ರಚನೆ
ಅಂಜನಾಸಾವಿತ್ರಿ ಪನೆಯಾಲ

-ಅಂತಿಮ ಭಾಗ –

‘ಅನಂತ, ಈಗ ನಾವು ವಾಪಸ್ ಹೋಗುದು ಹೇಗೆ?’, ಜೋಳದ ರೊಟ್ಟಿ ಬಾಯಿ ತುಂಬಾ ತುಂಬಿಸಿಕೊಂಡಿದ್ದ ಶೆಟ್ಟಿ, ನೀರುದೋಸೆಗಿಂತ ಗಟ್ಟಿ ಇದ್ದ ಆ ರೊಟ್ಟಿಯ ತುಂಡುಗಳನ್ನು ಮೆಲ್ಲುತ್ತಾ ಕೇಳಿದ. ಐವರೂ ಅಲ್ಲೇ ಹತ್ತಿರದಲ್ಲಿದ್ದ ಯಲ್ಲಮ್ಮ ಕ್ಯಾಂಟೀನಿನಲ್ಲಿ ತಿಂಡಿ ತಿನ್ನಲು ಬಂದಿದ್ದರು. ಗೀತ ಇಡ್ಲಿ ಸಿಗುವುದಿಲ್ಲ ಎಂದು ಹೇಳಿದ್ದರೂ, ಶೆಟ್ಟಿ ಆಸೆಯಿಂದ ‘ಅಣ್ಣಾ, ಇಡ್ಲಿ ಉಂಟಾ?’ ಎಂದು ಕೇಳಿದ್ದ. ಆ ಕ್ಯಾಂಟೀನಿನ ಮಾಲೀಕ ಇವನ ಭಾಷೆ ಕೇಳಿ ಅಚ್ಚರಿಯಿಂದ-

‘ಮಂಗ್ಳೂರ್ ನವ್ರೇನ್? ಇಲ್ಲೆನ್ ಕೆಲ್ಸ?’ ಎಂದು ವಿಚಾರಿಸಿದ್ದ. ಅವನ ಪ್ರಶ್ನೆಗೆ ಅನಂತ ದಾಮು-ಗೀತನ ಜೀವನಕಥೆ, ತನ್ನ ಜೀಪ್ ಹಾಳಾದ ಕಥೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಡಿಸಿ ಅವನ ಮುಂದಿರಿಸಿದ್ದ. ಅವನ ಕಥೆ ಕೇಳಿದ ಕ್ಯಾಂಟೀನಿನಲ್ಲಿದ್ದ ಬೆರಳೆಣಿಕೆಯ ಗ್ರಾಹಕರು ತ್ರಿಮೂರ್ತಿಗಳನ್ನು ಆಶ್ಚರ್ಯದಿಂದ ನೋಡುತ್ತಾ ಗುಸು ಗುಸು ಮಾತನಾಡಿಕೊಂಡರು!

Sketch (drawing) - Wikipedia

ಅವರ ಕಥೆ ಕೇಳಿ ಆ ಮಾಲೀಕನಿಗೆ ಅದೇನು ಎನಿಸಿತೋ ಏನೋ, ತನ್ನ ಬಾಣಸಿಗನನ್ನು ಹೊರ ಕರೆದು ಬಿಸಿ ಬಿಸಿ ಜೋಳದ ರೊಟ್ಟಿ ಮತ್ತೆ ಚಾ ತರಲು ಹೇಳಿದ್ದ.

‘ಇವತ್ತೇ ಹೊಗ್ಬೆಕೇನು? ಬಸ್-ಗಿಸ್ ಏನೂ ಇಲ್ಲ. ಮತ್ತೆ ಹೆಂಗೆ ಹೋಗ್ತಿರ?’, ಎಂದು ಅಲ್ಲೆ ಪಕ್ಕದಲ್ಲಿ ಕೂತಿದ್ದ ಅಜ್ಜನೊಬ್ಬ ಹೇಳಿದ. ಬರೀ ರೈತರಿಂದ ತುಂಬಿದ್ದ ಆ ಕ್ಯಾಂಟೀನಿನಲ್ಲಿ ಇವರ ಕಥೆಗೆ ಬಿಸಿ ಚಾಯಕ್ಕಿಂತಲೂ ಜಾಸ್ತಿ ಡಿಮ್ಯಾಂಡ್ ಇತ್ತು! ಅರ್ಧ ಗಂಟೆಯಲ್ಲಿ ಇವರ ಕಥೆ ಬಾಯಿಂದ ಬಾಯಿಗೆ ಹಬ್ಬಿ, ಇಡೀ ಶಿರ್ನಲ್ ಊರೇ ಇವರನ್ನು ನೋಡಲು ಕ್ಯಾಂಟೀನ್ ನ ಎದುರು ಜಮಾಯಿಸಿತ್ತು.

ಹೊಲಕ್ಕೆ ಕೆಲಸಕ್ಕೆ ಹೋಗಿದ ರೈತರು ಕೂಡ ಸುದ್ದಿ ಕೇಳಿ ಈ ‘ಮಂಗ್ಳೂರ್ ಸಾಹಸಿ’ ಗಳನ್ನು ನೋಡಲು ಬಂದಿದ್ದರು!

‘ಬಸ್ ಲ್ಲಿ ನಾವು ಹೇಗೆ ಹೋಗುದು? ನಮ್ಮ ಜೀಪ್ ಇಲ್ಲೇ ಉಂಟಲ್ಲಾ? ಇಲ್ಲಿ ಯಾರಾದ್ರು ಗಾಡಿ ರಿಪೇರಿ ಮಾಡುವವರು ಸಿಕ್ಕಿದ್ರೆ ಚಂದ ಇತ್ತು.’

‘ನೋಡಪ್ಪಾ ಅನಂತ, ಯಾವ್ ದುಕಾನ್ಗೂ ಓಪನ್ ಮಾಡ ಪೆರ್ಮಿಸ್ಸಿನ್ ಇಲ್ಲ. ನಾನು ಕೂಡ ಕ್ಯಾಂಟೀನ್ ನ ಎಂಟು ಗಂಟೆಗೆ ಕ್ಲೋಸ್ ಮಾಡ್ತೀನಿ. ಓಪನ್ ಇಟ್ರೆ ಪೋಲಿಸ್ ಬಂದು ತಿಕ-ಮುಖ ಅಂತ ನೋಡದೆ ಒದಿತಾರಪ್ಪ!’, ಎಂದು ಕ್ಯಾಂಟೀನ್ ಮಾಲೀಕ ಕಳವಳ ವ್ಯಕ್ತಪಡಿಸಿದ.

‘ಒಂದ್ ಕೆಲ್ಸ ಮಾಡಿ. ನನ್ ಅಳಿಯ ಒಬ್ಬ ಕೊಲ್ಹಾಪುರ್ ನಿಂದ ಲೋಡ್ ತರ್ತವ್ನೆ. ಅವ್ನು ಭಟ್ಕಳ ಹೋಗ್ತಾನೆ. ಅವ್ನ ಗಾಡಿಗೆ ಹತ್ಕೊಂಡು ಬಿಡಿ’, ಕ್ಯಾಂಟೀನ್ ಗೆ ಬಂದಿದ್ದ ರೈತ ಗ್ರಾಹಕರಲ್ಲೊಬ್ಬ ನುಡಿದ.
ಅವನ ಮಾತು ಕೇಳಿದ ಕೂಡಲೇ ಅವರವರ ಮಧ್ಯೆ ಗುಸು-ಗುಸು ಶುರುವಾಯಿತು.

‘ಅವ್ನ್ ಲಾರಿಲಿ ತಾನೇ ಬರ್ತಿರೋದು? ಇವ್ರನ್ನ ಎಲ್ ಕೂರ್ಸ್ತಿಯ?’, ಇನ್ಯಾರದೋ ಸ್ವರ ದೂರದಿಂದ ತೇಲಿ ಬಂತು.

‘ಹುಡುಗ್ರು ಅಡ್ಜಸ್ಟ್ ಮಾಡ್ತಾರೆ, ಬಿಡೋ’, ಎಂದು ಮತ್ಯಾರದೋ ಉತ್ತರ. ಇವರ ಉತ್ಸಾಹ ನೋಡಿದರೆ ಪಿಲಿಪ್ಪಾಡಿಯ ಐವರನ್ನು ಮನೆಗೆ ತಲುಪಿಸುವ ಜವಾಬ್ದಾರಿ ತಮ್ಮದೇ ಎಂದು ಶಿರ್ನಲ್ ಜನತೆ ಭಾವಿಸಿದಂತೆ ಕಾಣುತ್ತಿತ್ತು.

‘ನಿಮ್ ನಂಬರ್ ಕೊಡ್ರಿ. ಜೀಪ್ ರಿಪೇರಿ ಆದ್ ಮತ್ತೆ ಹೇಳ್ತೀನಿ. ರೊಕ್ಕದ್ ಬಗ್ಗೆ ಜಾಸ್ತಿ ಚಿಂತೆ ಮ್ಯಾಡ್ಬೆಡ್ರೀ. ಜಾಸ್ತಿ ಏನೂ ಕೇಳಲ್ಲ’, ಎಂದ ಆ ಕ್ಯಾಂಟೀನ್ ನ ಮಾಲೀಕ! ಅವರ ಪ್ರೀತಿಗೆ ಮನಸೋತ ಶೆಟ್ಟಿಯೂ, ದಾಮುವೂ ಎಲ್ಲಾ ಆ ಕೊರಗಜ್ಜನ ಕೃಪೆ ಎಂದು ಮನಸ್ಸಿನಲ್ಲಿಯೇ ತಮ್ಮ ಮನೆ ದೈವಕ್ಕೆ ನೂರೆಂಟು ನಮಸ್ಕಾರ ಹಾಕಿದರು.

ಸುಮಾರು 12 ಗಂಟೆಗೆ ಹೊತ್ತಿಗೆ ಎಂಟು ಚಕ್ರದ ಲಾರಿಗೆ ಹತ್ತಿದ ಪಿಲಿಪ್ಪಾಡಿಯ ಸಾಹಸಿಗಳು, ಲಾರಿಯ ಕಂಟೈನೆರ್ ಒಳಗೆ ಇದ್ದ ಸಹಸ್ರ ಬಗೆಯ ಸಾಮಾನು-ಸರಂಜಾಮುಗಳ ಮಧ್ಯೆ ನುಸುಳಿ ಕೂತರು. ಒಂದೊಂದು ಡಬ್ಬವನ್ನೂ ಒಂದೊಂದು ರೀತಿ ಪ್ಯಾಕ್ ಮಾಡಿದ್ದನ್ನು ನೋಡಿದ ಭಟ್ಟನಿಗೆ ಕುತೂಹಲ ತಡೆಯಲಾಗದೆ –

‘ಅಣ್ಣ, ಡಬ್ಬದಲ್ಲಿ ಎಂತ ಉಂಟು? ತರಕಾರಿಯ?’, ಎಂದು ಕೇಳಿಯೇ ಬಿಟ್ಟ.

‘ನೋಡಪ್ಪಾ ಹುಡುಗ, ಏನ್ ಐತೆ ಅಂತ ನಿಂಗೆ ನಾನ್ ಹೇಳಿದ್ರೆ ಮತ್ತೆ ನೀನ್ ನನ್ ಜೊತೆನೇ ಬರ್ಬೇಕಾಗತ್ತೆ. ರೆಡಿ ಇದಿಯೇನು?’, ಎಂದು ಲಾರಿಯ ಟೊಣಪ ಚಾಲಕ ಕೇಳಿದ. ಅವನ ಮಾತು ಕೇಳಿ ದಿಗಿಲು ಬಿದ್ದ ಭಟ್ಟ ಬಾಯಿ ಮುಚ್ಚಿ ಕುಳಿತ!

India Tata truck in 2020 | Urban sketchers, Urban sketching, Sketch painting

ಕಂಟೈನೆರ್ ನ ಬಾಗಿಲು ಹಾಕಿ, ಬೀಗ ಜಡಿದ ಮತ್ತೆ ಸುಮಾರು ಹೊತ್ತು ತ್ರಿಮೂರ್ತಿಗಳು ಸುಮ್ಮನೆ ಕುಳಿತಿದ್ದರು. ದಾಮು-ಗೀತನ ಕಥೆಯು ಅವರಿಗೆ ಜೀವನದ ಹಲವು ಆಯಾಮಗಳನ್ನು ಪರಿಚಯ ಮಾಡಿಸಿತ್ತು. ಜವಾಬ್ದಾರಿ ಎಂದರೇನು ಎಂದು ಅರ್ಥ ಮಾಡಿಸಿತ್ತು. ತ್ರಿಮೂರ್ತಿಗಳಿಗೆ ತಮ್ಮ ಮುಂದಿನ ಭವಿಷ್ಯ ಕಠೋರವಾಗಿ ಕಂಡರೂ, ಹೆದರುವ ಜಾಯಮಾನ ಅವರದಲ್ಲ. ಆದ್ದರಿಂದಲೇ ಅನಂತ ಪಿಸಿ ಪಿಸಿ ಎಂದು ದಾಮುವಿನ ಕಿವಿಯಲ್ಲಿ ಏನೋ ಹೇಳುವಾಗ, ಶೆಟ್ಟಿಗೆ ಇವನೇನೊ ಹೊಸ ಕಿತಾಪತಿ ಮಾಡಲು ಹೊರಟಿದ್ದಾನೆ ಎಂದು ಗೊತ್ತಿದ್ದರೂ, ಏನೂ ಹೇಳದೆ ಸುಮ್ಮನೆ ಕುಳಿತ.

‘ಶೆಟ್ಟಿ, ನಿನ್ನ ಕಿಸೆಯಲ್ಲಿ ಇರುವ ಚೂರಿ ಕೊಡ. ನನ್ನ ಎಡದಲ್ಲಿ ಇರುವ ಡಬ್ಬ ನೋಡುವಾಗ ಅದರ ಒಳಗೆ ಚಿನ್ನ ತುಂಬಿಸಿದ ಹಾಗೆ ಕಾಣ್ತಾ ಉಂಟು. ಸ್ವಲ್ಪ ಓಪನ್ ಮಾಡಿ ನೋಡುವ’

‘ಅನಂತಣ್ಣಾ, ಬ್ಯಾಡ! ಡ್ರೈವರ್ ಗೆ ಗೊತ್ತಾದ್ರೆ ನಿಮ್ ಹಲ್ಲು ಮುರಿತಾನೆ’

Hand Drawn Knife Stock Illustration - Download Image Now - iStock

‘ನೀನೊಬ್ಬಳು ಪುಕ್ಲಿ. ನಿನ್ನನ್ನು ಕರ್ಕೊಂಡು ಬರ್ಲಿಕೆ ನಾವು ಎಷ್ಟೆಲ್ಲಾ ಸಾಹಸ ಮಾಡಿದೇವೆ ಗೊತ್ತುಂಟಾ? ಅದರ ಎದುರು ಇದು ಯಾವ ಮಹಾ? ಇಷ್ಟು ಡಬ್ಬಗಳ ಮಧ್ಯೆ, ಒಂದು ಸಣ್ಣ ಡಬ್ಬ ಓಪನ್ ಮಾಡಿದ್ರೆ ಅವನಿಗೆ ಗೊತ್ತಾಗುದು ಹೇಗೆ, ನೀನೇ ಹೇಳು?’, ಎಂದು ಮರು ಪ್ರಶ್ನೆ ಹಾಕಿದ!

ಅವನ ಮಾತು ಕೇಳಿ ಶೆಟ್ಟಿಯೂ, ಭಟ್ಟನೂ ಜೋರಾಗಿ ನಕ್ಕು ಬಿಟ್ಟರು. ಅವರ ನಗು ಕೇಳಿ ತಲೆಯಾಡಿಸಿದ ದಾಮು –

‘ಗೀತ, ನಾವು ಶಾಲೆಗೆ ಹೋಗುವಾಗ ನಮ್ಮ ಭೋಜಪ್ಪ ಸರ್ ಹೇಳ್ತಿದ್ರು. ಎಂತ ಲಟಾರಿ ವಿಮಾನವನ್ನಾದ್ರು ರಿಪೇರಿ ಮಾಡ್ಬೋದು, ಆದ್ರೆ ಪಿಲಿಪ್ಪಾಡಿಯ ತ್ರಿಮೂರ್ತಿಗಳನ್ನು ರಿಪೇರಿ ಮಾಡ್ಲಿಕ್ಕೆ ಆ ಬ್ರಹ್ಮನಿಂದಲೂ ಸಾಧ್ಯ ಇಲ್ಲಂತ!’

Leave a Reply

Your email address will not be published.