ಲೇಖಕಿ – ಮನೀಷಾ ಮದುವೆಗದ್ದೆ

“ಜುಲೈ ೧ ವೈದ್ಯರ ದಿನ” ನಮಗೆ ನೆನಪಿಲ್ಲದೆ ಇದ್ದರೂ ಹಲವು ಸಾಮಾಜಿಕ ಜಾಲತಾಣಗಳು ನಮಗೆ ಈ ದಿನವನ್ನು ನೆನಪಿಸುತ್ತದೆ. ನಿಜಾಂಶವೆಂದರೆ ವೈದ್ಯರಿಗೆ ಸಲ್ಲಬೇಕಾದ ಗೌರವ ಕೇವಲ ಈ ಒಂದು ದಿನಕ್ಕೆ ಸೀಮಿತವಲ್ಲ. ಯಾಕೆಂದರೆ ಸಮಯದ/ದಿನಗಳ/ ಶಿಫ್ಟ್ ಗಳ ಮಿತಿಯಿಲ್ಲದೆ ದುಡಿಯುವಂತಹ ವೃತ್ತಿ ಅವರದ್ದು. ಹಾಗಿದ್ದಲ್ಲೂ ವೈದ್ಯರಿಗೆಂದೆ ಒಂದು ದಿನವನ್ನು ಸೀಮಿತವಾಗಿ ಇಡಲಾಗಿದೆ. ಇದರ ಹಿಂದಿರುವ ಕಾರಣ ; “ಭಾರತ ರತ್ನ ಡಾ.ಬಿದನ್ ಚಂದ್ರರಾಯ್“.

ಶ್ರೀಯುತರು, ಓರ್ವ ಸ್ವಾತಂತ್ರ್ಯ ಹೋರಾಟಗಾರ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು, ಅಂತೆಯೇ ಗಾಂಧೀಜಿ ಅವರ ಖಾಸಗಿ ವೈದ್ಯರಾಗಿದ್ದವರು. ಲಂಡನ್ ನಿಂದ F.R.C.S ಹಾಗೂ M.R.C.P ಪದವಿ ಪಡೆದ ನಂತರ ತಮ್ಮ ವೃತ್ತಿ ಜೀವನವನ್ನು ಸ್ವದೇಶದಲ್ಲಿ ಪ್ರಾರಂಭಿಸಿದರು. ಸ್ವಾತಂತ್ರ್ಯಪೂರ್ವದಲ್ಲಿ ಹಲವು ದೇಶಭಕ್ತರಿಗೆ ಸೇವೆ ಸಲ್ಲಿಸಿದರು. ವೈದ್ಯ ವೃತ್ತಿಯನ್ನು ಮೀರಿ ಗಾಂಧೀಜಿಯವರೊಡಗೂಡಿ ಹಲವು ಆಂದೋಲನಗಳಲ್ಲಿ ಭಾಗವಹಿಸಿದ್ದಾರೆ. ಹಾಗೆ ಸ್ವಾತಂತ್ರ್ಯದ ವಿಜಯದಲ್ಲಿ ಪಾತ್ರಧಾರಿಯಾಗಿದ್ದವರು.

೧೯೪೮ರಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡ ಡಾ.ಬಿದನ್, ೧೪ ವರ್ಷಗಳ ತಮ್ಮ ಆಡಳಿತ ಅವಧಿಯಲ್ಲೂ ದಿನಕ್ಕೆ ಎರೆಡು ಗಂಟೆ ರೋಗಿಗಳಿಗೆ ಮುಡಿಪಾಗಿಟ್ಟರು. ಹಾಗೆಯೇ ತಮ್ಮ ಸೇವೆಗೆ ಸಲಹಾ ಶುಲ್ಕವನ್ನು ಅಪೇಕ್ಷಿಸುತ್ತಿರಲಿಲ್ಲ. ಉಚಿತ ಸೇವೆ ಸಲ್ಲಿಸುತ್ತಿದ್ದರು. ಡಾ.ಬಿ.ಸಿ ರಾಯ್ ಅವರ ಹೃದಯಪೂರ್ವ ಸೇವೆಗೆ ಹಾಗೂ ಅವರನ್ನು ಮಾದರಿಯಾಗಿ ಕಾಣುವ ಎಲ್ಲ ವೈದ್ಯ ವೃಂದರಿಗೆ ಕೃತಜ್ಞರಾಗುವ ದಿನ ಇಂದು.

ಇಂದು ಹಲವು ಮಾರ್ಗಗಳ ಮೂಲಕ ಐಶಾರಮಿನ ಜೀವನ ನಡೆಸಲು ಅವಕಾಶಗಳನ್ನು ಹುಡುಕುವ ಜನರ ಮಧ್ಯದಲ್ಲಿ ತಮ್ಮ ಜೀವನದ ಸಮಯವನ್ನು ಜನರಿಗೋಸ್ಕರ ಮುಡಿಪಾಗಿಟ್ಟು ಸೇವೆ ಸಲ್ಲಿಸುವವರು ವೈದ್ಯರು. ವೀಕ್ ಎಂಡ್ ಬಂದರೆ ಹಾಯಾಗಿ ಕಾಲ ಕಳೆಯುವ ಜನರ ಮಧ್ಯ ವೀಕೆಂಡ್ ಕಾಣದೆ ಕ್ಲಿನಿಕ್ ನಲ್ಲಿ ನಿರತವಾಗಿರುತ್ತಾರೆ. ಆಸ್ಪತ್ರೆಯಲ್ಲಿ ಕಾಣುವ ನೋವು, ಗದ್ದಲ, ರೋಗಗಳ ನಡುವೆಯೂ ಬಂದೆಲ್ಲ ರೋಗಿಗಳನ್ನು ಬಹಳ ಸಂಯಮ ಪ್ರೀತಿ ಶಾಂತದೃಷ್ಟಿಯಿಂದ ಕಾಣುವ ವೈದ್ಯರ ಮನೋಭಾವ ನಿಜವಾಗಿ ಮೆಚ್ಚಬೇಕಾದ ಸಂಗತಿ. ಇಂತಹ ವೈದ್ಯ ವೃತ್ತಿಗೆ ನಾವು ಋಣಿಯಾಗಲೇಬೇಕು.

ಕೋವಿಡ್-19 ವಿಚಾರದಲ್ಲಿ ಗಮನಿಸಿದರೆ, ಎಷ್ಟೋ ವೈದ್ಯರು ವಾರಗಟ್ಟಲೆ ಮನೆ ಸೇರದೆ ತಮ್ಮವರಿಂದ ಹೊರ ಉಳಿದಿದ್ದಾರೆ. ನಿರಂತರ ಸೇವೆಯಲ್ಲಿ ತೊಡಗಿದ್ದಾರೆ. ಜೀವದ ಭಯವಿಲ್ಲದೆ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಇನ್ನು ಅದೆಷ್ಟೋ ಜನ ಸ್ವರಕ್ಷಣೆ ಇಲ್ಲದೆ ಸಾವನ್ನಪ್ಪಿದ್ದಾರೆ. ಸೇವೆಯ ಪ್ರತಿಜ್ಞೆಯ ಸ್ವೀಕರಿಸಿ ವೃತ್ತಿಗೆ ನ್ಯಾಯ ಒದಗಿಸುತ್ತಿರುವ ಎಲ್ಲಾ ವೈದ್ಯರಿಗೆ ಸಲಾಮ್.

ವೈದ್ಯನಾದವನಿಗೆ ಹದ್ದಿನ ಕಣ್ಣು, ಸಿಂಹದ ಹೃದಯ, ಅಂತೆಯೇ ಹೆಣ್ಣಿನ ಕೋಮಲ ತಾಯಿ ಮನಸ್ಸು ಇರುತ್ತದೆಯಂತೆ. ಎಷ್ಟು ಅರ್ಥಗರ್ಭಿತ ನುಡಿ. ಈ ಮೂರು ಇದ್ದಲ್ಲಿ ಮಾತ್ರ ಒಬ್ಬ ವ್ಯಕ್ತಿ ಈ ವೃತ್ತಿಗೆ ಸೂಕ್ತ ಎನ್ನುತ್ತಾರೆ. ವೈದ್ಯ ಮಾಡಬಹುದಾದ ಒಂದು ತಪ್ಪು ಒಂದು ಕುಟುಂಬಕ್ಕೆ ಕುತ್ತಾಗಬಹುದು. ಇಂತಹ ತಪ್ಪು ವೈದ್ಯರಿಂದ ಆಗದಿರಲಿ. “ವೈದ್ಯೋ ನಾರಾಯಣೋ ಹರಿಃ” ಎನ್ನುವ ಮಾತು ಕೊನೆಯಾಗದಿರಲಿ.
-ಮನೀಷಾ ಮದುವೆಗದ್ದೆ

Leave a Reply

Your email address will not be published.