ಹೈಲೈಟ್ಸ್‌:

  • ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಲು ಆಗ್ರಹಿಸಿ ರೈತ ಸಂಘಟನೆಗಳ ಪ್ರತಿಭಟನೆ
  • ಜಂತರ್ ಮಂತರ್‌ನಲ್ಲಿ ಸೀಮಿತ ಸಂಖ್ಯೆಯ ರೈತರಿಗೆ ಪ್ರವೇಶಾವಕಾಶ
  • ಸಿಂಘು ಗಡಿಯಿಂದ ರೈತರಿಗೆ ಪೊಲೀಸರ ಬೆಂಗಾವಲು

ಹೊಸದಿಲ್ಲಿ: ಮುಂಗಾರು ಅಧಿವೇಶನದ ನಡುವೆ ಕೇಂದ್ರ ಸರಕಾರದ ಹೊಸ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ರೈತರು ಗುರುವಾರ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಕೃಷಿ ಕಾಯ್ದೆ ರದ್ದತಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲು ರೈತರಿಗೆ ದಿಲ್ಲಿ ಪೊಲೀಸರು ಅನುಮತಿ ನೀಡಿದ್ದಾರೆ.

ಕಾಯ್ದೆಗಳ ವಿರುದ್ಧ ದಿಲ್ಲಿಯ ಸುತ್ತಮುತ್ತಲೂ ಅನೇಕ ಭಾಗಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿವೆ. ಈ ವಿಭಿನ್ನ ಪ್ರತಿಭಟನಾ ಸ್ಥಳಗಳಿಂದ ರೈತರು ಸಿಂಘು ಗಡಿಯಲ್ಲಿ ಸೇರಲಿದ್ದು, ಅಲ್ಲಿಂದ ಜಂತರ್ ಮಂತರ್‌ನತ್ತ ಮೆರವಣಿಗೆ ಸಾಗಲಿದ್ದಾರೆ. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಸಿಂಘು ಗಡಿ ಮತ್ತು ಜಂತರ್ ಮಂತರ್ ಪ್ರದೇಶದಲ್ಲಿ ಭಾರಿ ಭದ್ರತೆ ನಿಯೋಜಿಸಲಾಗಿದೆ.
ಕೃಷಿ ಕಾಯ್ದೆ ಪ್ರತಿಭಟನೆ: ತಮ್ಮದೇ ವಕೀಲರ ಸಮಿತಿ ರಚಿಸುವ ಪೊಲೀಸರ ಪ್ರಸ್ತಾಪ ತಿರಸ್ಕರಿಸಿದ ಕೇಜ್ರಿವಾಲ್ ಸರಕಾರ
ಪ್ರತಿಭಟನೆಯಲ್ಲಿ ಭಾಗವಹಿಸುವ ಜನರ ಸಂಖ್ಯೆಗೆ ಮಿತಿ ಹೇರಲಾಗಿದೆ. ಸಂಯುಕ್ತ ಕಿಸಾನ್ ಮೋರ್ಚಾದ (ಎಸ್‌ಕೆಎಂ) ಗರಿಷ್ಠ 200 ಸದಸ್ಯರು, ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ (ಕೆಎಂಎಸ್‌ಸಿ) ಗರಿಷ್ಠ ಆರು ಮಂದಿಗಿಂತ ಹೆಚ್ಚಿಲ್ಲದಂತೆ ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಲಾಗಿದೆ. ಪ್ರತಿ ದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿದೆ.

ಎಲ್ಲಾ ಕೋವಿಡ್ 19 ಶಿಷ್ಟಾಚಾರಗಳನ್ನು ಪಾಲಿಸಬೇಕು ಎಂಬ ಷರತ್ತಿನೊಂಡಿಗೆ ದಿಲ್ಲಿ ಸರಕಾರ ಕೂಡ ರೈತರ ಪ್ರತಿಭಟನೆಗೆ ಅನುಮತಿ ನೀಡಿದೆ.

ಸಿಂಘು ಗಡಿಯಿಂದ ಬಸ್‌ಗಳಲ್ಲಿ ಜಂತರ್ ಮಂತರ್‌ನ ಸೂಚಿತ ಪ್ರತಿಭಟನಾ ಸ್ಥಳಕ್ಕೆ ರೈತರನ್ನು ಪೊಲೀಸ್ ಬೆಂಗಾವಲಿನಲ್ಲಿ ಕರೆತರಲಾಗುವುದು. ಗುರುತಿನ ಚೀಟಿ ಹೊಂದಿರುವ ರೈತರಿಗೆ ಮಾತ್ರವೇ ಪ್ರತಿಭಟನಾ ಸ್ಥಳಕ್ಕೆ ಪ್ರವೇಶ ನೀಡಲಾಗುವುದು. ಸಂಜೆ 5 ಗಂಟೆಯ ವೇಳೆಗೆ ರೈತರನ್ನು ಪುನಃ ಪೊಲೀಸರ ಬೆಂಗಾವಲಿನಲ್ಲಿ ಮರಳಿ ಕರೆದುಕೊಂಡು ಹೋಗಲಾಗುವುದು ಎಂದು ದಿಲ್ಲಿ ಪೊಲೀಸರ ಹೇಳಿಕೆ ತಿಳಿಸಿದೆ.Source link

Leave a Reply

Your email address will not be published.