ಹೈಲೈಟ್ಸ್‌:

  • ಲಾಕ್‌ಡೌನ್ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧಾರ ಪ್ರಕಟ
  • ಬೆಂಗಳೂರು ಸೇರಿದಂತೆ ವಿವಿಧೆಡೆ ನಿರ್ಬಂಧ ಸಡಿಲ
  • 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ನಿಯಮ ಮುಂದುವರಿಕೆ

ಬೆಂಗಳೂರು: ಸುಮಾರು ಒಂದು ತಿಂಗಳವರೆಗಿನ ಕಠಿಣ ಲಾಕ್‌ಡೌನ್ ಬಳಿಕ ರಾಜ್ಯ ಸರಕಾರ ಅನ್‌ಲಾಕ್ ಪ್ರಕ್ರಿಯೆಯನ್ನು ಆರಂಭಿದೆ. ಆದರೆ ಕೋವಿಡ್ 19 ಪ್ರಕರಣಗಳು ಇಳಿಕೆಯಾಗದ 11 ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಗುರುವಾರ ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಲಾಕ್‌ಡೌನ್ ಸಡಿಲಗೊಳಿಸುವ ನಿರ್ಧಾರವನ್ನು ಪ್ರಕಟಿಸಿದರು. ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ವಸ್ತುಗಳ ಖರೀದಿಗೆ ಇದ್ದ ಸಮಯದ ಮಿತಿಯನ್ನು ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿಸ್ತರಿಸಲಾಗಿದೆ ಎಂದು ಅವರು ಹೇಳಿದರು.

ಆದರೆ, ಬೆಂಗಳೂರಿನಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದೆ. ಸಂಜೆ 7 ಗಂಟೆಯಿಂದ ಬೆಳಗಿನ 5ರವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ. ಜತೆಗೆ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ತರಕಾರಿಗಳು, ದಿನಸಿ ಹಾಗೂ ಇತರೆ ಅಗತ್ಯ ವಸ್ತುಗಳ ಖರೀದಿ, ಬೀದಿ ಬದಿ ವ್ಯಾಪಾರಿಗಳಿಗೆ ಮಧ್ಯಾಹ್ನ 2ರವರೆಗೂ ಅವಕಾಶ ನೀಡಲಾಗಿದೆ.

ಎಲ್ಲ ಕಾರ್ಖಾನೆಗಳು ಶೇ 50ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಕೆಲಸ ಮಾಡಬಹುದಾಗಿದೆ. ಗಾರ್ಮೆಂಟ್‌ಗಳಿಗೆ ಶೇ 30ರಷ್ಟು ಸಾಮರ್ಥ್ಯದೊಂದಿಗೆ ಕೆಲಸ ಮಾಡಲು ಅವಕಾಶ ನೀಡಲಾಗಿದೆ. ಮದ್ಯದಂಗಡಿಗಳಲ್ಲಿ ಮಧ್ಯಾಹ್ನ 2ರವರೆಗೂ ಪಾರ್ಸೆಲ್ ಕೊಂಡೊಯ್ಯಲು ಸಮಯ ವಿಸ್ತರಿಸಲಾಗಿದೆ. ಎಲ್ಲ ನಿರ್ಮಾಣ ಘಟಕಗಳ ಆರಂಭಕ್ಕೆ, ಸಿಮೆಂಟ್, ಸ್ಟೀಲ್ ಅಂಗಡಿಗಳನ್ನು ತೆರೆಯುವುದು ಸೇರಿದಂತೆ ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಅನುಮತಿ ಕೊಡಲಾಗಿದೆ.

ಬಿಎಂಟಿಸಿ ಹಾಗೂ ಕೆಎಸ್ಸಾರ್ಟಿಸಿ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ. ಮೆಟ್ರೋ ಸಂಚಾರವೂ ಆರಂಭವಾಗುವುದಿಲ್ಲ. ಆದರೆ ಆಟೊ, ಟ್ಯಾಕ್ಸಿಗಳ ಓಡಾಟಕ್ಕೆ ಅನುಮತಿ ಕೊಡಲಾಗುವುದು. ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಮುಂದುವರಿಸಲಾಗಿದೆ. ಜನರು ಬೆಳಿಗ್ಗೆ 10 ಗಂಟೆಯವರೆಗೆ ಉದ್ಯಾನಗಳಲ್ಲಿ ವಾಯುವಿಹಾರಕ್ಕೆ ತೆರಳಲು ನಿರ್ಬಂಧವಿಲ್ಲ. ಅಂತರ್ ಜಿಲ್ಲೆ ಓಡಾಟಕ್ಕೆ ಅಡ್ಡಿಯಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.

ಆದರೆ ಜೂನ್ 14ರಿಂದ ಜೂನ್ 21ರವರೆಗೆ 11ಜಿಲ್ಲೆಗಳಲ್ಲಿ ಲಾಕ್‌ಡೌನ್ ಮುಂದುವರಿಯಲಿದೆ. ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ಚಾಮರಾಜನಗರ, ಬೆಳಗಾವಿ, ಹಾಸನ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರಗಳಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗಿದೆ. ಈ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಕ್ರಮ ತೆಗೆದುಕೊಳ್ಳಲು ಅಧಿಕಾರ ನೀಡಲಾಗಿದೆ ಎಂದು ಹೇಳಿದರು.

ಜನರು ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವಂತಹ ಶಿಷ್ಟಾಚಾರಗಳ ಪಾಲನೆಯನ್ನು ಮುಂದುವರಿಸಬೇಕು. ಇದೆಲ್ಲ ನಮ್ಮ ನಿರೀಕ್ಷೆಯಂತೆ ತಹಬದಿಗೆ ಬಂದರೆ ಇನ್ನಷ್ಟು ವಿನಾಯಿತಿ ನೀಡಲು ಅನುಕೂಲವಾಗುತ್ತದೆ ಎಂದರು.Source link

Leave a Reply

Your email address will not be published.