ಹೈಲೈಟ್ಸ್‌:

  • ಮೇ 18ರಂದು ನಂಜನಗೂಡಿನಲ್ಲಿ ಪೂಜೆ ಸಲ್ಲಿಸಿದ್ದ ಬಿವೈ ವಿಜಯೇಂದ್ರ
  • ಕೋವಿಡ್ 19 ಲಾಕ್‌ಡೌನ್ ನಡುವೆಯೂ ದೇವಸ್ಥಾನಕ್ಕೆ ತೆರಳಿದ್ದಕ್ಕೆ ಆಕ್ಷೇಪ
  • ಜನಸಾಮಾನ್ಯರಿಗೆ ಒಂದು, ರಾಜಕಾರಣಿಗಳಿಗೆ ಇನ್ನೊಂದು ನಿಯಮ ಇರಲು ಸಾಧ್ಯವೇ?
  • ಕೋವಿಡ್ ನಿರ್ಬಂಧವಿರುವಾಗ ದೇವಸ್ಥಾನಕ್ಕೆ ಹೇಗೆ ಪ್ರವೇಶ ನೀಡಬಹುದು?
  • ಜಿಲ್ಲಾಧಿಕಾರಿ ನೀಡಿದ ತನಿಖಾ ವರದಿ ಸಲ್ಲಿಸುವಂತೆ ಸರಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಸಾರ್ವಜನಿಕರಿಗೆ ಒಂದು ನಿಯಮ, ರಾಜಕೀಯ ಮುಖಂಡರಿಗೆ ಒಂದು ನಿಯಮ ಇರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಮಗ ಬಿವೈ ವಿಜಯೇಂದ್ರ ಅವರಿಗೆ ನೀಡಿರುವ ‘ವಿಶೇಷ ವಿನಾಯಿತಿ’ಯ ಕುರಿತು ರಾಜ್ಯ ಸರಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯಾದ್ಯಂತ ಕಠಿಣ ಲಾಕ್‌ಡೌನ್ ಜಾರಿಯಲ್ಲಿರುವಾಗ ಬಿವೈ ವಿಜಯೇಂದ್ರ ಅವರು ಮೇ 18ರಂದು ಮೈಸೂರಿನ ನಂಜನಗೂಡಿನಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಜನಸಾಮಾನ್ಯರು ಓಡಾಡದಂತೆ ನಿರ್ಬಂಧಗಳನ್ನು ವಿಧಿಸಿರುವ ಸಂದರ್ಭದಲ್ಲಿ ವಿಜಯೇಂದ್ರ ಅವರು ನಿಯಮಗಳನ್ನು ಉಲ್ಲಂಘಿಸಿ ಅಲ್ಲಿಗೆ ತೆರಳಲು ಅವಕಾಶ ನೀಡಿದ್ದು, ವ್ಯಾಪಕ ಟೀಕೆ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಬಗ್ಗೆ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ಮೌಖಿಕ ಅಭಿಪ್ರಾಯ ಹೊರಹಾಕಿದೆ.
ಬಿಜೆಪಿಯಲ್ಲಿ ಒಳ ರಾಜಕೀಯ ಬೇಗುದಿ, ಮಠ ಮಾನ್ಯಗಳಿಗೆ ವಿಜಯೇಂದ್ರ ರೌಂಡ್ಸ್
‘ಕೋವಿಡ್ 19 ಲಾಕ್‌ಡೌನ್ ನಡುವೆ ದೇವಸ್ಥಾನಗಳಿಗೆ ಪ್ರವೇಶ ಇಲ್ಲ ಎಂಬ ನಿಯಮ ಎಲ್ಲ ನಾಗರಿಕರಿಗೂ ಅನ್ವಯವಾಗಬೇಕು. ನೀವು ಅದನ್ನು ಒಬ್ಬ ವ್ಯಕ್ತಿಗೆ ಅನ್ವಯಿಸಲು ಸಾಧ್ಯವಿಲ್ಲ. ರಾಜಕೀಯ ಮುಖಂಡರಿಗೆ ಒಂದು ನಿಯಮ ಮತ್ತು ನಾಗರಿಕರಿಗೆ ಇನ್ನೊಂದು ನಿಯಮ ಇರಲು ಸಾಧ್ಯವಿಲ್ಲ’ ಎಂದು ಮುಖ್ಯ ನ್ಯಾಯಮೂರ್ತಿ ತೀಕ್ಷ್ಣವಾಗಿ ಹೇಳಿದರು.

ಜನಸಾಮಾನ್ಯರು ಲಾಕ್‌ಡೌನ್ ನಿರ್ಬಂಧಗಳಿಗೆ ಬದ್ಧರಾಗಿರಬೇಕಾದಾಗ ವಿಜಯೇಂದ್ರ ಪ್ರಯಾಣ ಮಾಡಿರುವುದು 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ವಕೀಲ ಜಿಆರ್ ಮೋಹನ್ ಸಲ್ಲಿಸಿದ್ದ ಅರ್ಜಿಯ ಪರಿಶೀಲನೆ ವೇಳೆ ಹೈಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ವಿಜಯೇಂದ್ರ ಅವರು ಅಧಿಕೃತ ಕೋವಿಡ್ 19 ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಮೈಸೂರಿನಿಂದ ದೇವಸ್ಥಾನಕ್ಕೆ ತೆರಳಿದ್ದರು ಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ್ ನಾವಡಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು.
ಲಾಕ್‌ಡೌನ್‌ ಉಲ್ಲಂಘನೆ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕೈಗೊಂಡ ಕ್ರಮವೇನು? ಹೈಕೋರ್ಟ್‌ ಪ್ರಶ್ನೆ
‘ಕೋವಿಡ್ ಸಂಬಂಧಿ ಕೆಲಸಗಳಿಗೆ ನೀವು ದೇವಸ್ಥಾನದ ಒಳಗೆ ಪ್ರವೇಶ ಮಾಡುವ ಅಗತ್ಯವಿಲ್ಲ. ದೇವಸ್ಥಾನಗಳ ಒಳಗೆ ಜನರಿಗೆ ಪ್ರವೇಶ ನೀಡಲಾಗುತ್ತಿದೆಯೇ?’ ಎಂದು ಕೋರ್ಟ್ ಪ್ರಶ್ನಿಸಿತು.

ಇದಕ್ಕೆ ಎಜಿ ಅವರಿಂದ ‘ಇಲ್ಲ’ ಎಂಬ ಉತ್ತರ ಬಂದಿತು. ‘ಇದು ತಪ್ಪು ಸಂದೇಶಗಳನ್ನು ನೀಡುತ್ತಿದೆ ಎಂದು ನಾವು ಹೇಳುತ್ತೇವೆ’ ಎಂದು ಕೋರ್ಟ್ ಹೇಳಿತು.
ನಂಜನಗೂಡು ದೇವಸ್ಥಾನದಲ್ಲಿ ಬಿ.ವೈ. ವಿಜಯೇಂದ್ರ ಪೂಜೆ: ಎಫ್‌ಐಆರ್‌ ದಾಖಲಿಸುವ ಅಗತ್ಯವಿದೆ ಎಂದ ಹೈಕೋರ್ಟ್‌
ವಕೀಲ ಜಿಆರ್ ಮೋಹನ್ ಅಡಕ ಮಾಡಿರುವ ಚಿತ್ರವು 2018ರದ್ದು ಎಂದು ನಾವಡಗಿ ಪ್ರತಿಪಾದಿಸಿದರು. ಈ ವಿಚಾರದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿರುವ ಮೈಸೂರು ಜಿಲ್ಲಾಧಿಕಾರಿ ನೀಡಿರುವ ವರದಿಯ ದಾಖಲೆಯನ್ನು ಸಲ್ಲಿಸುವಂತೆ ರಾಜ್ಯ ಸರಕಾರಕ್ಕೆ ಕೋರ್ಟ್ ಸೂಚನೆ ನೀಡಿತು. ಬಳಿಕ ವಿಚಾರಣೆಯನ್ನು ಜೂನ್ 18ಕ್ಕೆ ಮುಂದೂಡಲಾಯಿತು.Source link

Leave a Reply

Your email address will not be published.