ರಚನೆ
ಅಂಜನಾಸಾವಿತ್ರಿ ಪನೆಯಾಲ

ನರೇಂದ್ರ ಜೈನ್ ನ ಮಾತುಗಳನ್ನು ಕೇಳುತ್ತಲೇ ದಾಮು ಅಲ್ಲೇ ಕುಸಿದು ಬಿದ್ದ. ಅವನ ಕಣ್ಣುಗಳಿಂದ ನೀರು ಧಾರಾಕಾರ ಹರಿಯುತ್ತಿತ್ತು. ಉಮ್ಮಳಿಸಿ ಬರುತ್ತಿದ್ದ ದುಃಖ ತಡೆಯಲಾರದೆ ತನ್ನ ಮುಷ್ಟಿಯಿಂದ ನೆಲಕ್ಕೆ ಗುದ್ದಿ ಗುದ್ದಿ ತನ್ನ ಅಸಹಾಯಕತೆ, ಆಕ್ರೋಶ ವ್ಯಕ್ತಪಡಿಸುತ್ತಿದ್ದ. ಅವನ ಆಕ್ರಂದನ ನೋಡಿದ ತ್ರಿಮೂರ್ತಿಗಳಿಗೆ ಸಿಡಿಲು ಬಡಿದಂತಾಯಿತು!

ದಾಮುವಿನ ಮನಸ್ಸಿನಲ್ಲಿ ಗೀತನಿಗೆ ಇದ್ದ ಸ್ಥಾನ ಎಷ್ಟು ದೊಡ್ಡದು ಎಂದು ಅವರಿಗೆ ಆ ಕ್ಷಣ ಅರಿವಾಯಿತು. ಅನಂತ ಓಡಿ ದಾಮುವನ್ನು ಗಟ್ಟಿಯಾಗಿ ಅಪ್ಪಿಕೊಂಡು ಸಮಾಧಾನ ಮಾಡ ಹತ್ತಿದ.

‘ಹೆಲೋ…ಹೆಲೋ?’, ದಾಮುವಿನ ಕೈಯಿಂದ ಕೆಳ ಬಿದ್ದಿದ್ದ ಮೊಬೈಲ್ ಇಂದ ನರೇಂದ್ರ ಜೈನ್ ಇನ್ನೂ ಮಾತಾಡುವುದು ಕೇಳಿದ ಭಟ್ಟ, ಕೂಡಲೇ ಹೆಕ್ಕಿ-

‘ನರೇಂದ್ರಣ್ಣ, ಈರ್ ತಪ್ಪು ಮಾಲ್ತಾರ್. ದಾಮು ಪಾಪದ ಜನ. ಇಲ್ಲಿ ನಮಿಗೆ ಅವನ ಸಂಕಟ ನೋಡ್ಲಿಕ್ಕೆ ಆಗ್ತಾ ಇಲ್ಲ. ನಿಮ್ಮ ಜನ ಎಲ್ಲಿ ಇದ್ದಾರೆ ಹೇಳಿ. ಅದೆಷ್ಟು ಕಷ್ಟ ಆದ್ರೂ ತೊಂದರೆ ಇಲ್ಲ, ನಾವು ಬಂದು ಗೀತನನ್ನು ಕರ್ಕೊಂಡು ಹೋಗ್ತೆವೆ’, ಭಟ್ಟ ಖಡಕ್ ಆಗಿ ಹೇಳಿದ. ಹತ್ತಿರದಲ್ಲಿ ನಿಂತಿದ್ದ ಶೆಟ್ಟಿ ತಲೆ ಆಡಿಸುತ್ತಾ ತನ್ನ ಬೆಂಬಲ ಸೂಚಿಸಿದ.

‘ಅಯ್ಯೋ ಹುಡುಗ್ರಾ, ಸ್ವಲ್ಪ ಕೇಳುವ ಅಭ್ಯಾಸ ಬೆಳೆಸಿಕೊಳ್ಳಿ. ಆ ದಾಮೋದರನೂ ಅಷ್ಟೆ. ಕೋಪ ಬಂದ್ರೆ ನಾವು ಎಂತ ಹೇಳ್ತಾ ಇದ್ದೇವೆ ಅಂತ ಗಮನವೇ ಕೊಡುದಿಲ್ಲ. ನಾನು ನನ್ನ ಜನ ವಾಪಸ್ ಬಂದ್ರು ಹೇಳಿದೆ. ಗೀತ ವಾಪಸ್ ಬಂದ್ಲು ಅಂತ ಹೇಳಿದ್ನಾ?’

ಅವನ ಪ್ರಶ್ನೆ ಅರ್ಥ ಆಗದೆ ಭಟ್ಟನೂ-ಶೆಟ್ಟಿಯೂ ಮುಖ-ಮುಖ ನೋಡಿಕೊಂಡರು.

‘ಓ ಪೆದ್ದುಗುಂಡಾ, ಗೀತ ಶಿರ್ನಲ್ ಅಲ್ಲಿಯೇ ಇದ್ದಾಳೆ. ಅವಳು ನೀವು ಬರುವಲ್ಲಿವರೆಗೆ ಕಾಯ್ತೇನೆ ಅಂತ ಹೇಳಿದ್ಲು. ಅಲ್ಲೇ ಸ್ವಲ್ಪ ಆಚೆ-ಈಚೆ ನೋಡಿ, ಗೀತ ಕಾಣಲಿಕ್ಕೆ ಸಿಗ್ಬೋದು. ನಿಮ್ಮ ಕಥೆಯಲ್ಲಿ ಯಾರಿಗೆ ಆಗ್ಬೋದು ಮರ್ರೆ?!’, ಎಂದು ಅವನು ಮಾತು ಮುಗಿಸುವುದೂ, ಗೀತ ಪಂಚಾಯತ್ ಆಫೀಸ್ ನ ಎದುರಿದ್ದ ದಾರಿಯಲ್ಲಿ ನಡೆದುಕೊಂಡು ಬರುವುದೂ ಸರಿಯಾಯಿತು.

ಒಂದು ನಿಮಿಷ ಮೊದಲು ಬಿಕ್ಕಿ ಬಿಕ್ಕಿ ಅಳುತಿದ್ದ ದಾಮು ಈಗ ಆಶ್ಚರ್ಯದಿಂದ ಅವಳನ್ನೇ ನೋಡುತ್ತಿದ್ದ. ಕೈ ತಪ್ಪಿ ಹೋದಳು, ಇನ್ನು ಯಾವತ್ತೂ ಸಿಗಲಾರಳು ಎಂದು ಯೋಚಿಸಿ ತನ್ನ ಹಣೆಬರಹವನ್ನು ಹಳಿಯುತ್ತಿದ್ದ ಅವನಿಗೆ ಇದು ಕನಸೋ, ನನಸೋ ಗೊತ್ತೇ ಆಗಲಿಲ್ಲ.

‘ನೀನ್ ಬರ್ತೀಯಾ ಹೇಳಿದ್ದೆ. ಹಂಗೆ ಕಾಯ್ತಾ ಇದ್ದೆ. ಜೀಪ್ ಗೆ ಏನಾಯ್ತೋ?’, ಎಂದು ಗೀತ ಕೇಳಿದಾಗ, ಒಂದೆರಡು ಕ್ಷಣ ಕಣ್ಣು ಪಿಳಿ ಪಿಳಿ ಮಾಡಿದ ದಾಮು, ಕೂತಲ್ಲಿಂದಲೇ ಹಾರಿ ಅವಳನ್ನು ಬಿಗಿದಪ್ಪಿಕೊಂಡ.

‘ನೀನ್ ಇಷ್ಟು ದಿನ ಮಾತಿಗ್ ತಪ್ಪಿದವ್ನಲ್ಲ. ಹಂಗೆ ಬರ್ತೀಯಾ ಅಂತ ಗ್ಯಾರಂಟಿ ಇತ್ತು ನಂಗೆ. ದಾಮು ಅಳ್ಬೇಡಾ ಕಣೊ, ತಪ್ಪೆಲ್ಲಾ ನಂದೆ. ಇನ್ನು ಮುಂದೆ ಹಂಗೆ ಮಾಡಲ್ಲ. ಇಷ್ಟು ದಿನ ಹೆದ್ರಿ ಹೆದ್ರಿ ಬದ್ಕಿದ್ದೆ. ಈಗ ನಿನ್ನ ಕಂಡ ಮತ್ತೆ ಜೀವ ಬಂತು. ಇನ್ನು ನೀನು ಮನೆ ಬಿಟ್ಟು ಹೋಗು ಅಂದ್ರೂ ನಾನ್ ಹೋಗಲ್ಲ ‘, ನಡುಗುವ ಸ್ವರದಲ್ಲಿ ಗೀತ ಹೇಳಿದಾಗ ದಾಮು ಅವಳನ್ನು ಇನ್ನೂ ಗಟ್ಟಿಯಾಗಿ ಅಪ್ಪಿಕೊಂಡ.

‘ಗೀತ ಸಿಕ್ಕಿದ್ಲಾ?’, ನರೇಂದ್ರ ಜೈನ್ ಸ್ವರ ಕೂಡ ಭಾವುಕವಾಗಿತ್ತು.

‘ಹಾ ದಾಮುವಿಗೆ ಸಿಕ್ಕಿದ್ಲು’, ಭಟ್ಟ ಸಣ್ಣ ಸ್ವರದಲ್ಲಿ ಉತ್ತರಿಸಿದ.

‘ಸರಿ. ನೀವು ಊರಿಗೆ ಹೊರಡಿ. ಮತ್ತೆ ನನ್ನ ಕಾರ್ಕಳದ ತೋಟ ನೋಡಿಕೊಳ್ಳಿಕ್ಕೆ ದಾಮುವೇ ಸರಿಯಾದ ಜನ. ಕೆಲಸ ಬೇಕು ಅಂತಿದ್ರೆ ನಂಗೆ ಅವ ಫೋನ್ ಮಾಡ್ಲಿ.’ ಎಂದು ಹೇಳಿ ನರೇಂದ್ರ ಜೈನ್ ಫೋನ್ ಕಟ್ ಮಾಡಿದ.

ಶೆಟ್ರು, ಭಟ್ರು, ಕಾಮತ್ರು ಭಾಗ – 23

ದಾಮು-ಗೀತ ಒಬ್ಬನನ್ನೊಬ್ಬ ಅಪ್ಪಿಕೊಂಡು ಅಳುತ್ತಿದ್ದರು. ಅವರನ್ನು ಅವರಷ್ಟಕ್ಕೆ ಬಿಟ್ಟ ತ್ರಿಮೂರ್ತಿಗಳು, ಜೀಪ್ ನ ಹಿಂದೆ ಹೋಗಿ ಮುಂದಿನ ಯಾತ್ರೆ ಬಗ್ಗೆ ಚರ್ಚಿಸತೊಡಗಿದರು.

‘ಅಬ್ಬ! ಒಂದು ದೊಡ್ಡ ಕೆಲಸ ಮುಗಿತು. ಇನ್ನು ಊರಿಗೆ ಹೋಗ್ಬೋದು. ಕುಚ್ಚಿಲಕ್ಕಿ ಅನ್ನ ಊಟ ಮಾಡದೆ ಒಂದು ವರ್ಷ ಆದ ಹಾಗೆ ಆಗ್ತಾ ಉಂಟು’, ಶೆಟ್ಟಿ ನಿಟ್ಟುಸಿರು ಬಿಡುತ್ತಾ ಹೇಳಿದ.

‘ಊರಿಗೆ ಹೋಗ್ಬೊದಾ, ಹೇಗೆ? ನಿನ್ನ ಅಜ್ಜ ಪುಷ್ಪಕ ವಿಮಾನ ಕಳ್ಸಿದಾರ?’, ಅನಂತ ಭಯಾನಕವಾಗಿ ಕಾಣುತ್ತಿದ್ದ ತನ್ನ ಜೀಪ್ ನ್ನು ನೋಡುತ್ತಾ ಕೇಳಿದ.

‘ಊರಿಗೆ ಹೋಗುದು ಮತ್ತೆ. ಮೊದಲು ತಿಂಡಿ ಆಗ್ಬೇಕು. ನಂಗೆ ಹಸಿವೆ ಆಗಿ ಹೊಟ್ಟೆಯಲ್ಲಿದ್ದ ಹುಳ ಸತ್ತಿತು!’, ಭಟ್ಟ ಹೊಟ್ಟೆ ಸವರುತ್ತಾ ಹೇಳಿದ.

‘ನಾವು ಪ್ರೇಮಪಕ್ಷಿಗಳನ್ನು ಬಿಟ್ಟು ಹತ್ತಿರದಲ್ಲಿ ಹೋಟೆಲ್ ಉಂಟ ನೋಡ್ವನಾ? ಇಡ್ಲಿ ಸಿಗ್ಬೋದೋ ಏನೋ’, ಶೆಟ್ಟಿ ತನ್ನ ಗಡ್ಡ ಕೆರೆಯುತ್ತಾ ಕೇಳಿದ.

‘ಅಣ್ಣಾ, ಇದು ಉತ್ತರ ಕರ್ನಾಟಕ. ಇಲ್ಲಿ ರೊಟ್ಟಿ ಸಿಗತ್ತೆ. ಆಗತ್ತಾ?’, ಗೀತ ನಸುನಗುತ್ತಾ ಕೇಳಿದಳು. ದಾಮು-ಗೀತ ಕೈ ಕೈ ಹಿಡಿದುಕೊಂಡು ತ್ರಿಮೂರ್ತಿಗಳ ಹತ್ತಿರ ಬಂದು ನಿಂತರು.

‘ಅರ್ಧ ಗಂಟೆ ಮೊದ್ಲು ಏನೋ ಸ್ಫೋಟ ಆದಂಗೆ ಶಬ್ದ ಕೇಳ್ತು. ಆಗ್ಲೇ ಅನ್ಕೊಂಡೆ, ಅನಂತಣ್ಣನ ಜೀಪ್ ನ ಹಾಗೆ ಕೆಳ್ತೈತಲ್ಲಾ ಅಂತ. ಹಂಗೆ ಹುಡ್ಕೊಂಡು ಬಂದೆ’

‘ಎಲಾ ನಿನ್ನ! ನಿನ್ನ ಗಂಡ ನಿನ್ನನ್ನು ಕರ್ಕೊಂಡು ಬರ್ಲಿಕ್ಕೆ ಹೊರಟಾಗ ಅವನಿಗೆ ಸಾಥ್ ಕೊಟ್ಟ ವಾಹನ ಇದು. ಎಂತ ಪರಿಸ್ಥಿತಿಯಲ್ಲಿಯೂ ಅದು ನಮ್ಮ ಕೈ ಬಿಡ್ಲಿಲ್ಲ. ಮೊದಲು ನೀನು ಅದರ ಟೈರ್ ಮುಟ್ಟಿ ನಮಸ್ಕಾರ ಮಾಡಿ, ಅದರ ಕ್ಷಮೆ ಕೇಳು’, ಎಂದು ಹುಸಿಕೋಪದಿಂದ ಹೇಳಿದ.

Leave a Reply

Your email address will not be published.