ರಚನೆ
ಅಂಜನಾಸಾವಿತ್ರಿ ಪನೆಯಾಲ

‘ಇಲ್ಲ ಅನಂತ. ಇನ್ನು ಎಲ್ಲಿಯೂ ಸ್ಟಾಪ್ ಇಲ್ಲ, ಆ ಪೋಲಿಸ್ ಫೋನ್ ಮಾಡಿ ನಿಲ್ಲು ಹೇಳಿದ್ರು ನಾನು ನಿಲ್ಸುದಿಲ್ಲ. ನೀನು ಬೋನೆಟ್ ಸ್ವಲ್ಪ ಓಪನ್ ಮಾಡು, ಪರಿಸ್ಥಿತಿ ಹೇಗೆ ಉಂಟು ನೋಡ್ವ’, ದಾಮುವಿಗೆ ಅಷ್ಟು ಹೇಳಬೇಕಾದರೆ ಗಂಟಲು ಕಟ್ಟಿ ಬಂತು. ಇಡೀ ರಾತ್ರಿ ಗೀತನ ಬಗ್ಗೆ ಬಿಟ್ಟರೆ ಬೇರೆ ಏನೂ ಯೋಚಿಸದೆ ಇದ್ದ ಅವನಿಗೆ ಗೀತನ ಬಗ್ಗೆ ತನ್ನ ಭಾವನೆಗಳು ಇಷ್ಟು ಗಾಢವಾದದ್ದು ಹೇಗೆ ಎಂದು ಆಶ್ಚರ್ಯವಾಯಿತು.
ಗೀತನನ್ನು ನಾನು ಇಷ್ಟೊಂದು ಪ್ರೀತಿಸಲು ಶುರು ಮಾಡಿದ್ದು ಯಾವಾಗ? ಎಂದು ಯೋಚಿಸಿದ.

Hand-drawn vector drawing of a Broken Car with an Open Hood, Smoke is coming from the engine. Black-and-White sketch on a transparent background (.eps-file). Included files are EPS (v10) and Hi-Res JPG.

ಅನಂತ ಬೋನೆಟ್ ತೆಗೆದ ಕೂಡಲೆ, ಹೊಗೆ ಬುಸ್ಸ್ ಎಂದು ಹೊರ ಬಂದಿತು. ಇಂಜಿನ್ ಬಿಸಿ ಆಗಿ ಅದರ ಶಾಖ ಐದು ಮೀಟರ್ ದೂರದಲ್ಲಿ ನಿಂತಿದ್ದ ಭಟ್ಟನಿಗೂ ತಟ್ಟಿತು. ಅನಂತ ಮಾತನಾಡದೆ ದಾಮುವಿನ ಮುಖ ನೋಡಿದ. ದಾಮು ಎಲ್ಲಿಂದಲೋ ತಂದಿದ್ದ ಸಣ್ಣ ಅಯಸ್ಕಾಂತವನ್ನು ಬೊನೆಟ್ ನ ಮಧ್ಯೆ ತುರುಕಿಸಿದ. ಈಗ ಬೋನೆಟ್ ನ ಮಧ್ಯೆ ಒಂದು ಕಿರುಬೆರಳಿನಷ್ಟು ಅಂತರವಿತ್ತು. ಇಂಜಿನ್ ನ ಬಿಸಿ ಗಾಳಿ ಆ ಸಂದಿನಲ್ಲಿ ಹೊರ ಹೋಗುವುದನ್ನು ನೊಡಿ, ದಾಮು-

ಶೆಟ್ರು, ಭಟ್ರು, ಕಾಮತ್ರು ಭಾಗ – 22

‘ಈ ಅಯಸ್ಕಾಂತ ಸ್ವಲ್ಪ ದೂರದ ವರೆಗೆ ವರ್ಕ್ ಆಗ್ಬೋದು. ಮತ್ತೆ ಎಂತಾದ್ರು ಕಷ್ಟ ಆದ್ರೆ ಆಗ ನೋಡಿಕೊಳ್ಳುವ. ಬೇರೆ ಉಪಾಯ ಇಲ್ಲ’

‘ನಿಂಗೆ ಮಂಡೆ ಉಂಟು, ದಾಮು. ಆ ಅಯಸ್ಕಾಂತ ಎಲ್ಲಿ ಸಿಕ್ಕಿತಾ?’, ಅನಂತ ಕುತೂಹಲದಿಂದ ಕೇಳಿದ. ಅಯಸ್ಕಾಂತವನ್ನು ಬೋನೆಟ್ ನ ಮಧ್ಯೆ ಇಟ್ಟು ಜೀಪ್ ಚಲಾಯಿಸುವುದನ್ನು ಆತ ಇಷ್ಟ್ರವರೆಗೆ ಕೇಳಿರಲಿಲ್ಲ. ಆದರೆ ಈಗ ಅದರ ಬಗ್ಗೆ ಚರ್ಚಿಸಲು ಸಮಯವಿರಲಿಲ್ಲ.

‘ನಾವು ಶಾಲೆಯಲ್ಲಿ ಇರುವಾಗ ವಿಜ್ಞಾನನಕ್ಕೆ ಇದ್ದ ಭೋಜಪ್ಪ ಸರ್ ನೆಂಪು ಉಂಟಾ? ಅವರು ನಂಗೆ ಒಂದು ದಿನ ಪೆಟ್ಟು ಕೊಟ್ಟದ್ರಲ್ಲಿ ಬೆನ್ನಿನ ಚೋಲಿ ಎದ್ದು ಬಂದಿತ್ತು. ಹಾಗೆ ನಾನು ಕೋಪದಲ್ಲಿ ಅವರ ಡೆಸ್ಕ್ ಇಂದ ಒಂದು ಅಯಸ್ಕಾಂತ ಕದ್ದಿದ್ದೆ. ಅದೇ ಇದು’ , ಎಂದು ಪೆಚ್ಚು ನಗೆ ಸೂಸುತ್ತಾ ನುಡಿದ.

‘ಎಲಾ ನಿನ್ನ! ಅದು ನೀನು ಕದ್ದದ್ದಾ? ನಾನು ಕದ್ದದ್ದು ಅಂತ ಹೇಳಿ ಭೋಜಪ್ಪ ಸರ್ ಅಪ್ಪನನ್ನು ಶಾಲೆಗೆ ಬರುವಾಗ ಹಾಗೆ ಮಾಡಿದ್ದು ನಿನ್ನಿಂದಲಾ? ಬ್ಯಾವರ್ಸಿ, ನಿನ್ನಿಂದಾಗಿ ನಂಗೆ ಶಾಲೆಯಲ್ಲಿಯೂ- ಮನೆಯಲ್ಲಿಯೂ ಸರಿ ಪೆಟ್ಟು ಸಿಕ್ಕಿದೆ, ಗೊತ್ತುಂಟಾ?’, ಶೆಟ್ಟಿ ಹುಸಿ ಕೋಪದಲ್ಲಿ ನುಡಿದ.

‘ನೀನೆಂತ ಭಯಂಕರ ಸಾಚ ಇರ್ಲಿಲ್ಲ, ಆಯ್ತಾ? ಗಣಿತ ಕ್ಲಾಸ್ ಲ್ಲಿ ನಿನ್ನನ್ನು ಒಂದು ಕಾಲಿನಲ್ಲಿ ನಿಲ್ಸಿದ್ರು ಅಂತ ಗಣಿತ ಸರ್ ಮನೆಗೆ ಹೋಗಿ ಅವರ ಸೈಕಲ್ ಟೈರ್ ಪಂಕ್ಚರ್ ಮಾಡಿದ ಆಸಾಮಿ ನೀನು. ಆದ ಕಾರಣವೇ ಭೋಜಪ್ಪ ಸರ್ ಗೆ ನಿನ್ನ ಮೇಲೆ ಡೌಬ್ಟ್ ಬಂದದ್ದು.’, ಎಂದು ಅನಂತ ಶೆಟ್ಟಿಯ ಕೈ ತಿವಿದ.

ಮುಂದಿನ ಒಂದೂವರೆ ಗಂಟೆಗಳ ಕಾಲ ಶೆಟ್ಟಿಯೂ-ಅನಂತನೂ ಅವರಿಬ್ಬರಲ್ಲಿ ಯಾರು ಜಾಸ್ತಿ ಪೋಕರಿ ಎಂದು ವಾದ ಮಾಡುವುದರಲ್ಲೆ ಕಳೆದರು. ದಾಮು ಇವರ ವಾದ-ವಿವಾದ ಕೇಳುತ್ತಾ, ತನ್ನ ಜೀವನದಲ್ಲೆದಿದ್ದ ಸುಂಟರ ಗಾಳಿಯನ್ನು ಮರೆಯಲು ಪ್ರಯತ್ನಿಸಿದ.

ಮುಂಜಾವಿನ ಐದು ಗಂಟೆಗೆ ಸರಿಯಾಗಿ ದಾಮುವಿಗೆ ಫೋನ್ ಬಂತು. ನರೇಂದ್ರ ಜೈನ್ ನ ಕಡೆಯವರು ಶಿರ್ನಲ್ ತಲುಪಿ ಇವನ ಆಗಮನವನ್ನೇ ಕಾಯುತ್ತಾ ಇದ್ದರು. ಗಡಿಯಾರದ ಮುಳ್ಳು ಆರು ತೋರಿಸುವುದಕ್ಕಿಂತ ಮೊದಲು ಅವರಿಗೆ ಮಹಾರಾಷ್ಟ್ರದ ಗಡಿ ದಾಟಬೇಕಿತ್ತು!

ಶಿರ್ನಲ್ ಗೋ, ಅವರಿದ್ದಲಿಂದ ಇನ್ನೂ ಐವತ್ತು ಕಿಲೋಮೀಟರ್. ದಾಮುವಿಗೆ ಚಿಂತೆಯಲ್ಲಿ ಬೆವರು ಹರಿಯಲು ಶುರುವಾಯಿತು. ಆತ ಹಿಂದೆ-ಮುಂದೆ ನೋಡದೆ ಆಕ್ಸಲರೇಟರ್ ಮೇಲೆ ಕಾಲು ಒತ್ತಿದ!

ಅವನು ಒತ್ತಿದ್ದೇ ತಡ ಅನಂತನ ಜೀಪ್ ಭೀಕರವಾಗಿ ಆರ್ತನಾದದ ಜೊತೆ, ಗಡ ಗಡ ನಡುಗಲು ಶುರು ಮಾಡಿತು. ಜೀಪ್ ನೊಳಗೆ ಇದ್ದವರಿಗೆ ಭೂಕಂಪ ಆದಂತೆ ಭಾಸವಾಗಲು ಶುರುವಾಯಿತು. ಬೋನೆಟ್ ಮಧ್ಯೆ ತುರುಕಿಸಿದ್ದ ಅಯಸ್ಕಾಂತ ಒತ್ತಡ ತಾಳಲಾರದೆ ಕಳಚಿ ಬಿದ್ದಿತು. ಜೀಪ್ ಶಿರ್ನಲ್ ತಲುಪುವವರೆಗೆ ಸಹಿಸಿಕೊಂಡರೆ ಸಾಕು ಎಂದು ನಾಲ್ವರೂ ತಮ್ಮ ತಮ್ಮ ಇಷ್ಟದೇವತೆಗಳಿಗೆ ಮೊರೆ ಹೊಕ್ಕರು!

ಅಂತೂ-ಇಂತೂ, ಆರು ಗಂಟೆ ಐದು ನಿಮಿಷಕ್ಕೆ ಶಿರ್ನಲ್ ತಲುಪಿದ ಇವರು ಶಿರ್ನಲ್ ಪಂಚಾಯತ್ ಆಫೀಸ್ ಎದುರು ಜೀಪ್ ನಿಲ್ಲಿಸುವುದೂ, ಆ ಜೀಪ್ ಘೋರವಾಗಿ ಕೆಮ್ಮಿದಂತೆ ಶಬ್ದ ಮಾಡಿ, ಬೋನೆಟ್ ನಿಂದ ಕಪ್ಪು ಹೊಗೆ ಹೊರ ಬರುವುದೂ ಸರಿ ಆಯಿತು. ಇನ್ನೇನು ಜೀಪ್ ಗೆ ಬೆಂಕಿ ಹತ್ತುತ್ತದೆ ಎಂದು ಗಾಬರಿ ಬಿದ್ದ ತ್ರಿಮೂರ್ತಿಗಳು ಛಂಗನೆ ಜೀಪ್ ನಿಂದ ಹೊರ ಹಾರಿದರು!

ಆದರೆ ದಾಮುವಿನ ಗಮನ ಮರಣ ಶಯ್ಯೆಯಲ್ಲಿದ್ದ ಜೀಪ್ ನ ಮೇಲೆ ಇರಲಿಲ್ಲ. ಅವನ ತೇವವಾದ ಕಣ್ಣುಗಳು, ಹತಾಶೆಯಿಂದ ತನ್ನ ಒಡತಿಯನ್ನು ಹುಡುಕುತ್ತಿದ್ದವು! ಆದರೆ, ಅಕ್ಕ-ಪಕ್ಕದಲ್ಲಿ ಗೀತನನ್ನು ಬಿಡಿ, ಬೇರೆ ಯಾವ ನರ ಪಿಳ್ಳೆಯೂ ಕಾಣ ಸಿಗಲಿಲ್ಲ!

‘ಎಂತದಾ, ಈ ಊರಲ್ಲಿ ಮನುಷ್ಯರೇ ಇಲ್ವಾ? ಯಾರೂ ಕಾಣ್ತಾ ಇಲ್ಲ?’, ಅನಂತ ಅತ್ತಿತ್ತ ನೋಡುತ್ತಾ ಕೇಳಿದ.

ಅವನ ಪ್ರಶ್ನೆಗೆ ಉತ್ತರ ಕೊಡುವ ಧೈರ್ಯವಾಗಲಿ, ಮನಸ್ಸಾಗಲಿ ಶೆಟ್ಟಿಗೂ, ಭಟ್ಟನಿಗೂ ಇರಲಿಲ್ಲ. ಅವರ ಮನಸ್ಸಿನಲ್ಲಿದ್ದುದು ಒಂದೇ ಪ್ರಶ್ನೆ – ಗಂಟೆ ಆರು ಕಳಿತು. ಗೀತನನ್ನು ನರೇಂದ್ರ ಜೈನ್ ನ ಜನ ವಾಪಾಸ್ ಕರ್ಕೊಂಡು ಹೋದ್ರಾ?
ಆದರೆ ಅದನ್ನು ಗಟ್ಟಿಯಾಗಿ ಕೇಳುವ ಧೈರ್ಯ ಅವರಿಗಿರಲಿಲ್ಲ!

ದಾಮು ನಡುಗುತ್ತಿದ್ದ ಕೈಗಳಿಂದ ತನ್ನ ಮೊಬೈಲ್ ಹೊರ ತೆಗೆದು ನರೇಂದ್ರ ಜೈನ್ ಗೆ ಫೋನ್ ಮಾಡಿದ.

‘ದಾಮೊದರ, ನೀನು ಎಷ್ಟು ಲೇಟ್ ಆಗಿ ಫೋನ್ ಮಾಡಿದ್ರೆ ಹೇಗೆಯಾ? ನನ್ನ ಜನ ನಿಂಗೆ ಕಾದು-ಕಾದು ವಾಪಸ್ ಬಂದ್ರು!’

1 Comment

  • ಶೆಟ್ರು, ಭಟ್ರು, ಕಾಮತ್ರು ಭಾಗ - 24 - ಇನ್ಫೊಮೈಂಡ್ಸ್- ಡಿಜಿಟಲ್ ಮೀಡಿಯಾ, September 29, 2020 @ 9:36 am Reply

    […] ಶೆಟ್ರು, ಭಟ್ರು, ಕಾಮತ್ರು ಭಾಗ – 23 […]

Leave a Reply

Your email address will not be published.