಗಿ ಹಾಡು ನನಗೆ ಮೊದಲೇ ವರೈಟ್. ನನಗೂ ಈ ದೃಶ್ಯಾವಳಿಗಳನ್ನು ಕಂಡು ಮನ ತುಂಬಿ ಬಂತು. ಶಿವರಾತ್ರಿಯಂದು ಜಾಗರಣೆ ಕೂತರ, ಉಪವಾಸ ಕೂತರೆ ದೇವರು ಒಳ್ಳೆದು ಮಾಡುತ್ತಾನೆ ಎಂಬ ನಂಬಿಕೆ ಜತೆ ಈ ಬಾರಿಯ ಶಿವರಾತ್ರಿ ಸಾರ್ಥಕತೆಯನ್ನು ಕಂಡಿತು.
ಮತ್ತೆ ನಮ್ಮ ಐರಾವತ, ವಾಹನಗಳ ಚಕ್ರವ್ಯೆಹಕ್ಕೆ ಸಿಲುಕುವುದು ಬೇಡ ಎಂದು ಬೇಗ ಹೊರಟೆವು. ಮತ್ತೆ 13 ತಾಸು ಪ್ರಯಾಣ ಮರಳಿ ರಾಜಧಾನಿಗೆ.

ಪವನ್ ಕುಮಾರ್ ಆಚಾರ್ಯ

Prev Post

ಯುಜ್ವೇಂದ್ರ ಚಹಾಲ್ ಮತ್ತು ಧನಶ್ರೀ ವರ್ಮಾರ ಈ ಸುದ್ದಿಯು ಕೇವಲ ಊಹಪೋಹವೆ?

Next Post

ಒಂದು ಪ್ರೇಮದ ಕತೆ

post-bars

Leave a Comment