ಹೈಲೈಟ್ಸ್‌:

  • ಭಾರತ-ಪಾಕಿಸ್ತಾನ ತಂಡಗಳ ಸಂಮಿಶ್ರ ತಂಡ ಕಟ್ಟಿದ ಪಾಕ್‌ನ ಮಾಜಿ ಆಲ್‌ರೌಂಡರ್‌.
  • ಬ್ಯಾಟಿಂಗ್‌ ವಿಭಾಗದಲ್ಲಿ ಭಾರತೀಯರದ್ದೇ ಪ್ರಾಬಲ್ಯ, ಬೌಲಿಂಗ್‌ನಲ್ಲಿ ಪಾಕ್‌ ತಾರೆಗಳು.
  • ನಾಯಕತ್ವ ಮತ್ತು ವಿಕೆಟ್‌ಕೀಪಿಂಗ್ ಎರಡನ್ನೂ ಧೋನಿಗೆ ನೀಡಿದ ಯಾಸಿರ್ ಅರಾಫತ್.

ಬೆಂಗಳೂರು: ಕ್ರಿಕೆಟ್‌ ಜಗತ್ತಿನಲ್ಲಿ ಭಾರತ-ಪಾಕಿಸ್ತಾನ ನಡುವಣ ಪಂದ್ಯಗಳಿಗೆ ವಿಶೇಷ ಸ್ಥಾನವಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವೆ ಈಗ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲವಾದರೂ, ಐಸಿಸಿ ಟೂರ್ನಿಗಳಲ್ಲಿ ಮುಖಾಮುಖಿಯಾಗುವುದನ್ನು ವೀಕ್ಷಿಸಲು ಕ್ರಿಕೆಟ್ ಪ್ರಿಯರು ತುದಿಗಾಲಲ್ಲಿ ನಿಂತಿರುತ್ತಾರೆ.

ಅಂದಹಾಗೆ ಕ್ರಿಕೆಟ್‌ ಜಗತ್ತಿನಲ್ಲಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಅಂತೆಯೇ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ನಡುವಣ ವೈರತ್ವ ಜನಾಕರ್ಷಣೀಯವಾಗಿದೆ, ಆದರೆ ಭಾರತ-ಪಾಕಿಸ್ತಾನ ನಡುವಣ ಕಾದಾಟ ಇವೆಲ್ಲವನ್ನೂ ಮೀರಿಸುವಂಥದ್ದಾಗಿದೆ. ಹೀಗಾಗಿ ಇತ್ತಂಡಗಳು ಮುಖಾಮುಖಿಯಾದ ಸಮಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಕಟ್ಟಿಟ್ಟ ಬುತ್ತಿ.

ಆದರೆ, 2009ರಲ್ಲಿ ಮುಂಬೈ ಮೇಲೆ ನಡೆದ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವೆ ಯಾವುದೇ ದ್ವಿಪಕ್ಷೀಯ ಕ್ರಿಕೆಟ್‌ ಸರಣಿಗಳು ನಡೆಸಲಾಗಿಲ್ಲ. ಕೇವಲ 2012ರಲ್ಲಿ ಸೀಮಿತ ಓವರ್‌ಗಳ ಸರಣಿ ನಡೆಸಲಾಯಿತಾದರೂ, ನಂತರ ಎರಡೂ ರಾಷ್ಟ್ರಗಳ ನಡುವಣ ಕ್ರಿಕೆಟ್‌ ಚಟುವಟಿಕೆಗೆ ತಿಲಾಂಜಲಿ ಹಾಡಲಾಗಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರವೇ ಎರಡೂ ತಂಡಗಳು ಮುಖಾಮುಖಿ ಆಗುತ್ತಾ ಬಂದಿವೆ.

ಯುಎಇನಲ್ಲಿ ಐಪಿಎಲ್, ಪಂಜಾಬ್‌ಗೆ ಈ 5 ಸ್ಟಾರ್‌ಗಳ ಸೇವೆ ಕಳೆದುಕೊಳ್ಳುವ ಆತಂಕ!

ಅಂದಹಾಗೆ ಪಾಕಿಸ್ತಾನ ವಿರುದ್ಧ ಭಾರತ ತಂಡ ವಿಶೇಷ ದಾಖಲೆ ಒಂದನ್ನು ಹೊಂದಿದೆ. ವಿಶ್ವಕಪ್ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಪಾಕ್‌ ವಿರುದ್ಧ ಸೋತಿದ್ದೇ ಇಲ್ಲ. ಈ ಬಗ್ಗೆ ಯೂಟ್ಯೂಬ್ ಕಾರ್ಯಕ್ರಮ ಒಂದರಲ್ಲಿ ಮಾತಿಗಿಳಿದಿರುವ ಪಾಕಿಸ್ತಾನ ತಂಡ ಮಾಜಿ ಆಲ್‌ರೌಂಡರ್‌ ಯಾಸಿರ್‌ ಅರಾಫತ್‌, ಈ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ದಿಗ್ಗಜ ಆಟಗಾರರನ್ನು ಒಳಗೊಂಡ ಸಂಮಿಶ್ರ ಟಿ20 ತಂಡವನ್ನೂ ಕಟ್ಟಿದ್ದಾರೆ.

“ಭಾರತ ಮತ್ತು ಪಾಕಿಸ್ತಾನದ ಸಂಮಿಶ್ರ ತಂಡ ರಚಿಸುವುದಾದರೆ ನಾನು ಮೊದಲಿಗೆ ಎಂಎಸ್‌ ಧೋನಿ ಅವರನ್ನು ತೆಗೆದುಕೊಳ್ಳುತ್ತೇನೆ,” ಎಂದು ಯಾವುದೇ ಅಂಜಿಕೆ ಇಲ್ಲದೆ ಹೇಳಿಕೊಂಡಿರುವ ಅರಾಫತ್‌, ಇದೇ ವೇಳೆ ತಮ್ಮ ತಂಡಕ್ಕೆ ಪಾಕಿಸ್ತಾನದ ಮೂವರು ವೇಗಿಗಳನ್ನು ತೆಗೆದುಕೊಂಡಿದ್ದಾರೆ.

“ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಆಡಿರುವಷ್ಟು ಕ್ರಿಕೆಟ್‌ ಇಮ್ರಾನ್‌ ನಾಝಿರ್‌ ಆಡಿಲ್ಲ. ಹೀಗಾಗಿ ನಾಝಿರ್‌ ಬದಲು ನಾನು ನನ್ನ ತಂಡಕ್ಕೆ ರೋಹಿತ್ ಮತ್ತು ವಿರಾಟ್‌ ಅವರನ್ನು ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಆಯ್ಕೆ ಮಾಡಿಕೊಳ್ಳುತ್ತೇನೆ,” ಎಂದು ಹೇಳಿದ್ದಾರೆ.

‘2007ರಲ್ಲಿ ಧೋನಿಯಲ್ಲ ನಾನು ಕ್ಯಾಪ್ಟನ್ ಆಗಬೇಕಿತ್ತು’, ಎಂದ ಯುವಿ!

“ಮೂರನೇ ಕ್ರಮಾಂಕದ ಬ್ಯಾಟಿಂಗ್‌ಗೆ ಮೊಹಮ್ಮದ್‌ ಹಫೀಝ್ ಅವರನ್ನು ತೆಗೆದುಕೊಳ್ಳುತ್ತೇನೆ. ಮಧ್ಯಮ ಕ್ರಮಾಂಕದಲ್ಲಿ ಅಂದರೆ 4ನೇ ಮತ್ತು 5ನೇ ಕ್ರಮಾಂಕ ಸಲುವಾಗಿ ಯುವರಾಜ್ ಸಿಂಗ್ ಮತ್ತು ಉಮರ್‌ ಅಕ್ಮಲ್‌ ನಂತರ ಎಂಎಸ್‌ ಧೋನಿ ಇರಲಿದ್ದಾರೆ,” ಎಂದು ಹೇಳಿರುವ ಯಾಸಿರ್‌, ತಂಡದ ಸ್ಪಿನ್‌ ಬೌಲಿಂಗ್‌ ಜವಾಬ್ದಾರಿಯನ್ನು ಶಾಹಿದ್‌ ಅಫ್ರಿದಿ ಮತ್ತು ಸಯೀದ್ ಅಜ್ಮಲ್‌ಗೆ ವಹಿಸಿದ್ದಾರೆ.

“ಧೋನಿ ಗುಣಮಟ್ಟದ ಆಟಗಾರ. ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಬಲಿಷ್ಠವಾಗಿದ್ದಾರೆ. ಜೊತೆಗೆ ಅಷ್ಟೆ ಉತ್ತಮ ವ್ಯಕ್ತಿ ಕೂಡ. ಆಟಗಾರರನ್ನು ನಿರ್ವಹಿಸುವ ಕಲೆ ಅವರಲ್ಲಿದೆ. ಆಟಗಾರರ ಜೊತೆಗಿನ ಅವರ ಒಡನಾಟ ಅದ್ಭುತ. ತಂಡ ದೊಡ್ಡ ಟೂರ್ನಿಗಳಲ್ಲಿ ಗೆಲ್ಲುತ್ತಿದೆ ಎಂದರೆ ಅಲ್ಲಿ ನಾಯಕ ಸಾಮರ್ಥ್ಯ ಮೆಚ್ಚಿಕೊಳ್ಳಬೇಕಾಗುತ್ತದೆ. ಧೋನಿ ಆಟಗಾರರನ್ನು ಬೆಂಬಲಿಸುವುದನ್ನು ನಾನು ಹೆಚ್ಚು ಕಂಡಿದ್ದೇನೆ. ಅವರು ಎಲ್ಲಿಯೂ ಯಾವ ಆಟಗಾರನ ವಿರುದ್ಧವೂ ದೂರು ಹೇಳಿರುವುದನ್ನು ನಾನು ಕಂಡಿಲ್ಲ,” ಎಂದಿದ್ದಾರೆ.

ಅರಾಫತ್ ಆಯ್ಕೆಯ ಇಂಡೊ-ಪಾಕ್‌ ಕ್ರಿಕೆಟ್‌ ತಂಡ ಹೀಗಿದೆ
1. ರೋಹಿತ್‌ ಶರ್ಮಾ (ಓಪನರ್‌)
2. ವಿರಾಟ್ ಕೊಹ್ಲಿ (ಓಪನರ್)
3. ಮೊಹಮ್ಮದ್‌ ಹಫೀಝ್ (ಬ್ಯಾಟ್ಸ್‌ಮನ್)
4. ಯುವರಾಜ್‌ ಸಿಂಗ್‌ (ಆಲ್‌ರೌಂಡರ್‌)
5. ಉಮರ್ ಅಕ್ಮಲ್ (ಬ್ಯಾಟ್ಸ್‌ಮನ್‌)
6. ಎಂಎಸ್‌ ಧೋನಿ (ವಿಕೆಟ್‌ಕೀಪರ್‌/ಬ್ಯಾಟ್ಸ್‌ಮನ್‌/ನಾಯಕ)
7. ಶಾಹಿದ್‌ ಅಫ್ರಿದಿ (ಆಲ್‌ರೌಂಡರ್‌)
8. ಸೊಹೇಲ್‌ ತನ್ವೀರ್‌ (ಎಡಗೈ ವೇಗಿ)
9. ಉಮರ್‌ ಗುಲ್ (ಬಲಗೈ ವೇಗಿ)
10. ಜಸ್‌ಪ್ರೀತ್ ಬುಮ್ರಾ (ಬಲಗೈ ವೇಗಿ)
11. ಸಯೀದ್ ಅಜ್ಮಲ್ (ಆಫ್‌ ಸ್ಪಿನ್ನರ್‌)Source link

Leave a Reply

Your email address will not be published.