-ಮನೀಷಾ ಮದುವೆಗದ್ದೆ

ಅದು ಯುರೋಪ್ ಖಂಡದ ವಾಯುವ್ಯ ಭಾಗದ ಪುಟ್ಟ ದೇಶ. ಜಲದ ಬಲೆಯೊಳಗೆ ಸೌಂದರ್ಯದಿಂದ ಬಂಧಿಯಾದ ದೇಶ. 41,500 ಚದರ ಕಿ.ಮೀ ವ್ಯಾಪ್ತಿಯಲ್ಲಿ ಹರಡಿರುವ 1.7 ಕೋಟಿ ಜನರಿಗೆ ಆಶ್ರಯ ಕಲ್ಪಿಸಿದ ಪುಟ್ಟ ಸೌಂದರ್ಯ ನಗರಿ. ಎತ್ತ ತಿರುಗಿದರೂ ಕಾಣುತ್ತದೆ ವಿಶಾಲ ಜಲರಾಶಿ, ಸಮುದ್ರ, ನದಿ, ಕೆರೆ,ಕಾಲುವೆ. ತನ್ನ ಶೃಂಗಾರದ ಮೈಕಟ್ಟಿನಿಂದಲೆ ಹಲವು ಪ್ರವಾಸಿಗರು ಕಣ್ಣು ಮಿಟುಕಿಸದೆ ದಿಟ್ಟಿಸುವಂತೆ ಮಾಡಿದ ಕನ್ನಿಕೆ “ನೆದೆರ್ಲ್ಯಾಂಡ್”.

“ಯಥಾ ಮಾತೆ ತಥಾ ಮಕ್ಕಳು” ಎನ್ನುವಂತೆ ಪ್ರಕೃತಿಗೆ ತಕ್ಕಂತೆ ಸರಳ ಜೀವನ ಶೈಲಿಯನ್ನು ಹೊಂದಿರುವುದು ಅಲ್ಲಿನ ಪ್ರಜೆಗಳ ಶ್ರೇಷ್ಠತೆ. ಈ ಸರಳತೆಗೆ ಮಾದರಿಯಾಗಿ ನಿಂತಿರುವುದು “ನೆದೆರ್ಲ್ಯಾಂಡ್ ಸೈಕಲ್ ಸವಾರಿ”.

ಪ್ರಮುಖವಾಗಿ ಡಚ್ ಜನರು ಸೈಕಲ್ ಮೋಹಿಗಳು. ಸೈಕಲ್ ಸವಾರಿ ಅವರ ಜೀವನದ ಅವಿಭಾಜ್ಯ ಭಾಗ ಹಾಗೂ ವೈಯಕ್ತಿಕ ಸಾರಿಗೆ ವಿಧಾನ. ಅದೇ ರೀತಿ ಅಲ್ಲಿನ ಜನರು ಸೈಕಲ್ ಯಾತ್ರೆಯಲ್ಲಿ ಭಾವೋದ್ರಿಕ್ತರಾಗಿದ್ದಾರೆ. 40% ಜನರು ಸೈಕಲ್ ಸಂಚಾರದ ಮೇಲೆ ಅವಲಂಬಿತರಾಗಿದ್ದಾರೆ. ದೇಶದ ಜನಸಂಖ್ಯೆಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್ ಗಳಿವೆ ಎನ್ನುವುದು ಕುತೂಹಲಕಾರಿ ಸಂಗತಿ.

ನೆದೆರ್ಲ್ಯಾಂಡ್ ನ ಸಮತಟ್ಟಾದ ಭೂಭಾಗ, ತಂಪಾದ ವಾತವರಣ, ವ್ಯವಸ್ಥಿತ ಮೂಲ ಸೌಕರ್ಯಗಳು ಸೈಕಲ್ ಸಂಚಾರಕ್ಕೆ ಉತ್ತಮ ಅಡಿಪಾಯ. ಇಲ್ಲಿ ಸೈಕ್ಲಿಂಗ್ ಗಾಗಿಯೇ ಪ್ರತ್ಯೇಕ ಸಂಚಾರ ವ್ಯವಸ್ಥೆ ಇದೆ. ನಗರ ಹಾಗೂ ಪಟ್ಟಣ ಪ್ರದೇಶ ಸೇರಿದಂತೆ 32,000km ಸೈಕಲ್ ಪಥವಿದೆ. ಜೊತೆಗೆ ಸುವ್ಯವಸ್ಥಿತ ಪಾರ್ಕಿಂಗ್ ಕ್ಷೇತ್ರಗಳೂ ಇದೆ.

ಸೈಕಲ್ ಬಳಕೆಯ ಉಪಯೋಗಗಳು ಹಲವು. ಇದರಿಂದ ಪ್ರಕೃತಿಗೆ, ಸಮಾಜಕ್ಕೆ, ಜೀವನಕ್ಕೆ, ಆರೋಗ್ಯಕ್ಕೆ, ಹೀಗೆ ಹಲವು ಬಗೆಯ ಒಳಿತುಗಳಿವೆ. ನೆದೆರ್ಲ್ಯಾಂಡ್ ಈ ಎಲ್ಲಾ ಒಳಿತುಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತಿದೆ. ಹಾಗಿದ್ದಲ್ಲಿ ನಾವೇಕೆ ನಮ್ಮ ಊರು ಪಟ್ಟಣಗಳಲ್ಲಿ ಈ ಕ್ರಮವನ್ನು ಅಳವಡಿಸಬಾರದು?

ಕಡುಬಿಸಿಲ ದಗೆ, ಹೊಗೆಚ್ಚೆಲ್ಲುವ ಯಂತ್ರ, ಅನಿಲಗಳ ಆಡಳಿತ, ಹಾರ್ನ್ ಗಳ ಆರ್ಭಟ, ಮೋಟಾರ್ ವಾಹನಗಳ ಹೊಡೆದಾಟ ಇವೆಲ್ಲವನ್ನು ನೋಡಿ ದಂಗಾದ ನಮ್ಮೀ ಬದುಕಿಗೆ ತಿರುವು ಕೊಡಲು ನೆದೆರ್ಲ್ಯಾಂಡ್ ನ ಈ ತತ್ವವನ್ನು ನಾವು ಲಕ್ಷ್ಯಕ್ಕೆ ತರೋಣ.

ಈಗಾಗಲೇ ಬೆಂಗಳೂರಿನಂತಹ ಪಟ್ಟಣದಲ್ಲಿ YULU ಸೈಕಲ್ ಗಳು ಅಸ್ತಿತ್ವಕ್ಕೆ ಬಂದಿದೆ ನಿಜ. ಆದರೆ ಅದರ ಬಳಕೆ ಶೇಕಡ 5 ರಷ್ಟೂ ಇಲ್ಲ. ಕಾಲ್ನಡಿಗೆ ದೂರಕ್ಕೂ ಬೈಕ್, ಕಾರ್ ಗಳನ್ನು ಅವಲಂಬಿತರಾಗಿದ್ದಾರೆ. ಇದರಿಂದ ಪ್ರಕೃತಿಗೆ ಆಗುತ್ತಿರುವ ಸಮಸ್ಯೆ ಬಗೆಹರಿಸಲಾಗದಷ್ಟು. ಈ ಸಮಸ್ಯೆಗೆ ಒಂದು ಉತ್ತಮ ಪರ್ಯಾಯ ಸೈಕಲ್ ಬಳಕೆ. ಪರಿಸರದ ಸಮತೋಲನ ಕಾಪಾಡುವಲ್ಲಿ ಹಾಗೆಯೇ ವಾತಾವರಣದ ಗುಣಮಟ್ಟ ಹೆಚ್ಚಿಸಲು ಸೈಕಲ್ ಸವಾರಿ ಉತ್ತಮ ವರದಾನ.

ಪಟ್ಟಣ ಪ್ರದೇಶಗಳಲ್ಲಿ ಭೂಭಾಗ ಸಮತಟ್ಟಾಗಿರುವ ಕಾರಣ ಸೈಕಲ್ ಸಂಚಾರಕ್ಕೆ ಏನು ಅಡ್ಡಿಯಿಲ್ಲ. ಟ್ರಾಫಿಕ್ ತೊಂದರೆಯೂ ಇಲ್ಲದೆ ಆರಾಮವಾಗಿ ಓಡಾಡಬಹುದು. ಅಂತೆಯೇ ಉತ್ತಮ ವ್ಯಾಯಾಮ ದೊರೆತು ಶಾರೀರಿಕವಾಗಿ ಆರೋಗ್ಯವಂತರಾಗಬಹುದು. ಮನಸ್ಸಿಗೆ ಉಲ್ಲಾಸ ಸಿಗುವುದು. ಜೊತೆಗೆ ಅನುಕೂಲಕರವಾಗಿ, ಸ್ವಾತಂತ್ರ್ಯವಾಗಿ, ಸಮಯಪಾಲನೆ ಮಾಡುತ್ತಾ ಬದುಕಬಹುದು.

ನಮ್ಮ ದೇಶದ ಜನ ಆಡಂಬರಕ್ಕೆ ಒತ್ತು ಕೊಡುತ್ತಾರೆ. ಹಾಗಾಗಿ ಸೈಕಲ್ ಬಳಕೆ ಎಂದರೆ ಕೀಳರಿಮೆ ತೋರಿಸುತ್ತಾರೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ನೆದೆರ್ಲ್ಯಾಂಡ್ ಗೆ ಭೇಟಿ ಕೊಟ್ಟಾಗ ಅಲ್ಲಿನ ಪ್ರಧಾನಮಂತ್ರಿ ಮಾರ್ಕ್ ರುಟ್ಟೆ ಯವರು ಒಂದು ಸೈಕಲ್ ಅನ್ನು ಉಡುಗೊರೆಯಾಗಿ ಕೊಟ್ಟು “ಪರಿಸರ ಸಂರಕ್ಷಣೆ ಹಾಗೂ ಸರಳ ಜೀವನ ನಡೆಸಿ” ಅನ್ನುವ ತತ್ವವನ್ನು ಭಾರತೀಯರಿಗೆ ತಿಳಿಸಿಕೊಡುತ್ತಾರೆ. ಆ ತತ್ವವನ್ನು ನಾವೆಲ್ಲ ಪಾಲಿಸುವಲ್ಲಿ ಭಾಗಿಯಾಗೋಣ. “ಆಡಂಬರವ ಬಿಟ್ಟು ಸರಳತೆಯ ಜೊತೆಗೆ ಫಲವತ್ತಾದ ಜೀವನ ನಡೆಸೋಣ”.

ನಮ್ಮ ನಮ್ಮ ಊರಿನಲ್ಲೇ ನೆದೆರ್ಲ್ಯಾಂಡ್ ಚಿತ್ರಣ ಕಾಣೋಣ.

Leave a Reply

Your email address will not be published.